ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಂದಿನಿಂದ ಆರುದಿನಗಳ ಪರ್ಯಂತ ನಡೆಯಲಿರುವ 30ನೇ ವರ್ಷದ ಆಳ್ವಾಸ್ ವಿರಾಸತ್-2024 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿರುವ ಬಹುವಿಧ ಆಕರ್ಷಣೆಗಳಲ್ಲಿ ವೈವಿಧ್ಯಮಯ ಗೊಂಬೆಗಳೇ ವೀಕ್ಷಕರನ್ನು ಸ್ವಾಗತಿಸಲು ಸಜ್ಜಾಗಿವೆ.
ಕೃಷಿ ಸಿರಿ ವೇದಿಕೆಯಿಂದ ತೊಡಗಿ ವಿದ್ಯಾಗಿರಿಯೆಲ್ಲೆಡೆ ನಾಡಿನ ಸಾಂಸ್ಕೃತಿಕ ಲೋಕದ ವೈಭವವನ್ನು ತೆರೆದಿಡುವ ಬಹುವಿಧ ಗೊಂಬೆಗಳು, ಮೂರ್ತಿಗಳನ್ನು ಅಣಿಗೊಳಿಸಲಾಗಿದೆ.
ಪ್ರವೇಶ ಭಾಗದಲ್ಲೇ ಅಸಂಖ್ಯ ತಟ್ಟೀರಾಯಗಳು ಸ್ವಾಗತಿಸುತ್ತಿವೆ. ಮುಂದೆ, ಕೃಷಿಸಿರಿ ವೇದಿಕೆಯತ್ತ ಸಾಗಿದಾಗ, ಸೈನಿಕರು, ಕನ್ನಡಾಂಬೆ, ಈಶ್ವರ, ರಾಮ, ಕೃಷ್ಣ, ಆಂಜನೇಯ, ಮಹಿಷಾಸುರ, ಬುದ್ಧ, ಬಸವಣ್ಣ , ಮೀರಾ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಕುವೆಂಪು, ಮೈಸೂರು ಒಡೆಯರ್, ಸಂಗೊಳ್ಳಿ ರಾಯಣ್ಣ ಕೆಂಪೇಗೌಡ ಮೊದಲಾದವರ ಆಳೆತ್ತರದ ಗೊಂಬೆಗಳು ಗೋಚರಿಸುತ್ತವೆ. ಕರ್ನಾಟಕದ ಬಹುಬಗೆಯ ಜಾನಪದ ಹಾಡು, ಕುಣಿತಗಳ ಗೊಂಬೆಗಳ ರಾಶಿಯೇ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತದ ಕನ್ನಡದ ಸಾಹಿತಿಗಳೆಲ್ಲರ ಮೂರ್ತಿಗಳಿವೆ. 24 ತೀರ್ಥಂಕರರ ಮೂರ್ತಿಗಳು, ಗೋಮಟೇಶ್ವರ, ವಿಜಯನಗರದ ಗಣಪತಿ, ಎತ್ತಿನ ಗಾಡಿ, ಭಾರೀ ಗಾತ್ರದ ನಂದಿ, ಶಿವ, ಶಿವಲಿಂಗ, ಕೋಟಿ ಚೆನ್ನಯ, ಮಹಿಷಾಸುರ ಮರ್ಧಿನಿ, ಸಾಲು ಮರದ ತಿಮ್ಮಕ್ಕ, ತುಳಸಿ ಬೊಮ್ಮನ ಗೌಡ, ಮರದ ಗೊಂಬೆಗಳು, ಬಸವಣ್ಣ, ಯಕ್ಷಗಾನ, ದೈವದ ಮೊಗ ಎಲ್ಲವೂ ಕಾಣಿಸುತ್ತಿವೆ.
ಭಾರತದ ವಿವಿಧ ರಾಜ್ಯಗಳ ಪುರುಷರು, ಮಹಿಳೆಯರ ಉಡುಪುಗಳ ವೈವಿಧ್ಯ ಸಾರುವ ಸುಮಾರು ಹತ್ತಡಿ ಎತ್ತರದ ವರ್ಣರಂಜಿತ ಶಿಲ್ಪಗಳು, ನಡುವೆ ಕನ್ನಡಮ್ಮನ ಮೂರ್ತಿ ರಾರಾಜಿಸುತ್ತಿವೆ. ಕಾಡು, ನಾಡಿನ ಪ್ರಾಣಿಗಳಲ್ಲದೆ, ಹೂವಿನಲ್ಲೇ ರೂಪಿಸಿದ ಭಾರೀ ಗಾತ್ರದ ಪ್ರಾಣಿಗಳ ಪ್ರತಿಕೃತಿಗಳು ಗಮನಸೆಳೆಯುತ್ತಿವೆ. ಗುಡ್ಡದಲ್ಲಿ ಬಹುಸಂಖ್ಯೆಯಲ್ಲಿ ವರ್ಣರಂಜಿತ ಬೆರ್ಚಪ್ಪಗಳಿವೆ.
ಮಣ್ಣು, ಮರ, ಲೋಹ,ಸಿಮೆಂಟ್, ಫೈಬರ್, ವೈಟ್‌ಸಿಮೆಂಟ್, ಪೇಪರ್ ಪಲ್ಪ್ ಹೀಗೆ ಬಹುವಿಧ ಮಾಧ್ಯಮಗಳಲ್ಲಿ ರೂಪುಗೊಂಡ ಮೂರ್ತಿಗಳು ಈ ಬಾರಿಯ ವಿರಾಸತ್‌ನ್ನು ಗೊಂಬೆಗಳ ಬೀಡಾಗಿಸಿದೆ. ಎಲ್ಲ ಗೊಂಬೆಗಳನ್ನು ಪರಿಸರ ಪ್ರೀತಿಯ ಹೂಗಳಿಂದ, ಹೂಗಿಡಗಳಿಂದ ಅಲಂಕರಿಸಲಾಗಿದೆ. ಕೆಲವು ಮೂರ್ತಿಗಳನ್ನು ಬೇರೆ ಕಡೆಗಳಿಂದ ತರಲಾಗಿದ್ದು, ಕೆಲವು ಆಳ್ವಾಸ್‌ನಲ್ಲಿಯೇ ನಿರ್ಮಿಸಲಾಗಿದೆ. ಇಲ್ಲಿ ನಿರ್ಮಿಸಿದ್ದನ್ನು ಸಂಗ್ರಹಿಸಿ ಇಡಲಾಗುತ್ತದೆ.