Advertisement

ಕೌಟುಂಬಿಕ ಕಲಹ ಪರಿಹಾರಕ್ಕೆ ಹೋದವ ವಿರಾಗಿಯಾದ!

12:40 PM Jun 10, 2017 | |

ಬೆಂಗಳೂರು: ದಿನ ನಿತ್ಯ ಮನೆಯಲ್ಲಿ ನಡೆಯತ್ತಿದ್ದ ಕಲಹಕ್ಕೆ ಪರಿಹಾರ ಕಂಡುಕೊಳ್ಳಲು, ಮಾನಸಿಕ ನೆಮ್ಮದಿ ಪಡೆಯಲು ಮನೆ ಕೆಲಸದಾಕೆಯ ಸಲಹೆ ಮೇರೆಗೆ ದೇವಾಲಯವೊಂದಕ್ಕೆ ಹೋದ ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬ ಅಲ್ಲಿಂದಾಚೆಗೆ ಲೌಖೀಕ ಜೀವನದಿಂದಲೇ ವಿಮುಖನಾದ ಕಥೆ ಇದು. ಈಗ ಪತ್ನಿ, ಮಕ್ಕಳನ್ನು ತ್ಯಜಿಸಿ ಆಧ್ಯಾತ್ಮದೆಡೆಗೆ ಆಕರ್ಷಿತಾಗಿರುವ ವ್ಯಕ್ತಿ ಸನ್ಯಾಸಿಯಾಗಲು ಹೊರಟಿದ್ದಾನೆ. 

Advertisement

ಗಂಡನ ಈ ವಿಚಿತ್ರ ವರ್ತನೆಗೆ ಬೇಸತ್ತ ಪತ್ನಿ, ಹೇಗಾದರೂ ಪತಿಯ ಮನಪರಿವರ್ತನೆಗೆ ನೆರವು ನೀಡಿರೆಂದು ವನಿತಾ ಸಹಾಯವಾಣಿಯ ಮೊರೆ ಹೋಗಿದ್ದಾರೆ. 
ಸಾಂಸಾರಿಕ ನೌಕೆಯಿಂದ ಸಂಪೂರ್ಣ ಹೊರಬರಲು ಸಿದ್ಧನಾಗಿರುವ ಆತ, ಆಧ್ಯಾತ್ಮಕ ಚಿಂತಕನಾಗಿ ಪತ್ನಿ ಮತ್ತು ಮಕ್ಕಳನ್ನು ತೊರೆಯಲು ಸಿದ್ಧನಾಗಿದ್ದಾನೆ. “ನನ್ನ ಇಡೀ ಆಸ್ತಿಯನ್ನು ಹೆಂಡತಿ ಮಕ್ಕಳ ಹೆಸರಿಗೆ ಬರೆಯುತ್ತೇನೆ. ಆದರೆ, ಅವರ ಸಂಗ ಬೇಡ,’ ಎನ್ನುತ್ತಿದ್ದಾನೆ.

ಆದರೆ, ಪತ್ನಿ ಮಾತ್ರ “ನನಗೆ ಆಸ್ತಿ ಬೇಡ, ಗಂಡನನ್ನು ಉಳಿಸಿಕೊಟ್ಟರೆ ಸಾಕು’ ಎಂದು ಸಹಾಯವಾಣಿಯಲ್ಲಿ ಅಂಗಲಾಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವನಿತಾ ಸಹಾಯವಾಣಿ ಪತಿ ಮತ್ತು ಪತ್ನಿಗೆ ಕೌನ್ಸೆಲಿಂಗ್‌ ಮಾಡಿದೆ. ಆದರೂ ಪತಿರಾಯ ಮಾತ್ರ, ತನ್ನ ನಿಲುವು ಬದಲಿಸದೆ ನಿತ್ಯ ದೇವರು, ದೇವಾಲಯ ಎಂದು ಆದ್ಯಾತ್ಮದಲ್ಲಿ ಮಗ್ನನಾಗಿದ್ದಾನೆ. ಆಧ್ಯಾತ್ಮಕ ಚಿಂತಕನಂತೆ ಬೇರೆಯವರಿಗೂ ಭವಿಷ್ಯ ನುಡಿಯುತ್ತಿದ್ದಾನೆ. 

ಮನೆಕೆಲಸದಾಕೆ ಹೇಳಿದ್ದು ಕೇಳಿದ್ದಕ್ಕೆ ಹೀಗಾಯ್ತು: ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲಕ ಸಾಫ್ಟ್ವೇರ್‌ ಎಂಜಿನಿಯರ್‌ 13 ವರ್ಷ ಹಿಂದೆ ಟೆಕ್ಕಿಯೊಬ್ಬರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ-ಪತ್ನಿ ಇಬ್ಬರೂ ಸಾಫ್ಟ್ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದುದರಿಂದ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆ ನೋಡಿಕೊಳ್ಳಲು ಕೆಲಸದಾಕೆಯನ್ನು ನೇಮಿಸಿಕೊಂಡಿದ್ದರು. 

ಕೆಲ ವರ್ಷಗಳ ನಂತರ ದಂಪತಿ ಮಧ್ಯೆ ಸಣ್ಣ ಪುಟ್ಟ ಕಾರಣಗಳಿಗೂ ಜಗಳವಾಗುತ್ತಿತ್ತು. ಪ್ರತಿನಿತ್ಯ ದಂಪತಿ ಜಗಳವಾಡುತ್ತಿದ್ದುದನ್ನು ನೋಡುತ್ತಿದ್ದ ಮನೆ ಕೆಲಸದಾಕೆ ಒಂದು ದಿನ, “ನಿಮ್ಮಿಬ್ಬರಲ್ಲಿ ಯಾವುದೋ ದೋಷವಿರಬೇಕು. ಆದ್ದರಿಂದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ,’ ಎಂದು ಸಲಹೆ ನೀಡಿದ್ದಳು. ಅದರಂತೆ ದಂಪತಿ ಕೆಲಸದಾಕೆ ಹೇಳಿದ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಮೈ ಮೇಲೆ ದೇವರು ಬರುತ್ತದೆ ಎಂದು ಹೇಳಿಕೊಳ್ಳುತ್ತಿದ್ದ ಅರ್ಚಕನೊಬ್ಬ ದಂಪತಿ ಪರವಾಗಿ ವಿಶೇಷ ಪೂಜೆ ಮಾಡಿಸಿದ್ದ.

Advertisement

ಅಲ್ಲದೆ, ಟಿಕ್ಕಿಗೆ ದಾನ, ಧ್ಯಾನ, ದೇವರ ಪೂಜೆ ಮಾಡುವಂತೆ ತಿಳಿಸಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದ. ಪೂಜಾರಿಯ ಮಾತನ್ನು ಅಕ್ಷರಶಃ ಪಾಲಿಸಿದ ಪತಿ ನಿತ್ಯ 5-6 ಗಂಟೆ ಪೂಜೆಯಲ್ಲಿ ತೊಡಗಿಕೊಳ್ಳುತ್ತಿದ್ದ. ಜತೆಗೆ ತನ್ನ ಉದ್ಯೋಗಕ್ಕೂ ರಾಜೀನಾಮೆ ನೀಡಿ, ಆಧ್ಯಾತ್ಮಿಕ ಕಡೆ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದ. ಅಲ್ಲದೆ, ಪತ್ನಿ ಮತ್ತು ಮಕ್ಕಳಿಂದ ದೂರು ಇರಲು ಆರಂಭಿಸಿದ್ದ. ತನ್ನ ಮನೆಯ ಮೇಲೆಯೇ ಮತ್ತೂಂದು ಮನೆ ಬಾಡಿಗೆ ಪಡೆದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ.

ತನ್ನ ಪ್ರತ್ಯೇಕ ಮನೆಯಲ್ಲಿ ಹತ್ತಾರು ದೇವರ ಫೋಟೋಗಳನ್ನು ಇಟ್ಟು ಇಡೀ ದಿನ ಪೂಜೆ, ಮಂತ್ರ ಪಠಣೆ,ಭಜನೆಯಲ್ಲಿ ತೊಡಗಿದ್ದ. ಅಲ್ಲದೆ, ಪ್ರತಿನಿತ್ಯ ಸಿಕ್ಕ, ಸಿಕ್ಕ ದೇವಸ್ಥಾನಗಳಿಗೆಲ್ಲಾ ಹೋಗುತ್ತಿದ್ದ. ಇದು ಒಂದೆಡೆಯಾದರೆ ಮನೆಯಲ್ಲಿ ಪತ್ನಿ ಮಾಡುವ ಅಡುಗೆ ತಿನ್ನುತ್ತಿರಲಿಲ್ಲ. ಪತ್ನಿ, ಮಕ್ಕಳ ಜತೆ ಮಾತನಾಡುತ್ತಿರಲಿಲ್ಲ. ಸಾಂಸಾರಿಕ ಜೀವನವೇ ಬೇಡ ಎನ್ನಲಾರಂಭಿಸಿದ್ದ. ಆತನನ್ನು ಸರಿದಾರಿಗೆ ತರಲು ಪತ್ನಿ ಸಾಕಷ್ಟು ಪ್ರಯತ್ನ ಮಾಡಿದಳಾದರೂ ಯಾವುದೂ ಫ‌ಲ ಕೊಡದ ಕಾರಣ ಕೊನೆಗೆ ಮಹಿಳಾ ಸಹಾಯವಾಣಿಯ ಮೊರೆ ಹೋಗಿದ್ದಾರೆ.

ಜೀವನವೇ ನಶ್ವರ ಎನ್ನುತ್ತಾನೆ ಪತಿರಾಯ: ಮಹಿಳೆಯ ಮನವಿಗೆ ಸ್ಪಂದಿಸಿದ ವನಿತಾಸಹಾಯವಾಣಿಯ ಅಧಿಕಾರಿಗಳು, ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ  ಜೀವನವೇ ನಶ್ವರ. ಆ ಜಂಜಾಟದಲ್ಲಿ ಬದುವುದಕ್ಕಿಂತ ಆಧ್ಯಾತ್ಮಿಕ ಜೀವನ ನಡೆಸಿದರೆ ಮೊಕ್ಷ ಪ್ರಾಪ್ತಿಯಾಗುತ್ತದೆ. ಹಾಗಾಗಿ ಸನ್ಯಾಸತ್ವ ಸ್ವೀಕರಿಸಲು ಸಿದ್ಧನಾಗಿದ್ದೇನೆ. ನಾನು ಯಾರಿಗೂ ತೊಂದರೆ ಕೊಡುವುದಿಲ್ಲ. ಪತ್ನಿ ಮತ್ತು ಮಕ್ಕಳ ಜೀವನಕ್ಕಾಗಿ ನನ್ನ ಇಡೀ ಆಸ್ತಿಯನ್ನು ಬರೆದುಕೊಡುತ್ತೇನೆ. ಅವರಿಗೆ ಇಷ್ಟ ಬದ್ದಂತೆ ಜೀವನ ನಡೆಸಲಿ ಎಂದು ಪತಿ ಹೇಳುತ್ತಿದ್ದಾನೆ. 

ಆದರೆ, ಆಪ್ತಸಮಾಲೋಚನೆ ನಡೆಸಿದ ಅಧಿಕಾರಿಗಳು ಸನ್ಯಾಸತ್ವ ಪಡೆಯಲು ಮುಂದಾಗಿರುವ ಪತಿಗೆ, “ಆಧ್ಯಾತ್ಮ ಎಂಬುದು ಜೀವನದ ಒಂದು ಭಾಗ. ಸಂಸಾರ ಮತ್ತು ಆಧ್ಯಾತ್ಮವನ್ನು ತಕ್ಕಡಿಯಂತೆ ಸರಿಯಾಗಿ ತೂಗಿಸಿಕೊಂಡು ಹೋಗಬೇಕು. ಸಾಂಸಾರಿಕ ಜೀವನದ ಸುಖ-ದುಖಃಗಳನ್ನು ಅರಿತಿರುವ ನಿಮಗೆ ಸನ್ಯಾಸತ್ವ ಸೂಕ್ತವಲ್ಲ’ ಎಂದು ಸಲಹೆ ನೀಡಿದ್ದಾರೆ. ಆದರೂ ಆತ ಮಾತ್ರ ತನ್ನ ಪಟ್ಟು ಸಡಿಲಿಸುತ್ತಿಲ್ಲ. 

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next