ಮಧುಗಿರಿ: ತಾಲೂಕಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಇದಕ್ಕಾಗಿ ಸರ್ಕಾರ ‘ಆದರ್ಶಗ್ರಾಮ’ ಯೋಜನೆ ಜಾರಿಗೆ ತರಲಾಗಿದೆ. ಮುಂದೆ ಯಾವುದೇ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಆಚೇನಹಳ್ಳಿ ಗ್ರಾಮದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದ ಆದರ್ಶಗ್ರಾಮ ಯೋಜನೆಯಡಿ ನಿರಂತರ ವಿದ್ಯುತ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಿರಂತರ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ವಿದ್ಯುತ್ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ತಿಳಿಸಿದರು.
ಕಂಬಗಳ ಹಾಗೂ ವೈರ್ ಜೋಡಣೆಯಲ್ಲೂ ಯಾವುದೇ ಅವಘಡ ಸಂಭವಿಸದಂತೆ ಆಧುನಿಕವಾಗಿ ಪರಿಕರಗಳನ್ನು ಅಳವಡಿಸಿಕೊಂಡು ಮತ್ತು ಹೆಚ್ಚುವರಿ 3 ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಲಿದ್ದು, ಇಡೀ ಗ್ರಾಮಕ್ಕೆ ವಿದ್ಯುತ್ ಸಮಸ್ಯೆಯಿಂದ ಮುಕ್ತಿ ದೊರಕಲಿದೆ ಎಂದು ತಿಳಿಸಿದರು. ಶೀಘ್ರ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಗುತ್ತಿಗೆದಾರ ಕಂಪನಿಯಾದ ತ್ರಿಪಲ್ ಇಇ ಸಂಸ್ಥೆಯ ಜಬೀರವರಿಗೆ ಸೂಚಿಸಿದರು.
ಹಾರದ ಬದಲು ನೋಟ್ ಪುಸ್ತಕ ನೀಡಿ:ಪ್ರತಿ ಕಾರ್ಯಕ್ರಮದಲ್ಲೂ ನೂರಾರು ಹೂವಿನ ಹಾರಗಳನ್ನು ತಂದು ಹಣ ಪೋಲು ಮಾಡುವ ಬದಲು ಅಷ್ಟೇ ಹಣವನ್ನು ನಿಮ್ಮ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟು ಪುಸ್ತಕ ವಿತರಿಸಲು ಖರ್ಚು ಮಾಡಿ. ಮುಂದಿನ ಯಾವುದೇ ಸಭೆಗೂ ಹೂವಿನ ಹಾರಗಳ ಬಳಕೆಯನ್ನು ಎಲ್ಲರೂ ಸಾಮೂಹಿಕವಾಗಿ ತಿರಸ್ಕರಿಸಿ, ಬಡ ಮಕ್ಕಳ ವಿದ್ಯೆಗೆ ನೆರವಾಗಿ ಎಂದರು.
ಇಲಾಖೆಯ ಎಇಇ ಕೃಷ್ಣಮೂರ್ತಿ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು, ಗ್ರಾಮಕ್ಕೆ ಯಾವುದೇ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಈ ವೇಳೆ ಮೀನುಗಾರಿಕೆ ಇಲಾಖೆಯಿಂದ ಬರುವ ಮಸಾಶ್ರಯ ಯೋಜನೆಯಡಿ 4 ಮನೆಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ತಾಪಂ ನಾಗಭೂಷಣ್, ಮಾಜಿ ಸದಸ್ಯ ನಾಗರಾಜು, ಮುಖಂಡ ಗೋಪಾಲ್, ಗ್ರಾಪಂ ಉಪಾಧ್ಯಕ್ಷ ಪ್ರಭು, ಮಾಜಿ ಉಪಾಧ್ಯಕ್ಷರಾದ ಹನುಮಪ್ಪ, ಗುಜ್ಜಾರಪ್ಪ, ಮೀನುಗಾರಿಕೆ ಇಲಾಖೆಯ ರಂಗಪ್ಪ, ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಇತರರಿದ್ದರು.