ಶಿವರಾತ್ರಿ ಕಳೆಯಿತು. ಶಿಶಿರ ಮೆಲ್ಲನೆ ಹಿಂದೆ ಸರಿಯುತ್ತಿದ್ದಾನೆ. ವಸಂತ ರಂಗಪ್ರವೇಶಿಸಲು ಬಣ್ಣದ ಮನೆಯಲ್ಲಿ ಸಿದ್ಧಗೊಳ್ಳುತ್ತಿದ್ದಾನೆ. ಸೂರ್ಯ ಪ್ರ-ತಾಪವನ್ನು ಹೆಚ್ಚಿಸುತ್ತಿದ್ದಾನೆ. ಇನ್ನು ಸೂರ್ಯನದ್ದೇ ಸಾಮ್ರಾಜ್ಯ. ಆಕಾಶದಲ್ಲಿನ ಸೂರ್ಯನ ಒಡ್ಡೋಲಗಕ್ಕೆ ಭೂಮಿಯ ಮೇಲೆ ನಿಂತು ಪರಾಕು ಹೇಳುವಂಥ ಛಾಯಾಕಥನ ಇಲ್ಲಿದೆ… ಬಿಸಿಲ ಹೊತ್ತಿಗೆ ಇದು ಮುನ್ನುಡಿ.
ಬಾ ಹೋಗೋಣ’ ಎಂದರು . ಅವನಿಗೋ ಇನ್ನೂ ಕಣ್ಣ ತುಂಬಾ ನಿದ್ದೆ. ರೆಪ್ಪೆ ಒಂದಿನಿತೂ ಅಲುಗಾಡಲಿಲ್ಲ. ಇವರೇನು ಸುಮ್ಮನಿರಲಿಲ್ಲ. ಅನಾಮತ್ತಾಗಿ ಅವನನ್ನು ಎತ್ತಿಕೊಂಡವರೇ ಜೇಬಿಗೆ ಸೇರಿಸಿದರು. ನಂತರ ಚುಮು ಚುಮು ಚಳಿಯಲ್ಲಿ, ಆಗ ತಾನೇ ಹಕ್ಕಿ ಕುಕಿಲು ಮೂಡುತ್ತಿದ್ದ ಸಮಯದಲ್ಲಿ.. ಸಿಕ್ಕ ಸಿಕ್ಕ ಕಡೆಯೆಲ್ಲ ಅವನನ್ನು ನೇತು ಹಾಕಿದರು. ಕ್ಲಿಕ್… ಕ್ಲಿಕ್… ಬೆಳ್ಳಂ ಬೆಳಗ್ಗೆಯಿಂದ ಸಂಜೆಯವರೆಗೂ ಇದೇ ಆಟ. ಅವರು ಶಿವಶಂಕರ ಬಣಗಾರ್, ಛಾಯಾಗ್ರಾಹಕ. ಅವರ ಜೇಬಿನಲ್ಲಿ ಸದಾ ಇರುವವನ ಹೆಸರು – ಸೂರ್ಯ !
ಆಂಧ್ರದ ಅಧೋನಿಯಲ್ಲಿದ್ದ ಬಣ್ಣಗಾರರ ಕುಟುಂಬ ಬಡತನ ತಮ್ಮನ್ನು ಸುತ್ತಿ ಎಸೆಯುತ್ತದೆ ಎಂದು ಗೊತ್ತಾದಾಗ ತಮ್ಮ ಮಕ್ಕಳು ಮರಿ ಸಮೇತ ಹೊಸ ದಿಕ್ಕಿನತ್ತ ಹೆಜ್ಜೆ ಹಾಕಿತು. ಹಾಗೆ ಬಂದು ನೆಲೆಗೊಂಡದ್ದು ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ. ಬಣ್ಣಗಾರರ ಕುಟುಂಬ ಹಾಗೆ ಸೇರಿಕೊಂಡದ್ದು ಇನ್ನೊಂದು ರೀತಿಯ ಬಣ್ಣಗಾರರ ಹಳ್ಳಿಯನ್ನ. ನಾಟಕಕ್ಕೆ ರಂಗು ತುಂಬುವವರ ಲೋಕವನ್ನ. ಹಾಗೆ ಬಾಲ್ಯದಲ್ಲಿ ಶಿವಶಂಕರ ಬಣಗಾರ್ ಅವರಿಗೆ ಮನೆಯಲ್ಲೂ ಬಣ್ಣ, ಹೊರಗೆ ಹಳ್ಳಿಯಲ್ಲೂ ಬಣ್ಣ ಬಣ್ಣದ ವಾತಾವರಣ. ಹೀಗಿರುವಾಗ ಒಮ್ಮೆ ಎದ್ದು ಮನೆ ಆಚೆ ಬಂದು ಕಣ್ಣು ಬಿಡುತ್ತಾರೆ ಎದುರಿಗೆ ವಾಹವ್ವಾ.. ಅಷ್ಟು ದುಂಡನೆ ಸೂರ್ಯ. ಕೆಂಡದುಂಡೆಯಂತೆ ನಿಂತಿದ್ದ ಸೂರ್ಯ ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ಶಿವಶಂಕರ ಎನ್ನುವ ಪುಟ್ಟ ಹುಡುಗನಿಗೆ ಅದೇನು ಸಿಟ್ಟು ಬಂತೋ ನಿನಗಿಂತ ನಾನೇನು ಕಡಿಮೆ ಎನ್ನುವಂತೆ ಅವರೂ ಆತನನ್ನು ದಿಟ್ಟಿಸಿ ನೋಡಿದರು. ರೆಪ್ಪೆ ಮುಚ್ಚದೆ. ಮಾರನೆಯ ದಿನ, ಅದರ ಮಾರನೆಯ ದಿನ ಹೀಗೆ ಸೂರ್ಯನಿಗೂ ಇವರಿಗೋ ದೃಷ್ಟಿ ಯುದ್ಧವೇ ನಡೆದು ಹೋಯಿತು. ಮರಿಯಮ್ಮನಹಳ್ಳಿಯ ಇವರ ಮನೆಯ ಎದುರಿಗಿರುವದೇ ರಾಮದೇವರ ಗುಡ್ಡ. ಆ ಗುಡ್ಡದಿಂದ ಗತ್ತಿನಲ್ಲಿ ಇಣುಕುತ್ತ, ಮೇಲೇರುತ್ತ ಸಾಗುತ್ತಿದ್ದವನು ಆ ಸೂರ್ಯದೇವ ಅಥವಾ ಶಿವಶಂಕರ್ ಅವರ ಮಾತಿನಲ್ಲೆ ಹೇಳಬೇಕೆಂದರೆ “ಸೂರಪ್ಪ’. ವರ್ಷಗಟ್ಟಲೆ ಹೀಗೆ ಸೂರ್ಯನ ಆ ಕಿರಣಗಳನ್ನು ಕಣ್ಣೊಳಗೆ ಎಳೆದುಕೊಂಡದ್ದಕ್ಕೋ ಏನೋ ಅವರಿಗೆ ಅತಿ ಬೇಗ ದೃಷ್ಟಿ ಮಂಕಾಗತೊಡಗಿತು. ಸೂರ್ಯ ಪಾಠ ಕಲಿಸಿಬಿಟ್ಟಿದ್ದ.
ಆದರೆ, ಶಿವಶಂಕರ್ ಮಣಿಯುವವರಲ್ಲ. ಬದುಕು ಅವರನ್ನು ಮರಿಯಮ್ಮನಹಳ್ಳಿಯಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ, ಅಲ್ಲಿಂದ ಹೊಸಪೇಟೆಗೆ ದಾಟಿಸಿದಾಗ ಅವರು ಸೂರ್ಯನ ಮೇಲೆ ಒಂದು ಕಣ್ಣು ನೆಟ್ಟೇ ಇದ್ದರು. ಯಾವಾಗ ಹೊಸಪೇಟೆ ಸೇರಿಕೊಂಡರೋ ಮತ್ತೆ ಶುರುವಾಯಿತು ಇವರಿಗೂ ಸೂರ್ಯನಿಗೂ ದೃಷ್ಟಿ ಯುದ್ಧ. ಆದರೆ ಈ ಬಾರಿ ಅವರು ಸೂರ್ಯನೆಡೆಗೆ ನೆಟ್ಟಿದ್ದು ತಮ್ಮ ಕಣ್ಣನ್ನಲ್ಲ.. ಕ್ಯಾಮೆರಾ ಕಣ್ಣನ್ನು. ಸೂರ್ಯನನ್ನು ಬೇಕೆಂದ ಹಾಗೆ ಬಾಗಿಸಿದರು, ಮಣಿಸಿದರು.
ಸೂರ್ಯ ಮಣಿಯಲೇಬೇಕಾಯಿತು.ಇವರೋ ಆತನನ್ನು ಬೇಕೆಂದೆಡೆ ನೇತು ಹಾಕಿದರು. ಹಂಪಿಗೆ ಬಂದ ವಿದೇಶಿ ಪ್ರೇಮಿಗಳ ಪ್ರಣಯದಾಟದ ಮಧ್ಯೆ, ಆಡಲು ಮೈದಾನಕ್ಕಿಳಿದ ಹುಡುಗರ ಕಾಲಿನ ನಡುವೆ, ಕ್ಯಾಮೆರಾ ಹಿಡಿದು ಕೂತವರ ಲೆನ್ಸ್‌ಗೆ ತಾಕುವಂತೆ, ವಿರೂಪಾಕ್ಷನ ಗೋಪುರಕ್ಕೆ ಇನ್ನೊಂದು ಕಳಶವೆಂಬಂತೆ, ಅಷ್ಟೂ ಸಾಲದು ಎಂದು ಮನೆಗೆ ತೆರಳುತ್ತಿರುವ ಎತ್ತಿನ ಗಾಡಿಯಲ್ಲಿ ಒಂದು ಕುಂಬಳಕಾಯಿಯೇನೋ ಎನ್ನುವಂತೆ, ಹೀಗೆ.. ಶಿವಶಂಕರ ಬಣಗಾರ್ “ಸೂರ್ಯ’ ಶಂಕರ ಬಣಗಾರ್ ಆಗಿ ಬಿಟ್ಟರು.
ಬರಹ : ಜಿ. ಎನ್. ಮೋಹನ್
ಫೊಟೊಗಳು : ಶಿವಶಂಕರ್ ಬಣಗಾರ್