Advertisement

ದಿಲ್ಲಿ “ಐಫೆಲ್‌ ಟವರ್‌’ಖ್ಯಾತಿಯ ಸಿಗ್ನೇಚರ್‌ ಬ್ರಿಡ್ಜ್ ಲೋಕಾರ್ಪಣೆ

09:25 AM Nov 05, 2018 | Harsha Rao |

ಹೊಸದಿಲ್ಲಿ: ದಿಲ್ಲಿಯ “ಐಫೆಲ್‌ ಟವರ್‌’ ಎಂದೇ ಕರೆಯಲ್ಪಡುವ ಸಿಗ್ನೇಚರ್‌ ಬ್ರಿಡ್ಜ್ ಅನ್ನು ಗೊಂದಲ, ಗಲಾಟೆಯ ನಡುವೆಯೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರವಿವಾರ ಲೋಕಾರ್ಪಣೆ ಮಾಡಿದ್ದಾರೆ. ಸೋಮವಾರದಿಂದ ಈ ಸೇತುವೆಯು ಸಾರ್ವಜನಿಕರಿಗೆ ಮುಕ್ತವಾಗಲಿದೆ.

Advertisement

675 ಮೀಟರ್‌ ಉದ್ದವಿರುವ ಷಟ³ಥಗಳ ಸೇತುವೆಯು ಉತ್ತರ ಮತ್ತು ಈಶಾನ್ಯ ದಿಲ್ಲಿಗಳ ನಡುವಿನ ಪ್ರಯಾಣ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ. ಪ್ರಸ್ತುತ ವಜೀರಾಬಾದ್‌ ಸೇತುವೆಯಲ್ಲಿ ಭಾರೀ ದಟ್ಟಣೆ ಯಿದ್ದು, ಸಿಗ್ನೇಚರ್‌ ಬ್ರಿಡ್ಜ್ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಇನ್ನು ಮುಂದೆ ದಟ್ಟಣೆಯ ಸಮಸ್ಯೆ ನಿವಾರಣೆಯಾಗಲಿದೆ. 

ಇದು ಭಾರತದ ಮೊದಲ ಅಸಿಮ್ಮಿಟ್ರಿಕಲ್‌ ಕೇಬಲ್‌ ಬ್ರಿಡ್ಜ್ ಎಂಬ ಖ್ಯಾತಿಗೂ ಪಾತ್ರವಾಗಿದೆ. ಪ್ಯಾರಿಸ್‌ನ ಐಫೆಲ್‌ ಟವರ್‌ನಲ್ಲಿ ನಿಂತರೆ ಇಡೀ ನಗರವನ್ನು ಹೇಗೆ ವೀಕ್ಷಿಸಬಹುದೋ, ಅದೇ ಮಾದರಿಯಲ್ಲಿ ಸಿಗ್ನೇಚರ್‌ ಸೇತುವೆಯ ವೀಕ್ಷಣಾ ಗೋಪುರದಲ್ಲಿ ನಿಂತರೆ ಸಂಪೂರ್ಣ ದಿಲ್ಲಿಯನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ, ಇಲ್ಲಿ ಹಲವು ಸೆಲ್ಫಿ ಸ್ಪಾಟ್‌ಗಳನ್ನೂ ಗುರುತಿಸಲಾಗಿದೆ. 

2004ರಲ್ಲೇ ಈ ಸೇತುವೆ ನಿರ್ಮಾಣ ಯೋಜನೆ ಘೋಷಿಸಲಾಗಿತ್ತು. ಆಗ ಇದರ ವೆಚ್ಚ 494 ಕೋಟಿ ರೂ. ಎಂದು ನಿಗದಿಪಡಿಸಲಾಗಿತ್ತು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು 14 ವರ್ಷಗಳು ಬೇಕಾದವು. ಹೀಗಾಗಿ, ಯೋಜನೆಗೆ 1,594 ಕೋಟಿ ರೂ. ವೆಚ್ಚವಾಗಿದೆ. 

ಬಿಜೆಪಿ-ಆಪ್‌ ಘರ್ಷಣೆ
ಸೇತುವೆ ಉದ್ಘಾಟನೆಗೂ ಮುನ್ನ ಹೈಡ್ರಾಮಾ ನಡೆದಿದ್ದು, ಬಿಜೆಪಿ ಮತ್ತು ಆಪ್‌ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಕ್ಷೇತ್ರದ ಸಂಸದನಾಗಿದ್ದರೂ ತಮಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿಲ್ಲ ಎಂದು ಆಕ್ರೋಶಗೊಂಡಿದ್ದ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟಿಸತೊಡಗಿದರು. ಈ ವೇಳೆ ಬಿಜೆಪಿ ಹಾಗೂ ಆಪ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಸ್ವಲ್ಪಮಟ್ಟಿಗೆ ಹೊಯ್‌ಕೈ ಕೂಡ ನಡೆಯಿತು. ಈ ಸಂದರ್ಭದಲ್ಲಿ ಆಪ್‌ ನಾಯಕ ಅಮಾನತುಲ್ಲಾ ಖಾನ್‌ ಅವರು ಅವಹೇಳನಕಾರಿ ಭಾಷೆ ಬಳಸಿದ್ದು, ತಿವಾರಿ ಅವರನ್ನು ನೂಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next