ಬೆಂಗಳೂರು: ಇಸ್ಲಾಮಿನ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಮೊಮ್ಮಗ ಹಜ್ರತ್ ಇಮಾಮ್ ಹುಸೈನ್ ರವರು ವೈರಿಗಳ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದ ಸ್ಮರಣೆಯಲ್ಲಿ ನಗರದ ವಿವಿಧ ಕಡೆ ಮಂಗಳವಾರ ಶೋಕಾಚರಣೆ (ಮಾತಂ) ನಡೆಯಿತು.
ಶೋಕದ ಸಂದರ್ಭವಾಗಿದ್ದರೂ “ಮೊಹರಂ ಹಬ್ಬ’ ಎಂದೇ ಪ್ರಚಲಿತದಲ್ಲಿರುವ ಮೊಹರಂ ತಿಂಗಳ 10ನೇ ದಿನದಂದು ಜಾನ್ಸನ್ ಮಾರ್ಕೆಟ್, ನೀಲಸಂದ್ರ, ಆಸ್ಟಿನ್‌ಟೌನ್, ಮೈಸೂರು ರಸ್ತೆ ಮತ್ತಿತರ ಕಡೆ ಮೆರವಣಿಗೆ, ಶೋಕ ಸಭೆಗಳನ್ನು ನಡೆಸಲಾಯಿತು.
ಮುಖ್ಯವಾಗಿ ಜಾನ್ಸನ್ ಮಾರ್ಕೆಟ್ ಏರಿಯಾದಲ್ಲಿ “ಅಂಜುಮನ್-ಏ-ಇಮಾಮಿಯಾ’ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬೃಹತ್ ಮೊಹರಂ ಮೆರವಣಿಗೆ ನಡೆಯಿತು. ಇದರಲ್ಲಿ ನಗರದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 1.30ಕ್ಕೆ ಜಾನ್ಸನ್ ಮಾರ್ಕೆಟ್ ಬಳಿಯ ಅಸ್ಕರಿ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಸಂಜೆ 4 ಗಂಟೆಗೆ ಶಿಯಾ ಪಂಗಡದ ಕಬರಸ್ತಾನ್ ಆಗಿರುವ “ಆರಾಮ್‌ಗಾಹ್’ ತಲುಪಿತು. ಅಲ್ಲಿ ನಡೆದ ಸಭೆಯಲ್ಲಿ ಶೋಕ ಶ್ಲೋಕಗಳು, ಶೋಕ ಗೀತೆಗಳ ಮೂಲಕ ಹಜ್ರತ್ ಇಮಾಮ್ ಹುಸೈನ್ ಅವರ ಬಲಿದಾನವನ್ನು ಸ್ಮರಿಸಲಾಯಿತು. ಇದರಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಶಿಯಾ ಪಂಗಡದವರು ಪಾಲ್ಗೊಂಡಿದ್ದರು.
ಅಂಜುಮನ್-ಏ-ಇಮಾಮಿಯಾ ಸಂಸ್ಥೆಯ ಮುಖ್ಯಸ್ಥ ಅಲಿ ರಜಾ ಅವರ ನೇತೃತ್ವದಲ್ಲಿ ಜರುಗಿದ ಮೊಹರಂ ಮೆರವಣಿಗೆಗೆ ಶೂಲೆ ವೃತ್ತದಿಂದ ಮೈಕೋ ಕಂಪನಿ ಗೇಟ್ ಸಿಗ್ನಲ್‌ವರೆಗೆ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರು. ಮೆಟ್ರೋ ಕಾಮಗಾರಿ ಹೊರತಾಗಿಯೂ ಏಕಮುಖ ಸಂಚಾರಕ್ಕೆ ಅನುಮತಿ ಕೊಟ್ಟು, ವ್ಯವಸ್ಥಿತವಾಗಿ ಮಾತಂ ಆಚರಿಸಲು ಅವಕಾಶ ಮಾಡಿಕೊಟ್ಟ ಪೊಲೀಸ್ ಇಲಾಖೆಗೆ ಅಲಿ ರಜಾ ಅವರು ಅಭಿನಂದನೆ ಸಲ್ಲಿಸಿದರು.
ಐಶಾರಾಮಿ ಜೀವನ ತ್ಯಾಗ: ಮೊಹರಂ ತಿಂಗಳ ಒಂದನೇ ತಾರೀಕಿನಿಂದ ಸತತ ಒಂಭತ್ತು ದಿನಗಳ ಕಾಲ ಮಾತಂ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ವಿಶೇಷವಾಗಿ ಶಿಯಾ ಪಂಗಡದವರು ಕಪ್ಪು ಬಟ್ಟೆ ಧರಿಸಿ, ಐಷಾರಾಮಿ ಜೀವನ ತ್ಯಜಿಸುತ್ತಾರೆ. ಅನೇಕ ಕಡೆ ಪಂಜಾ, ಆಲಂ ಗಳನ್ನು ಪ್ರತಿಷ್ಠಾಪಿಸಿ ಪ್ರತಿದಿನ ಮೆರವಣಿಗೆ ನಡೆಸಲಾಗುತ್ತದೆ. ಚೋಂಗಾ, ರೊಟ್, ಮಲಿದಾ, ಬೆಲ್ಲದ ಪಾಯಸ ಇತ್ಯಾದಿ ತಿನಿಸುಗಳನ್ನು ಮಾಡುವುದು ಪ್ರತೀತಿ.
ದೇಹ ದಂಡನೆ ಮೂಲಕ ಸ್ಮರಣೆ: ಮೆರವಣಿಗೆಯಲ್ಲಿ ಪಾಲ್ಗೊಂಡವರ ಪೈಕಿ ಬಹುತೇಕ ಮಂದಿ ಹರಿತವಾದ ಆಯುಧಗಳಿಂದ ಎದೆ ಹಾಗೂ ಬೆನ್ನಿಗೆ ಹೊಡೆದುಕೊಳ್ಳುವ ಮೂಲಕ ಮಾತಂ ಆಚರಿಸಿದರು. ಇದು ದೇಹ ದಂಡನೆ ಮಾಡಿಕೊಳ್ಳುವ ಮೂಲಕ ಹಜ್ರತ್ ಇಮಾಮ್ ಹುಸೈನ್ ಹಾಗೂ ಅವರ ಇಡೀ ಕುಟುಂಬವನ್ನು ಸ್ಮರಿಸಿಕೊಳ್ಳುವ ಸಂಕೇತವಾಗಿದೆ.