Advertisement

ಪುರಸಭೆಗೆ ಮೀನುಗಾರ ಮಹಿಳೆಯರ ಮುತ್ತಿಗೆ

03:33 PM Apr 07, 2022 | Team Udayavani |

ಭಟ್ಕಳ: ಪುರಸಭೆಯ ಹಳೇ ಮೀನು ಮಾರುಕಟ್ಟೆಯಲ್ಲಿ ಕಸವನ್ನು ರಾಶಿ ಹಾಕಿದ್ದಾರೆ. ಮೀನು ಮಾರಾಟ ಮಾಡಲು ತೊಂದರೆ ಕೊಡುವ ಉದ್ದೇಶದಿಂದಲೇ ಸ್ವಚ್ಛತೆ ಮಾಡಿಲ್ಲ ಎಂದು ದೂರಿ ನೂರಾರು ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ಮೀನು ಮಾರಾಟಕ್ಕೆ ಬಂದ ಮಹಿಳೆಯರು ನೋಡುವಾಗ ಹಳೇ ಮೀನು ಮಾರುಕಟ್ಟೆಯಲ್ಲಿ ಹೊರಗಿನಿಂದ ಕಸ ತುಂಬಿದ್ದಲ್ಲದೇ ಸ್ವತ್ಛ ಮಾಡಿಲ್ಲವಾಗಿತ್ತು. ಈ ಬಗ್ಗೆ ಕೇಳಿದರೆ ಪುರಸಭೆಯವರು ಹಳೇ ಮೀನು ಮಾರುಕಟ್ಟೆ ಚಾಲ್ತಿಯಲ್ಲಿಲ್ಲ, ಈಗಾಗಲೇ ಕಟ್ಟಡ ಶಿಥಿಲವಾಗಿದ್ದರಿಂದ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ ಎಂದಿದ್ದರಿಂದ ತೀವ್ರ ಆಕ್ರೋಶಗೊಂಡ ಮಹಿಳೆಯರು ತಾವು ತಂದಿದ್ದ ಮೀನು ಬುಟ್ಟಿಯೊಂದಿಗೆ ಪುರಸಭಾ ಕಟ್ಟಡದ ಎದುರು ಬಂದು ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮಹಿಳೆಯರನ್ನು ತಡೆದು ಒಳ ಹೋಗದಂತೆ ನಿರ್ಬಂಧಿಸಿದರು.

ಇದರಿಂದ ಇನ್ನಷ್ಟ ಆಕ್ರೋಶಗೊಂಡ ಮಹಿಳೆಯರು ಪುರಸಭಾ ಎದುರಿನಲ್ಲಿಯೇ ಮೀನನ್ನು ಚೆಲ್ಲಿ ರಾದ್ದಾಂತ ಮಾಡಿದ್ದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕೆಲ ಸಮಯ ಪೊಲೀಸರಿಗೂ ಮೀನು ಮಾರುವ ಮಹಿಳೆಯರಿಗೂ ಮಾತಿನ ಚಕಮಕಿ ನಡೆದು ಕೊನೆಗೂ ಅಲ್ಲಿಂದ ತೆರಳಿದರು. ಒಂದು ಹಂತದಲ್ಲಿ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರು ಮಹಿಳೆಯರ ಕೃತ್ಯಕ್ಕೆ ಆಕ್ರೋಶಗೊಂಡಿದ್ದರೂ ಸಹ ಸಮಾಧಾನದಿಂದ ಅವರನ್ನೆಲ್ಲ ಅಲ್ಲಿಂದ ಕಳುಹಿಸುವಲ್ಲಿ ಯಶಸ್ವಿಯಾದರು.

ಪುರಸಭೆ ವಿರುದ್ಧ ಆಕ್ರೋಶ: ಮೀನುಗಾರ ಮಹಿಳೆಯರು ತಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಬೇಕು ಎನ್ನುವ ಉದ್ದೇಶದಿಂದಲೇ ಪುರಸಭೆಯವರೇ ಹೊರಗಿನಿಂದ ಕಸ ತಂದು ಹಾಕಿ, ಸ್ವತ್ಛಗೊಳಿಸದೇ ತೊಂದರೆ ಕೊಡುತ್ತಿದ್ದಾರೆ. ಹೊಸ ಮೀನು ಮಾರುಕಟ್ಟೆಗೆ ಹೋಗಬೇಕೆನ್ನುವ ಉದ್ದೇಶ ಅವರದು. ನಾವು ಯಾವುದೇ ಕಾರಣಕ್ಕೂ ಹೊಸ ಮೀನು ಮಾರುಕಟ್ಟೆಗೆ ಹೋಗುವುದಿಲ್ಲ, ಇಲ್ಲಿಯೇ 70-80 ವರ್ಷದಿಂದ ಮೀನು ಮಾರಾಟ ಮಾಡುತ್ತಿದ್ದು, ಇಲ್ಲಿಯೇ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.

ಕಸ ಹಾಕಿದ್ದಕ್ಕೆ ದೂರು ಸಲ್ಲಿಕೆ: ಪುರಸಭೆಯ ಹಳೆ ಮೀನು ಮಾರುಕಟ್ಟೆಯಲ್ಲಿ ಕಸ ಹಾಕಿರುವ ಕುರಿತು ಸಿ.ಸಿ. ಟಿ.ವಿ. ಫೂಟೇಜ್‌ಗಳನ್ನು ಪಡೆದು ತಪ್ಪತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಮೀನುಗಾರರು ಆರೋಪಿಸಿದಂತೆ ಕಸ ಹಾಕಿದವರು ಯಾರು ಎನ್ನುವುದು ಪುರಸಭೆಗೂ ತಿಳಿಯಬೇಕು ಎಂದು ಮುಖ್ಯಾಧಿಕಾರಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅಕ್ಕ ಪಕ್ಕದ ಸಿ.ಸಿ. ಟಿ.ವಿಗಳನ್ನು ವಿಶ್ಲೇಷಣೆ ಮಾಡಿ ಕಸ ಹಾಕಿರುವವರ ಕುರಿತು ಸೂಕ್ತ ತನಿಖೆ ನಡೆಸಿ ಎಂದೂ ತಿಳಿಸಲಾಗಿದೆ.

Advertisement

ಈ ಕುರಿತು ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶಿಮಜಿ ಮಾತನಾಡಿ, ಹಳೇ ಮೀನು ಮಾರುಕಟ್ಟೆ ಶಿಥಿಲವಾಗಿದೆ ಎಂದು 2020ರಲ್ಲಿಯೇ ಲೋಕೋಪಯೋಗಿ ಇಲಾಖೆ ವರದಿ ನೀಡಿದ್ದು, ಅಲ್ಲಿ ಯಾವುದೇ ಜನ ವಸತಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಆದ್ದರಿಂದ ಎರಡು ವರ್ಷಗಳ ಹಿಂದೆಯೇ ಮೀನು ಮಾರಾಟ ಟೆಂಡರ್‌ನ್ನು ಸಹ ಹೊಸ ಮೀನು ಮಾರುಕಟ್ಟೆಯಲ್ಲಿಯೇ ಕರೆಯಲಾಗಿದೆ. ಈಗಾಗಲೇ ಮೀನು ಮಾರುಕಟ್ಟೆಯನ್ನು ತೆರವುಗೊಳಿಸುವಂತೆ ಪುರಸಭೆಗೆ ಲೋಕಾಯುಕ್ತರು ನೋಟಿಸ್‌ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಫೆ.10 ಗಡುವು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಳೆ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮುಂದುವರಿಸಲು ಸಾಧ್ಯವಿಲ್ಲ. ಕಾನೂನು ತೊಡಕು ಉಂಟಾಗುತ್ತದೆ. ಮುಂದೆ ಕಟ್ಟಡ ಕುಸಿದು ಏನಾದರೂ ಅನಾಹುತವಾದರೆ ಯಾರು ಹೊಣೆ? ಎಂದ ಅವರು, ಹೊಸ ಮೀನು ಮಾರುಕಟ್ಟೆಯಲ್ಲಿ ಯಾವುದೇ ಸೌಲಭ್ಯ ನೀಡಲು ನಾವು ಬದ್ಧರಿದ್ದೇವೆ. ಏಪ್ರಿಲ್‌ ಒಂದು ತಿಂಗಳು ಯಾವುದೇ ಶುಲ್ಕ ವಸೂಲಿಯನ್ನೂ ಮಾಡುವುದಿಲ್ಲ. ಅಲ್ಲಿಯೇ ವ್ಯಾಪಾರ ಆರಂಭಿಸುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next