Advertisement
ಅಂಕೋಲಾ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಹಾಲಕ್ಕಿ ಜನಾಂಗದ ಮುಗ್ಧತೆಯನ್ನೇ ಹಾಸಿ ಹೊದ್ದವರು. ಹೆಚ್ಚು ಮಾತನಾಡದ ಅವರು ಹೊನ್ನಳ್ಳಿ ಸಸ್ಯಪಾಲನ ಕೇಂದ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯ ಸಸಿಗಳೊಂದಿಗೆ ಮಾತಾಡುತ್ತ ಸಸಿಗಳ ಪೋಷಣೆ ಮಾಡುತ್ತಾ, ಅವನ್ನು ನೆಟ್ಟು ಮರವಾಗಿ ಬೆಳೆಸುವತ್ತ ಅವರ ಚಿತ್ತ ನೆಟ್ಟಿತ್ತು. ಪ್ರತೀ ವರ್ಷ ಮೂವತ್ತು ಸಾವಿರ ಸಸಿ ಬೆಳೆಸಿ ಪೋಷಿಸಿದ ಕೀರ್ತಿ ಅವರದ್ದು. ಹಾಗೆ ಕಾಡಿನಿಂದ ಅಪರೂಪದ ಬೀಜ ಸಂಗ್ರಹಿಸಿ, ನೆಟ್ಟು ಸಸಿ ಮಾಡಿ, ಅದೇ ಸಸಿಗಳನ್ನು ಅರಣ್ಯದಲ್ಲಿ ಬೆಳೆಸಿದ ಕೀರ್ತಿ ಅವರದ್ದು. ಅವರ ಶ್ರದ್ಧೆ, ಅರಣ್ಯ ಪ್ರೀತಿ ನೋಡಿದ ಅರಣ್ಯಾಧಿಕಾರಿಗಳು ಅವರನ್ನು ಅರಣ್ಯೀಕರಣ ಮತ್ತು ಸಸ್ಯಪಾಲನೆಗೆ ಬಳಸಿಕೊಂಡರು. ಅವರ ಕಾಡಿನ ಜ್ಞಾನವನ್ನು ಅರಣ್ಯಾಧಿಕಾರಿಗಳಿಗೆ ಮತ್ತು ಗಾರ್ಡ್ಗಳಿಗೆ ಹಂಚಿದರು.
ತುಳಸಿ ಗೌಡರ ಅರಣ್ಯ ಪ್ರೀತಿ ಕಂಡ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಕ್ರಿ ಬೊಮ್ಮಗೌಡರ ಅನಂತರ ಪದ್ಮಶ್ರೀ ಪಡೆದ ಹಾಲಕ್ಕಿ ಜನಾಂಗದ ಎರಡನೇ ಮಹಿಳೆ ಎಂಬ ಗೌರವ ತುಳಸಿ ಗೌಡರಿಗೆ ಇತ್ತು. ವೇದಿಕೆಯಲ್ಲಿ ಎಂದೂ ಭಾಷಣ ಮಾಡದ ತುಳಸಿ ಅವರು ಅರಣ್ಯದೊಂದಿಗೆ ಮಾತ್ರ ಮಾತನಾಡುತ್ತಿದ್ದರು. ಸದ್ದಿಲ್ಲದೆ ಸಾಧನೆ ಮಾಡಿದ ಮಹಿಳೆ ತುಳಸಿ ಯೌವ್ವನದಲ್ಲೇ ಪತಿಯನ್ನು ಕಳೆದುಕೊಂಡು, ಎರಡು ಪುಟ್ಟ ಮಕ್ಕಳ ಬೆಳೆಸುತ್ತಾ ದಿನಗೂಲಿಯಾಗಿ ಸಸ್ಯಪಾಲನ ಕೇಂದ್ರದಲ್ಲಿ ಕೆಲಸ ಮಾಡಿದರು. ಕೊನೆಯ ತನಕ ಅಂದರೆ ಅರವತ್ತು ವರ್ಷ ದಾಟಿದರೂ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದರು. ಅರಣ್ಯ ಕಾಪಾಡಿದರು. ಹಾಗಾಗಿ ಅವರನ್ನು ವೃಕ್ಷ ಮಾತೆ ಎಂದು ಕರೆಯಲಾಯಿತು. ಬದುಕು-ಬವಣೆ
ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಪ್ರೇಮವನ್ನು ಮುಂದುರಿಸಿಕೊಂಡು ಬಂದಿದ್ದ ತುಳಸಿ ಗೌಡ ಸಮಾಜಕ್ಕೆ ಮಾದರಿಯಾಗಿದ್ದರು. ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಕೇವಲ ಅರಣ್ಯದ ಮೇಲಿನ ಕಾಳಜಿಗಾಗಿ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಬರಡಾಗುತ್ತಿರುವ ಕಾಡಿಗೆ ಹಸಿರು ಸೆರಗು ಹೊದಿಸುವ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕಳೆದ ಸುಮಾರು ಆರು ದಶಕಗಳಿಂದ ಮಾಡುತ್ತ ಬಂದಿದ್ದರು ತುಳಸಿ ಗೌಡರು. ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿದ್ದ ಹಾಲಕ್ಕಿ ಮಹಿಳೆ ತುಳಸಿಗೆ ವನವೇ ಜಗತ್ತಾಗಿತ್ತು.
Related Articles
Advertisement
ನಿವೃತ್ತಿ ಅನಂತರವೂ ತಮ್ಮ ಗಿಡ ನೆಡುವ ಕಾರ್ಯವನ್ನು ಕೈ ಬಿಡಲಿಲ್ಲ. ವಯಸ್ಸಾದಂತೆ ದೂರ ಹೋಗಲು ಕಷ್ಟವಾದಾಗ ತಮ್ಮ ಮನೆಯ ಸುತ್ತಮುತ್ತಲಿನ ಕಾಡಿನಲ್ಲಿಯೇ ಸಸ್ಯ ಸಂಕುಲವನ್ನು ಬೆಳೆಸಿ ಆರೈಕೆ ಮಾಡುತ್ತಿದ್ದರು. ವೃಕ್ಷ ಮಾತೆಯನ್ನು ಕಾಣಲು ರಾಜ್ಯದ ನಾನಾ ಭಾಗಗಳಿಂದ ಜನರು ಕುಗ್ರಾಮವಾದ ಹೊನ್ನಳ್ಳಿಗೆ ಬರುತ್ತಿದ್ದರು. ಬಂದವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ಅವರು ಪರಿಸರದ ಬಗ್ಗೆ ವಿಶೇಷ ಕಾಳಜಿಯ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಸಂರಕ್ಷಿಸುವ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು.
ಇಂದಿನ ಪರಿಸರ ನಾಶದ ಬಗ್ಗೆ ಆತಂಕವಿತ್ತು. ಭವಿಷ್ಯದಲ್ಲಿ ಇದರಿಂದಾಗಿ ತಮ್ಮ ಮರಿ ಮಕ್ಕಳಿಗೆ ಆಗಬಹುದಾದ ದುರವಸ್ಥೆಯ ಬಗ್ಗೆ ಕಲ್ಪಿಸಿ ಮರುಗುತ್ತಿದ್ದರು. ತಾವು ಮೊದಲೆಲ್ಲ ಸಾಗುವಾನಿ, ಮಾವು, ಹಲಸು ಮುಂತಾದ ಪರಿಸರ ಪ್ರೇಮಿ ಮರಗಳನ್ನು ಬೆಳೆಸುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅವರು ಇಂದು ಎಲ್ಲೆಡೆ ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುತ್ತಿರುವ, ಅಶುದ್ಧ ವಾತಾವರಣ ನಿರ್ಮಾಣ ಮಾಡುತ್ತಿರುವ ಅಕೇಶಿಯಾ ಬೆಳೆಸುತ್ತಿರುವುದನ್ನು ಕಂಡು ಬೇಸರ ಪಡುತ್ತಿದ್ದರು.
ಆರಂಭದಿಂದ ಕಡು ಬಡತನದಲ್ಲೇ ಬೆಳೆದಿದ್ದ ತುಳಸಿ ಗೌಡ ಅರಣ್ಯ ಇಲಾಖೆಯ ಅಲ್ಪ ಪಿಂಚಣಿ ಯಿಂದ ಜೀವನ ಸಾಗಿಸುತ್ತಿದ್ದರು. ತುಳಸಿ ಗೌಡ ಅವರು ಪ್ರತೀ ವರ್ಷ 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.
ಪ್ರಶಸ್ತಿಗಳುಸೇವೆಯ ಅವಧಿಯಲ್ಲಿ ತುಳಸಿಯ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅರಣ್ಯದ ಬಗ್ಗೆ ಅಪಾರ ತಿಳಿವಳಿಕೆ
ತುಳಸಿಯ ಅರಣ್ಯ ತಿಳಿವಳಿಕೆ ಅಪಾರವಾಗಿತ್ತು. ಮುಖ್ಯವಾಗಿ ಸಾಗುವಾನಿಯನ್ನೇ ಹೆಚ್ಚಾಗಿ ಬೆಳೆಸುತ್ತಿದ್ದ ಇವರು ಇದರ ಹೊರತಾಗಿ ಬೀಟೆ, ಅತ್ತಿ, ಆಲ, ಹುನಾಲು, ಚೆಳ್ಳೆ, ಹೆಬ್ಬೆಲಸು, ನಂದಿ ಮತ್ತಿ ಮುಂತಾದ ಮರಗಳ ಎಲ್ಲ ಮಾಹಿತಿಗಳ ಅರಿವನ್ನು ಹೊಂದಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳು ಅರಣ್ಯ ಇಲಾಖೆ ಸಿಬಂದಿಗಿಂತ ಚೆನ್ನಾಗಿ ಇವರಿಗೆ ತಿಳಿದಿತ್ತು. ಸಸಿಗಳ ಉತ್ಪಾದನೆಯಲ್ಲಿ ಇವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತಿತ್ತು. ಜಿಲ್ಲೆಯ ಅಂಕೋಲಾ, ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಇವರು ನೆಟ್ಟು ಬೆಳೆಸಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ಭೂತಾಯಿಯ ಒಡಲು ರಕ್ಷಿಸುತ್ತಿವೆ ಎನ್ನುವ ಮಾಹಿತಿ ಸಮಾಜಕ್ಕೆ ನೀಡಿದ್ದರು. – ನಾಗರಾಜ್ ಹರಪನಹಳ್ಳಿ