ಆಳಂದ: ಮಹಿಳಾ ಸಂಘಗಳಿಗೆ ಸರ್ಕಾರ ನೀಡುವ ಸೌಲಭ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದ್ದು, ಮಹಿಳೆಯರು ಇದರ ಲಾಭ ಪಡೆಯಲು ಮುಂದಾಗಬೇಕು ಎಂದು ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ದಿನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಅಡಿಯಲ್ಲಿ ಸ್ಥಳೀಯ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಂಘದ ಗುಂಪು ರಚಿಸಿಕೊಂಡು ಸಾಲ ಸೌಲಭ್ಯ ಪಡೆಯುವುದರ ಜೊತೆಗೆ ಉಪ ಕಸಬುಗಳನ್ನು ಮಾಡಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲತೆ ಹೊಂದಲು ತರಬೇತಿಗಳಲ್ಲಿ ಭಾಗವಹಿಸಿ ಲಾಭ ಪಡೆಯಬೇಕು ಎಂದು ಹೇಳಿದರು. ಪುರಸಭೆ ವ್ಯವಸ್ಥಾಪಕ ಶಂಭುಲಿಂಗ ಕಣ್ಣೆ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳಿಂದ ಅನುಕೂಲವಾಗಿದೆ. ಮಹಿಳೆಯರು ಪ್ರತಿಯೊಂದು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಯೋಜನೆ ಸಂಯೋಜಕ ಭೀಮಾಶಂಕರ ಬೆಳಮಗಿ ಮಾತನಾಡಿ, 2013-14ರಲ್ಲಿ ಯೋಜನೆ ಆರಂಭವಾಗಿದೆ. ಇದುವರೆಗೂ 67 ಗುಂಪು ರಚನೆಯಾಗಿವೆ. ಇದರಲ್ಲಿ ಸಂಘದ ತಲಾ ಗುಂಪಿಗೆ 10 ಸಾವಿರ ರೂ. ಸುತ್ತು ನಿಧಿಯನ್ನು ಯೋಜನೆಯಿಂದ ನೀಡಲಾಗಿದೆ. 10 ಮಂದಿ ಮಹಿಳಾ ಸದಸ್ಯರು ಒಳಗೊಂಡು ಒಂದು ಸಂಘವಾಗಿದೆ. ಇಂಥ 10 ಸಂಘ ಒಳಗೊಂಡಾಗ ಒಂದು ಒಕ್ಕೂಟವಾಗಿ ಪರಿಗಣಿಸಲ್ಪಟ್ಟಿದ್ದು, ಈ ಗುಂಪುಗಳಿಗೆ ಸ್ವಯಂ ಸಾಲ, ಬ್ಯಾಂಕ್ ಲೀಜ್ ಸಾಲ ಹಾಗೂ ಗುಂಪು ಸಾಲ ದೊರೆಯುವಂತೆ ಒತ್ತು ನೀಡಲು ಈ ತರಬೇತಿ ನೀಡಲಾಗುತ್ತಿದೆ ಎಂದರು.
ಸಮುದಾಯ ಸಂಪನ್ಮೂಲ ವ್ಯಕ್ತಿ ರಾಜಕುಮಾರ ಗುತ್ತೇದಾರ, ಗಾಯತ್ರಿ, ಸವಿತಾ ಪೂಜಾರಿ ಹಾಗೂ ವಿವಿಧ ಸ್ವ-ಸಹಾಯ ಸಂಘಗಳ ಸದಸ್ಯರು ಗುಂಪುಗಳ ಮಹಿಳೆಯರು ಪಾಲ್ಗೊಂಡಿದ್ದರು.