Advertisement

ಕರಾವಳಿಯಲ್ಲಿ ಕಡಲು ಮತ್ತೆ ಪ್ರಕ್ಷುಬ್ಧ ​​​​​​​

06:00 AM Oct 12, 2018 | |

ಕಟಪಾಡಿ/ಕಾಪು/ಮಲ್ಪೆ/ಮರವಂತೆ: ಚಂಡಮಾರುತದ ಭೀತಿ ದೂರವಾಗಿದ್ದರೂ, ಉಡುಪಿ ಕರಾವಳಿ ಭಾಗದಲ್ಲಿ ಕಡಲು ಮತ್ತೆ ಪ್ರಕ್ಷುಬ್ಧಗೊಂಡಿದೆ. 

Advertisement

ಕಡಲ ತೀರದ ರಸ್ತೆಗುಂಟ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಮತ್ತೆ ಮಳೆಗಾಲದ ಕಡಲಿನ ರೌದ್ರಾವತಾರ ನೆನಪಿಸುವಂತಾಗಿದೆ. ತೆರೆಗಳು ಅಪ್ಪಳಿಸುತ್ತಿರುವುದರಿಂದ ರಸ್ತೆಗಳಲ್ಲಿ ಮರಳು ತುಂಬಿದ್ದು ಕೆಲವೆಡೆ ಸಂಚಾರ ಕಷ್ಟ
ವಾಗಿದೆ. ಉದ್ಯಾವರ ಗ್ರಾ. ಪಂ. ವ್ಯಾಪ್ತಿಯ ಕಡೆತೋಟ, ಪಡುಕರೆ ಭಾಗದಲ್ಲಿ  ಬುಧವಾರ ರಾತ್ರಿಯಿಂದೀಚಿಗೆ  ಕಡಲಬ್ಬರ ಜೋರಾಗಿದೆ.

ಅಪಾಯದಂಚಿನಲ್ಲಿ ರಸ್ತೆ 
ಗುರುವಾರವೂ ಈ ಭಾಗದಲ್ಲಿ ಕಲ್ಲಿನ ತಡೆಗೋಡೆ ಮೇಲಿಂದ ತೆರೆಗಳು ಅಪ್ಪಳಿಸಿವೆ. ಇದರಿಂದ ಕಾಂಕ್ರೀಟ್‌ ರಸ್ತೆ ಸಹಿತ ಹಲವು ತೆಂಗಿನ ಮರಗಳು ಅಪಾಯದಂಚಿನಲ್ಲಿ ಇವೆ. ಇಲ್ಲಿನ ನಿವಾಸಿ ಸರೋಜಿನಿ ಎಂಬವರು ಮನೆಯಂಗಳಕ್ಕೆ ಸಮುದ್ರದ ನೀರು ಬಂದಿದ್ದು, ಮನೆಗೂ ಭೀತಿ ಕಾಡಿದೆ.  ಮೀನುಗಾರರು ತಮ್ಮ ದೋಣಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ .
ಮಲ್ಪೆ ಬೀಚ್‌ ಮತ್ತು ಕನಕೋಡ ಪಡುಕರೆ ಬಳಿ ಗುರುವಾರ ಮಧ್ಯಾಹ್ನದ ವೇಳೆ ಕಡಲ ಅಲೆಗಳ ಅಬ್ಬರ ಹೆಚ್ಚಾಗಿತ್ತು.
ಬೀಚ್‌ ಬಳಿಯ ಹಟ್‌ ಮತ್ತು ಸೈಂಟ್‌ಮೇರೀಸ್‌ಗೆ ತೆರಳುವ ಟಿಕೇಟ್‌ ಕೌಂಟರ್‌ದಾಟಿ ಮುನ್ನುಗ್ಗಿವೆ. 

ಕಡಲ ಕೊರೆತಕ್ಕೆ ಬೀಚ್‌ನಲ್ಲಿ ಸುಮಾರು 30-35ಮೀಟರ್‌ನಷ್ಟು ಭೂಭಾಗ ಮಾಯವಾಗಿದೆ.  ಪ್ರವಾಸಿಗರ ನಿಯಂತ್ರಣಕ್ಕೆ ಪರದಾಟ: ಕಡಲಬ್ಬರ ಕಂಡು ಪ್ರವಾಸಿಗರು ಪುಳಕಿತರಾಗಿದ್ದರೆ, ಅವರನ್ನು ಸಮುದ್ರದತ್ತ ಹೋಗದಂತೆ ತಡೆಯುವುದು ಜೀವರಕ್ಷಕ ತಂಡದವರಿಗೆ ಸವಾಲಾಗಿ ಕಾಡಿದೆ. ಇದಕ್ಕಾಗಿ ಮೈಕ್‌ ಮೂಲಕ ಪ್ರವಾಸಿಗರನ್ನು ಎಚ್ಚರಿಸಲಾಗಿದೆ. 

ತಡೆಗೋಡೆ ದಾಟಿದ ತೆರೆ 
ಪಡುಕರೆ ಕನಕೋಡ ಪಂಡರೀನಾಥ ಭಜನ ಮಂದಿರದ ಬಳಿ ಬಹಳ ಎತ್ತರದಲ್ಲಿ ಮುನ್ನುಗ್ಗಿ ಬರುತ್ತಿರುವ ಅಲೆಗಳು ತಡೆಗೋಡೆ ಹಾಕಿದ ಬಂಡೆಕಲ್ಲಿಗೆ ಅಪ್ಪಳಿಸಿ ಕಾಂಕ್ರೀಟ್‌ ರಸ್ತೆಯನ್ನು ದಾಟಿ ಸಮೀಪದ ತೋಟ ಸೇರಿದೆ. ತಡೆಗೋಡೆ ಬಂಡೆಕಲ್ಲು ಕೆಲವೆಡೆ ಸಮುದ್ರ ಸೇರುತ್ತಿವೆ. ಅಲೆಗಳ ಆರ್ಭಟ ಕಾರಣದಿಂದ ತಡೆಗೋಡೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇತ್ತ ಕಾಪುವಿನಲ್ಲೂ ಸಮುದ್ರದುಬ್ಬರ ಹೆಚ್ಚಾಗಿತ್ತು. ಸಂಜೆ ವೇಳೆ ಸಹಜವಾಗಿತ್ತು. ಬೀಚ್‌ಗೆ ಆಗಮಿಸಿದ್ದ ಪ್ರವಾಸಿಗರು ವಿಹರಿಸಿದರು. ಕರಾವಳಿ ಕಾವಲು ಪಡೆ, ಪೊಲೀಸರು ಸೂಕ್ತ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಿದ್ದರು.

Advertisement

ಮೀನುಗಾರಿಕೆಗೆ ಬ್ರೇಕ್‌ 
ಉಪ್ಪುಂದ:
ಮರವಂತೆಯ ಕಡಲ ತೀರದಲ್ಲಿ ಗುರುವಾರವೂ ಕಡಲಬ್ಬರ ಮುಂದುವರಿದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಪಾಯ ಉಂಟಾಗಿಲ್ಲ. ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಿಲ್ಲ. 

ಅ.10ರಂದು ಸಮುದ್ರ ಪ್ರಕ್ಷುಬ್ಧ ಗೊಂಡು ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದ್ದು, ದಡದಲ್ಲಿ ನಿಲ್ಲಿಸಿರುವ ದೋಣಿಗಳನ್ನು ಮೀನುಗಾರರು ಸುರಕ್ಷಿತ ಸ್ಥಳ ಸೇರಿಸಿದ್ದಾರೆ. ಗುರುವಾರ ಅಲೆಗಳ ಅಬ್ಬರದಲ್ಲಿ ಏರಿಳಿತ ಉಂಟಾಗಿದ್ದು,  ಮೀನುಗಾರರು ಮೀನುಗಾರಿಕೆ ನಡೆಸಲು ಮುಂದಾಗಲಿಲ್ಲ.  ಮಧ್ಯಾಹ್ನ ಬಳಿಕ ಸಮುದ್ರದ ಅಲೆಗಳ ಏರಿಳಿತ ಕಡಿಮೆಯಾಗಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next