ಸಿರಿಗೆರೆ: ಸಂಸ್ಕೃತ ಭಾಷೆ ಬಹು ಭಾಷೆಗಳಿಗೆ ಮಾತೃಸ್ವರೂಪಿಯಾಗಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ರಾಜಾಶ್ರಯದ, ಋಷಿವರ್ಯರ, ಬಲ್ಲವರ,ಬಲ್ಲಿದರ ಭಾಷೆಯಾಗಿದ್ದ ಸಂಸ್ಕೃತ ಇಂದಿಗೂ ಪ್ರಸ್ತುತವಾಗಿದೆ ಎಂದು ಉಪಪ್ರಾಚಾರ್ಯ ಜೆ.ಡಿ. ಬಸವರಾಜ್ ಹೇಳಿದರು.
ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ
ಸಂಸ್ಕೃತ ಸಪ್ತಾಹದಲ್ಲಿ ಅವರು ಮಾತನಾಡಿದರು. “ಅದರಕ್ಕೆ ಕಹಿ ಉದರಕ್ಕೆ ಸಿಹಿ’ ಎಂಬಂತೆ ಸಂಸ್ಕೃತ ಭಾಷೆ ಇದೆ. ಸಂಸ್ಕೃತ ಮುತ್ತೈದೆಯರ ಕೊರಳಲ್ಲಿನ ಕರಿಮಣಿಯ ಮಧ್ಯೆ ಇರುವ ಹವಳದಂತೆ ಎಂದು ಕವಿ ಮುದ್ದಣ್ಣ ಸಂಸ್ಕೃತವನ್ನು ಬಣ್ಣಿಸಿದ್ದಾನೆ. ನಮ್ಮ ವಾಕಟುತ್ವಕ್ಕೆ, ಪಾಂಡಿತ್ಯಕ್ಕೆ, ಭಾಷಾ ಸ್ಪಷ್ಟತೆಗೆ ಸಂಸ್ಕೃತ ಸಹಕಾರಿ ಎಂದರು. ಅಧ್ಯಾಪಕ ಧರ್ಮಕಾಂತ ಶರ್ಮ ಮಾತನಾಡಿ,
ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಚಾರ್ಯರಂತವರು ಜನ್ಮವೆತ್ತ ಕರ್ನಾಟಕ, ತನ್ನ ನಾಡಿನಲ್ಲಿ ಸಂಸ್ಕೃತ ಅಧ್ಯಯನ ಮಾಡುವ ಅನೇಕ ಶಿಷ್ಯರನ್ನು ಹುಟ್ಟು ಹಾಕಿದೆ ಎಂದರು. ಶಿಕ್ಷಕ ಚನ್ನಕೇಶ್ವರ ರೊಟ್ಟಿ ಮಾತನಾಡಿ, ಇಡೀ ವಿಶ್ವದಲ್ಲಿಯೇ ಲಿಪಿಯನ್ನು ಕಂಡ ಪ್ರಥಮ ಭಾಷೆ ಸಂಸ್ಕೃತ. ಇದರಲ್ಲಿರುವ ವಿದ್ವತ್, ಸಂಸ್ಕಾರ, ಸಂಸ್ಕೃತಿಯನ್ನು ಬೇರೆ ದೇಶದವರು ಅನುಕರಿಸುತ್ತಿದ್ದಾರೆ. ಆಯುರ್ವೇದ, ಪುರಾಣಗಳನ್ನೊಳಗೊಂಡ ಪ್ರಥಮ ಭಾಷೆ ಇದಾಗಿದೆ. ಈ ಭಾಷೆಯಿಂದ ಆತ್ಮವಿಶ್ವಾಸವನ್ನು ಕಂಡುಕೊಳ್ಳಬಹುದು ಎಂದರು.
ಮಂಜುಳಾ ಕರೆಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರಕೋಶ, ಸುಭಾಷಿತ, ಭಗವದ್ಗೀತೆ, ಕಂಠಪಾಠ ಸ್ಪರ್ಧೆಯಲ್ಲಿ ಕೆ.ಬಿ. ಕಿರಣ್, ಎಸ್. ಆಕಾಶ್, ಕಾವ್ಯ ಬಹುಮಾನ ಪಡೆದುಕೊಂಡರು.