Advertisement

Haveri: ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದು-ಡಾ| ಶಿವಲಿಂಗಪ್ಪ

05:51 PM Dec 14, 2023 | Team Udayavani |

ಹಾವೇರಿ: ಆಧುನಿಕ ಜಗತ್ತು ಇಂದು ಅತ್ಯಂತ ಸ್ಪರ್ಧಾತ್ಮಕವಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಅತೀ ಪ್ರಮುಖವಾಗಿದ್ದು, ಮಕ್ಕಳು ಸರ್ವತೋಮುಖ ಅಭಿವೃದ್ಧಿಯಾಗಿ, ಅವರಲ್ಲಿ ಆಂತರಿಕ ಮತ್ತು ಬಹಿರಂಗ ಸಮಾಜಮುಖಿ ವ್ಯಕ್ತಿತ್ವದ ಬೆಳವಣಿಗೆಗೆ ತಾಯಂದಿರ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ವೈದ್ಯ ಡಾ| ಶಿವಲಿಂಗಪ್ಪ ಬೆನ್ನೂರ ಹೇಳಿದರು.

Advertisement

ನಗರದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ತಾಯಂದಿರ ಸಭೆ ಉದ್ಘಾಟಿಸಿ ಮಾತನಾಡಿದರು.

ಮಗುವಿನ ಶಿಕ್ಷಣ ಪ್ರಾರಂಭವಾಗುವುದು ಮನೆಯಲ್ಲಿಯೇ. ಮಕ್ಕಳು, ಸ್ವಭಾವ, ಅಭ್ಯಾಸ, ಶಿಸ್ತು, ಹೊಣೆಗಾರಿಕೆ ಮುಂತಾದ ಮೌಲ್ಯಗಳನ್ನು ನಮ್ಮನ್ನು ನೋಡಿಯೇ ಅನುಕರಿಸುತ್ತಾರೆಯೇ ಹೊರತು ಬೋಧನೆಯಿಂದಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಬೆಂಬಲ, ಕಲಿಯಲು ಉತ್ತಮ ವಾತಾವರಣ ಕಲ್ಪಿಸಿದಾಗ ಕಲಿತ ಶಾಲೆ, ಪಾಲಕರಿಗೆ ಹೆಸರು
ತರುತ್ತಾರೆ ಹಾಗೂ ಉತ್ತಮ ಪ್ರಜೆಯಾಗುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಚನ್ನಮ್ಮ ಅಂತರವಳ್ಳಿ ಮಾತನಾಡಿ, ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೊಸ ವಿಧಾನದಲ್ಲಿ ನಡೆಯುತ್ತದೆ. ಪರೀಕ್ಷೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿ ಮಾರ್ಪಡಿಸಿದ್ದು, 3 ಪರೀಕ್ಷೆಗಳಲ್ಲಿ ಉತ್ತಮ ಅಂಕಗಳ ಅಧಾರದ ಸರಾಸರಿ ಅಂಕಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಲಾಗುತ್ತದೆ ಎಂದು ಹೇಳಿದರು.

ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಕ್ಕಳಲ್ಲಿ ಉತ್ತಮ ಕೌಶಲಗಳನ್ನು ಬೆಳೆಸಲು ಸಾಧ್ಯ. ಕೇವಲ ಅಂಕಗಳನ್ನು ಗಳಿಸುವುದಷ್ಟೇ ಅಲ್ಲದೇ, ಅದರಾಚೆಗೆ ಜೀವನದಲ್ಲಿ ಯಶಸ್ಸು ಗಳಿಸಲು ಅಗತ್ಯ ಅರಿವು ಮತ್ತು ಸಾಮಾಜಿಕ ಕೌಶಲ್ಯಗಳನ್ನು ಗಳಿಸುವಂತೆ ಮಾಡುವ ಸಾಮೂಹಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

Advertisement

ಪಾಲಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಎಸ್‌.ಎನ್‌. ಮಳೆಪ್ಪನವರ, ವಿ.ಬಿ. ಬನ್ನಿಹಳ್ಳಿ, ಶೋಭಾ ನಾಶೀಪುರ, ರೂಪಾ ಟಿ.ಆರ್‌., ರವಿ ಕರಲಿಂಗಣ್ಣನವರ, ಆನಂದ ಎಂ., ಎಂ.ಎಸ್‌ .ಹಿರೇಮಠ, ಬಸವರಾಜ ಅಕ್ಕಿ, ಚಂದ್ರಪ್ಪ ಅಂಗಡಿ, ಪ್ರಕಾಶ ಕುಡತರಕರ್‌, ನಾಗರತ್ನಾ ಕಟಗಿ, ಸವಿತಾ ಪಂಪಣ್ಣನವರ, ನಗೀನಾಭಾನು ಕರ್ಜಗಿ ಇತರರು ಇದ್ದರು. ಸಹನಾ ಪ್ರಾರ್ಥಿಸಿದರು. ಎಚ್‌.ಕೆ.ಆಡಿನ ಸ್ವಾಗತಿಸಿ, ಎಸ್‌.ಸಿ.ಮರಳಿಹಳ್ಳಿ ನಿರೂಪಿಸಿ, ಲೀಲಾವತಿ ಅಂದಾನಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next