ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನ ಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ಗ್ರಾಮೀಣ ಯುವಕರಿಗೆ ಜೀವನೋಪಾಯ ಭದ್ರತೆ ಪ್ರಾಯೋಜನೆಯಡಿ ಕೌಶಲ್ಯಾಭಿವದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ.ಮಲ್ಲಿಕಾರ್ಜುನಗೌಡ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ಕೃಷಿಯಲ್ಲಿ ಎರೆಹುಳು ಗಳ ಪಾತ್ರ, ಯುವಕರಿಗೆ ಕೃಷಿಯಲ್ಲಿರುವ ಹಲವಾರು ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಯುವಕರು ಕೃಷಿ ಕಡೆಗೆ ಗಮನ ತೋರುತ್ತಿರುವುದು ಆಶಾದಾಯಕ. ಯುವಕರು ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ಪಡೆಯುವುದರಿಂದ ಉದ್ಯೋಗಕ್ಕಾಗಿ ನಗರಗಳಿಗೆ ಬರುವುದನ್ನು ತಪ್ಪಿಸಬಹುದು ಎಂದರು.
ಭಾರತ ಸರ್ಕಾರ ಕೃಷಿ ತಂತ್ರಜ್ಞಾನ ಮಾಹಿತಿ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಕೇಂದ್ರದ ನೋಡಲ್ ಅಧಿಕಾರಿ ಡಾ.ತಿಮ್ಮಪ್ಪ, ಯುವಕರಿಗೆ ಕೇಂದ್ರ ಸರ್ಕಾರದಿಂದ ಲಭ್ಯವಿರುವ ವಿವಿಧ ಉದ್ಯಮಗಳ ಬಗ್ಗೆ ಮಾಹಿತಿ ನೀಡಿ ಪ್ರಾಯೋಜನೆ ವತಿಯಿಂದ ಮುಂದಿನ ವರ್ಷ ದೊರೆಯಲಿರುವ ವಿವಿಧ ಉದ್ಯಮಶೀಲ ಕೌಶಲ್ಯ ತರಬೇತಿಗಳ ಕುರಿತು ವಿಷಯ ಹಂಚಿಕೊಂಡರು.
ತರಬೇತಿ ಸಂಯೋಜಕರಾದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಿ.ವೀರನಾಗಪ್ಪ, ಎರೆ ಹುಳು ಗೊಬ್ಬರ ತಯಾರಿಕೆ ಬಗ್ಗೆ ಉಪನ್ಯಾಸ ನೀಡಿ ಎರೆಗೊಬ್ಬರದಿಂದ ಮಣ್ಣಿನ ಫಲವತ್ತತೆ ಮೇಲಾಗುವ ಪರಿಣಾಮ, ಎರೆಗೊಬ್ಬರ ಬಳಕೆ ಮತ್ತು ಎರೆಹುಳು ಗೊಬ್ಬರವನ್ನು ಒಂದು ಉದ್ದಿಮೆಯಾಗಿ ಸ್ಥಾಪಿಸುವುದರ ಬಗ್ಗೆ ಪ್ರಾಯೋಗಿಕ ತರಗತಿ ಹಮ್ಮಿಕೊಂಡಿದ್ದರು. ಡಾ.ಡಿ.ವಿ.ನವೀನ್, ಡಾ.ಸಿ.ಎನ್.ನಳಿನಾ ಸಹಾಯಕ ಪ್ರಾಧ್ಯಾಪಕರು, ರೇಷ್ಮೆ ಕೃಷಿ ಮಹಾವಿದ್ಯಾಲಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತುದಾರರಿಗೆ ಎರೆಹುಳು ಗೊಬ್ಬರ ತಯಾರಿಕೆ ವಿಧಾನ, ತ್ಯಾಜ್ಯ ಪದಾರ್ಥಗಳ ಸಿದ್ಧತೆ ಮತ್ತು ಎರೆಹುಳುಗಳ ಜೀವನ ಚಕ್ರದ ಬಗ್ಗೆ ತರಬೇತಿ ನೀಡಿದರು.
ಇದನ್ನೂ ಓದಿ:ಮಕ್ಕಳು ಹರಿವ ನೀರಿನಂತೆ
ಕೇಂದ್ರದ ವಿಜ್ಞಾನಿಗಳಾದ ಡಾ.ಜೆ.ವೆಂಕಟೇಗೌಡ, ಡಾ.ಬಿ.ಮಂಜುನಾಥ್ ಸಾವಯವ ಗೊಬ್ಬರ ತಯಾರಿಕೆ ವಿಧಾನ, ಎರೆಹುಳುಗಳ ಸಂರಕ್ಷಣೆ ಕುರಿತು ವಿವರಿಸಿದರು. ಸಾವಯವ ಸಂಶೋಧನಾ ಕೇಂದ್ರದ ಡಾ. ಆರ್. ಎನ್.ಲಕ್ಷ್ಮೀಪತಿ, ತಜ್ಞರಾದ ಎನ್.ಜಗದೀಶ್ ಶಿವಪ್ರಸಾದ್, ಎರೆಗೊಬ್ಬರದ ಬಳಕೆ ಹಾಗೂ ಗೊಬ್ಬರದ ವಿಶ್ಲೇಷಣೆ ಬಗ್ಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ್ದ 40 ಜನ ಯುವಕರಿಗೆ ಎರೆಗೊಬ್ಬರ ತಯಾರಿಕೆ ತೊಟ್ಟಿ, ಜರಡಿ, ವಾಟರ್ ಕ್ಯಾನ್ ಮತ್ತು 1 ಕಿ.ಗ್ರಾಂ. ಎರೆಹುಳು ವಿತರಿಸಿದರು.