Advertisement

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

12:30 AM Nov 28, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭವಾಗಿದ್ದರೂ ಅಕ್ರಮ ಮರಳು ಸಾಗಾಟ ಪ್ರಕರಣಗಳು ಹೆಚ್ಚಾಗಿವೆ. 1 ಮೆಟ್ರಿಕ್‌ ಟನ್‌ ಮರಳಿಗೆ ಗಣಿ ಇಲಾಖೆಯ ದರ 300ರಿದ 700 ರೂ.ಗಳಿದ್ದರೂ ಮಾರುಕಟ್ಟೆಯಲ್ಲಿ ದುಪಟ್ಟಿಗಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಅಕ್ರಮ ಮರಳು ಸಾಗಾಟ ಸಂಬಂಧಿಸಿ ಈ ವರ್ಷದಲ್ಲಿಯೇ ಒಟ್ಟು 443 ಪ್ರಕರಣಗಳು ದಾಖಲಾಗಿದ್ದು, 1,03,52,984 ರೂ.ದಂಡ ವಿಧಿಸಲಾಗಿದೆ.

Advertisement

ಅಕ್ರಮ ಮರಳುಗಾರಿಕೆ ಗಣಿ ಇಲಾಖೆಗೆ ದಿನನಿತ್ಯ ನೂರಾರು ಕರೆಗಳು ಬರುತ್ತಿವೆ. ಆದರೆ ಅನಿರೀಕ್ಷಿತ ದಾಳಿ ನಡೆಸಲು ಗಣಿ ಇಲಾಖೆಯಲ್ಲಿ ಸಿಬಂದಿ ಕೊರತೆಯೂ ಇದೆ. ಪ್ರಸ್ತುತ ಮಂಜೂರಾದ 5ರಲ್ಲಿ 2 ಹುದ್ದೆಗಳು ಖಾಲಿಬಿದ್ದಿವೆ. ಇದು ಅಕ್ರಮ ಮರಳು ದಂಧೆಕೋರರಿಗೆ ಅನುಕೂಲವಾದಂತಿದೆ.

ಅಧಿಕ ದರಕ್ಕೆ ವಿವಿಧ ಸಬೂಬು
ನಿಗದಿಗಿಂತ ಅಧಿಕ ದರ ವಸೂಲು ಮಾಡುತ್ತಿರುವುದು ಯಾಕೆ ಎಂದು ಲಾರಿ ಮಾಲಕರನ್ನು ಪ್ರಶ್ನಿಸಿದರೆ ಸಾಗಾಟ ವೆಚ್ಚ ಎಂಬ ಉತ್ತರ ಸಿಗುತ್ತದೆ. ಇಂತಿಷ್ಟು ಕಿ.ಮೀ.ಗೆ ನಿರ್ದಿಷ್ಟ ಶುಲ್ಕ ವಸೂಲು ಮಾಡಬೇಕೆಂಬ ನಿಯಮಗಳನ್ನೂ ಉಲ್ಲಂಘಿಸಲಾಗುತ್ತಿದೆ.

ಗಣಿ ಇಲಾಖೆಯಷ್ಟೇ ಅಲ್ಲದೆ ಅರಣ್ಯ, ಕಂದಾಯ, ಪೊಲೀಸ್‌ ಇಲಾಖೆ, ತಹಶೀಲ್ದಾರರಿಗೂ ಅಕ್ರಮ ಮರಳುಗಾರಿಕೆ ನಡೆಸುವವರ ಮೇಲೆ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ. ಆದರೆ ಹೆಚ್ಚಿನ ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಮರಳು ದಂಧೆ ವ್ಯಾಪಕವಾಗಿ ನಡೆಯುವಂತಾಗಿದೆ.

ನಾಲ್ಕು ಕಡೆ ಹೆಚ್ಚುವರಿ ಬ್ಲಾಕ್‌ ಗುರುತು
ಸರಕಾರಿ ಕಾಮಗಾರಿಗಳಿಗಾಗಿ ಮೀಸಲಿರಿ ಸಿರುವ ಮರಳು ಬ್ಲಾಕ್‌ಗಳ ಮೂಲಕ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 2,56,060 ಮೆಟ್ರಿಕ್‌ ಟನ್‌ ಮರಳು ಸಾಗಿಸುವ ಬಗ್ಗೆ ಕುಂದಾಪುರ ಹಾಗೂ ಬೈಂದೂರಿನ 4 ಕಡೆಗಳಲ್ಲಿ ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಇದರ ಕಾರ್ಯಾಚರಣೆ ಇನ್ನಷ್ಟೇ ನಡೆಯಬೇಕಿದೆ. ಈ ನಡುವೆ ಎಂ ಸ್ಯಾಂಡ್‌ಗಳಿಗೂ ಅಧಿಕ ಬೇಡಿಕೆ ಯಿದ್ದು, ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ.

Advertisement

ಸಿಆರ್‌ಝೆಡ್‌
ವ್ಯಾಪ್ತಿಯಲ್ಲಿಲ್ಲ ಮರಳುಗಾರಿಕೆ
ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ನಿಷೇಧ ಹೇರಿದ್ದ ರಾಷ್ಟ್ರೀಯ ಹಸುರು ಪ್ರಾಧಿಕಾರದ ಆದೇಶದ ವಿರುದ್ಧ ರಾಜ್ಯ ಸರಕಾರ ಸುಪ್ರಿಂಕೋರ್ಟ್‌ ಮೊರೆ ಹೋಗಿದ್ದು, ಇದುವರೆಗೆ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಸದ್ಯಕ್ಕೆ ಮರಳುಗಾರಿಕೆ ನಡೆಸುತ್ತಿಲ್ಲ.

ಲಭ್ಯವಿರುವ ಮರಳು
ಜಿಲ್ಲೆಯ ಮೈನಿಂಗ್‌ ಬ್ಲಾಕ್‌ಗಳಲ್ಲಿ 98,637 ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ 1,22,570 ಮೆಟ್ರಿಕ್‌ ಟನ್‌ ಸಹಿತ ಒಟ್ಟು 2,21,207 ಮೆಟ್ರಿಕ್‌ ಟನ್‌ ಮರಳು ಲಭ್ಯವಿದ್ದು, ಇ ಸ್ಯಾಂಡ್‌ ಬುಕಿಂಗ್‌ನಲ್ಲಿ ಲಭ್ಯವಿದೆ. ಸಾಗಾಟ ವೆಚ್ಚ ಹೊರತುಪಡಿಸಿ ಗ್ರಾ.ಪಂ.ವ್ಯಾಪ್ತಿಯಲ್ಲಿ 1 ಮೆಟ್ರಿಕ್‌ ಟನ್‌ಗೆ 300 ರೂ.ಹಾಗೂ ಮೈನಿಂಗ್‌ ಬ್ಲಾಕ್‌ಗಳಲ್ಲಿ 1 ಮೆಟ್ರಿಕ್‌ ಟನ್‌ಗೆ 700 ರೂ.ದರ ನಿಗದಿಪಡಿಸಲಾಗಿದೆ.

ದೂರು ನೀಡಿ
ಪ್ರಸ್ತುತ ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ವಿವಿಧ ರೀತಿಯ ಅಕ್ರಮಗಳಲ್ಲಿ ಭಾಗಿಯಾದವರ ಮೇಲೆ ದಂಡ ವಿಧಿಸಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ತಮ್ಮ ದೂರುಗಳಿದ್ದರೆ ಗಣಿ, ಪೊಲೀಸ್‌, ಕಂದಾಯ ಇಲಾಖೆ ಅಥವಾ ತಹಶೀಲ್ದಾರ್‌ಗೆ ದೂರು ನೀಡಬಹುದು.
– ಸಂದೀಪ್‌ ಯು., ಹಿರಿಯ ಭೂ ವಿಜ್ಞಾನಿ,ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next