ರಾಮನಗರ: ನ್ಯಾಯಾಲಯದಲ್ಲಿ ವಿಚಾರಣೆಗೆಂದು ಆಗಮಿಸಿದ್ದ “ಯುಗಪುರುಷ’ ಚಿತ್ರದ (ಸದ್ಯದಲ್ಲೆ ಬಿಡುಗಡೆಯಾಗಬೇಕಾಗಿದೆ) ನಾಯಕ ನಟ ಅರ್ಜುನ್ ದೇವ್ ಅವರ ಮೇಲೆ ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ಮಾಯಗಾನಹಳ್ಳಿ ಬಳಿ ತಮ್ಮ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯವೊಂದರ ವಿಚಾರಣೆಗೆ ಮಂಗಳವಾರ ಬೆಳಗ್ಗೆ ರಾಮನಗರಕ್ಕೆ ಆಗಮಿಸಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನ್ಯಾಯಾಲಯದ ಆವರಣ ಪ್ರವೇಶಿಸಿಲು ತಮ್ಮ ಕಾರು ತಿರುಗಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಮತ್ತು ಕಪ್ಪು$ಬಣ್ಣದ ಜರ್ಕಿನ್ ಧರಿಸಿದ ಅಪರಿಚಿತರು ನಾಲ್ವರು ಎರಡು ಬೈಕ್‌ಗಳಲ್ಲಿ ಬಂದಿದ್ದಾರೆ.
ಈ ಪೈಕಿ ಇಬ್ಬರು ಏಕಾಏಕಿ ಬೈಕ್‌ನ್ನು ಕಾರಿನ ಮುಂದೆ ನಿಲ್ಲಿಸಿ, ಕಬ್ಬಿಣದ ರಾಡ್‌ನಿಂದ ಕಾರಿನ ಮುಂಭಾಗದ ಗಾಜಿನ ಒಡೆದಿದ್ದಾರೆ. ನಟ ಅರ್ಜುನ್ ದೇವ್ ಕಾರಿನ ಮುಂಭಾಗ ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದರು. ಗಾಜಿನ ತುಣುಕು ಅವರ ಮೇಲೆ ಬಿದ್ದಿದೆ. ಏಕಾಏಕಿ ನಡೆದ ದಾಳಿಯಿಂದಾಗಿ ಗಲಿಬಿಲಿಗೊಂಡು ಚೀರುತ್ತಾ ಕಾರಿನ ಬಾಗಿಲು ತೆಗೆದಿದ್ದಾರೆ. ಅದೇ ಕ್ಷಣ ದುಷ್ಕರ್ಮಿ ಮತ್ತೂಂದು ಬಾರಿ ಗಾಜಿನ ಮೇಲೆ ರಾಡ್ ಬೀಸಿದ್ದಾನೆ.
ಅಷ್ಟರಲ್ಲಾಗಲೇ ಸಾರ್ವಜನಿಕರು ಇತ್ತ ಗಮನ ಹರಿಸಿ ಧಾವಿಸಲಾರಂಭಿಸಿದ್ದರಿಂದ ದುಷ್ಕರ್ಮಿಗಳು ನಿನ್ನನ್ನು ಬಿಡೋಲ್ಲ ಎಂಬ ಸಂಜ್ಞೆಯ ಮೂಲಕ ಎಚ್ಚರಿಕೆ ಕೊಟ್ಟು ಪರಾರಿಯಾಗಿದ್ದಾರೆ ಎಂದು ಅರ್ಜುನ್ ದೇವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ದುಷ್ಕರ್ಮಿಗಳ ಬಳಿ ಮಾರಕಾಸ್ತ್ರಗಳಿದ್ದವು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವೈರಿಗಳಿಲ್ಲ: ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಅರ್ಜುನ್ ದೇವ್ ಘಟನೆ ತಮಗೆ ಆಶ್ಚರ್ಯ ತಂದಿದೆ. ತಮಗೆ ಯಾವ ವೈರಿಗಳು ಇಲ್ಲ. ಜೂನ್ 9ರಂದು ತಾವು ಅಭಿನಯಿಸಿದ ಚಿತ್ರ “ಯುಗಪುರುಷ’ ಬಿಡುಗಡೆಯಾಗಬೇಕಾಗಿದೆ. ತಾಲೂಕಿನ ಮಾಯಗಾನಹಳ್ಳಿ ಬಳಿ ತಮ್ಮ ಪಿತ್ರಾರ್ಜಿತ ಸುಮಾರು 15 ಎಕರೆ ಭೂಮಿ ಇದೆ. ಈ ಭೂಮಿಗೆ ಸಂಬಂಧಿಸಿದಂತೆ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ವಿಚಾರಣೆಗೆಂದು ಬಂದಿದ್ದ ವೇಳೆ ಈ ಘಟನೆಯಾಗಿದೆ ಎಂದರು.
ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಘಟನೆ ಸಂಬಂಧ ಅರ್ಜುನ್ ದೇವ್ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭೂ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿಲ್ಲ. ಐಜೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.