Advertisement

ರಸ್ತೆ ಬದಿ, ಫುಟ್‌ಪಾತ್‌ಗಳ ಗೂಡಂಗಡಿ ತೆರವಿಗೆ ಸೂಚನೆ

08:50 AM Jul 27, 2017 | Team Udayavani |

ಮಹಾನಗರ: ನಗರದ ರಸ್ತೆ ಬದಿ, ಫುಟ್‌ಪಾತ್‌ಗಳಲ್ಲಿ ಗೂಡಂಗಡಿ, ವಾಹನ  ಪಾರ್ಕಿಂಗ್‌ನಿಂದ  ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೇಯರ್‌ ಕವಿತಾ ಸನಿಲ್‌ ನೇತೃತ್ವದ ತಂಡ ಸಂಚಾರ ಪೊಲೀಸರ ಸಹಕಾರದೊಂದಿಗೆ ಬುಧವಾರ ನಗರದ ಪಿವಿಎಸ್‌ ವೃತ್ತದ ಬಳಿಯಿಂದ ಸ್ಟೇಟ್‌ಬ್ಯಾಂಕ್‌ವರೆಗೆ ನಗರ ಪ್ರದಕ್ಷಿಣೆ ನಡೆಸಿತು. 

Advertisement

ಈ ಸಂದರ್ಭದಲ್ಲಿ ಮೇಯರ್‌ ಅವರ ನಿರ್ದೇಶನದಂತೆ ಫುಟ್‌ಪಾತ್‌ನ ಗೂಡಂಗಡಿ ತೆರವಿಗೆ ಸೂಚನೆ ನೀಡಲಾಯಿತು. 
ವಾಣಿಜ್ಯ ಕಟ್ಟಡಗಳ ಮುಂಭಾಗ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿನ ನೋ ಪಾರ್ಕಿಂಗ್‌ ಬೋರ್ಡ್‌ ಗಳನ್ನು ತೆರವುಗೊಳಿಸಲಾಯಿತು. ಹಂಪನಕಟ್ಟೆ ಯಲ್ಲಿ ಚಪ್ಪಲಿ, ಬಟ್ಟೆ ಅಂಗಡಿಗಳ ಮುಂಭಾಗ ಫುಟ್‌ಪಾತ್‌ನಲ್ಲಿ ಇಟ್ಟಿದ್ದ ಸಾಮಗ್ರಿಗಳನ್ನು ತೆಗೆದು ಪಾಲಿಕೆಯ ವಾಹನಕ್ಕೆ ಹಾಕಲಾಯಿತು. ಜತೆಗೆ ರಸ್ತೆಯನ್ನು ಶೀಘ್ರ ದುರಸ್ತಿ ಪಡಿಸುವಂತೆ ಅಧಿಕಾರಿಗಳಿಗೆ ಮೇಯರ್‌ ಆದೇಶಿಸಿದರು. 

ದಂಡ ವಿಧಿಸಿ
ಫುಟ್‌ಪಾತ್‌ನಲ್ಲಿ ಯಾರಾದರೂ ವಾಹನ ನಿಲ್ಲಿಸಿದರೆ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮಕೈಗೊಳ್ಳಿ. ಒಂದೆ ರಡು ಬಾರಿ ದಂಡ ಕಟ್ಟಿದರೆ ಬಳಿಕ ವಾಹನ ನಿಲ್ಲಿಸುವುದಿಲ್ಲ ಎಂದು ಮೇಯರ್‌ ಪೊಲೀಸರಿಗೆ ಸೂಚಿಸಿದರು. ಪಿವಿಎಸ್‌ನ ಅಶ್ವಥಕಟ್ಟೆ ಬಳಿ ಮಾತ್ರ ರಿಕ್ಷಾ ಪಾರ್ಕಿಂಗ್‌ಗೆ ಅವಕಾಶವಿರುತ್ತದೆ. ಬಸ್‌ ನಿಲ್ದಾಣದ ಬಳಿ ರಿಕ್ಷಾ ಪಾರ್ಕ್‌ ಮಾಡಿದರೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ನಗರದ ಕರಂಗಲ್ಪಾಡಿಯಲ್ಲಿ ರಸ್ತೆಯಲ್ಲೇ ಆಟೋ ನಿಲ್ದಾಣ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಸ್ಥಳೀಯ ಕಟ್ಟಡದ ಮುಂಭಾಗದ ಸ್ಥಳ ಯಾರಿಗೆ ಸೇರಿದೆ ಎಂಬುದನ್ನು ಪರಿಶೀಲಿಸಿ ಪಾಲಿಕೆಗೆ ಸೇರಿದ್ದರೆ ಅಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡುವಂತೆ ಆದೇಶಿಸಿದರು.

ಕಮಾನು ತೆರವುಗೊಳಿಸಿ
ನಗರದ ಮಿಲಾಗ್ರಿಸ್‌ನ ಆಟೋ ನಿಲ್ದಾಣದಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಮಾನು ನಿರ್ಮಿಸಲಾಗಿದ್ದು, ಇದಕ್ಕೆ ಅನುಮತಿ ನೀಡಿದವರು ಯಾರು? ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಕಾರ್ಪೊರೇಟರ್‌ ಎ.ಸಿ. ವಿನಯ ರಾಜ್‌ ಆರೋಪಿಸಿದರು. ಬಳಿಕ ಕಮಾನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಮೇಯರ್‌ ಅವರು ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.  

Advertisement

ನಿಮ್ಮ ಸಮಸ್ಯೆ ಏನು ಹೇಳಿ
ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ಕಾರ್ಯಾ ಚರಣೆಗೆ ಕೆಲವೊಂದು ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಅದರೆ ಮೇಯರ್‌ ಅವರು ಅವರ ಗುಂಪಿನ ಮಧ್ಯಕ್ಕೆ ತೆರಳಿ ನಿಮ್ಮ ಸಮಸ್ಯೆ ಏನು ಎಂದು ಹೇಳಿ ಎಂದರು. ನಿಮಗೆ ಬೀದಿ ಬದಿ ವ್ಯಾಪಾರಿ ವಲಯ ಮಾಡಿಕೊಡಲಾಗಿದೆ. ಆದರೆ ನೀವು ಅಲ್ಲಿಗೆ ತೆರಳಿ ವ್ಯಾಪಾರ ಮಾಡುವ ಬದಲು ರಸ್ತೆ ಬದಿಯಲ್ಲಿ ತೊಂದರೆ ನೀಡುತ್ತಿದ್ದೀರಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ವ್ಯಾಪಾರಿಗಳು ಸುಮ್ಮನಾದರು. ಮುಂದೆ ಇನ್ನೊಂದು ರಸ್ತೆಯಲ್ಲಿ ಸಮೀಕ್ಷೆ ನಡೆಸು ವುದಾಗಿ ತಿಳಿಸಲಾಯಿತು. ಸಮೀಕ್ಷೆಯಲ್ಲಿ ಉಪಮೇಯರ್‌ ರಜನೀಶ್‌, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸಬಿತಾ ಮಿಸ್ಕಿತ್‌, ಅಬ್ದುಲ್‌ ರವೂಫ್‌, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ರತಿಕಲಾ, ಅಪ್ಪಿ, ಕವಿತಾ, ಡಿಸಿಪಿ ಹನುಮಂತರಾಯ, ಎಸಿಪಿ ತಿಲಕ್‌ಚಂದ್ರ, ಸಂಚಾರಿ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next