Advertisement

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

06:59 PM Nov 05, 2024 | Team Udayavani |

ಬೆಂಗಳೂರು: ವಕ್ಫ್ ಆಸ್ತಿ ಒತ್ತುವರಿ ನೆಪದಲ್ಲಿ ರಾಜ್ಯದ ರೈತರ ಭೂಮಿ‌ ಕಬಳಿಸಲು ಸರ್ಕಾರ ಮುಂದಾಗಿದ್ದು ಆಕಸ್ಮಿಕವೂ ಅಲ್ಲ, ಕಣ್ತಪ್ಪಿನ ಕಾರ್ಯವೂ ಅಲ್ಲ,  ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮಾಜಿ ಸಚಿವ, ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.

Advertisement

ಈ ಹಿಂದೆ ಆಯುಕ್ತರಾಗಿದ್ದ ಶಾಲಿನಿ ರಜನೀಶ್ ಕಳೆದ ಏಪ್ರಿಲ್‌ ನಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 21,767 ಎಕರೆ ವಕ್ಫ್ ಭೂಮಿ ವಶಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಸಂಬಂಧ ಕಂದಾಯ ಹಾಗೂ ವಕ್ಫ್ ಇಲಾಖೆ ಜಂಟಿ ಸಭೆ ನಡೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆ ಇಲ್ಲದೇ ಅಧಿಕಾರಿಗಳು ಇಂತಹ ದರಿದ್ರ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿತ್ತೇ ? ಎಂದು ಪ್ರಶ್ನಿಸಿದ್ದಾರೆ.

ಈಗ ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಬಿಜೆಪಿಯವರು ಅನಗತ್ಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಬುರುಡೆ ಬಿಡುತ್ತಿದ್ದಾರೆ. ಇಷ್ಟೆಲ್ಲ ಸ್ಪಷ್ಟೀಕರಣ ನೀಡುವ ಮೊದಲು ಶಾಲಿನಿ ರಜನೀಶ್, ರಾಜೇಂದ್ರ ಕುಮಾರ್ ಕಟಾರಿಯಾರಿಗೆ ಪತ್ರ ಬರೆದಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ನೀವು ಸ್ಪಷ್ಟಪಡಿಸಿ. ಆಗ ನಿಮ್ಮ ಸರ್ಕಾರದ ಜೆಹಾದಿ ನೀತಿ ಬಯಲಾಗುತ್ತದೆ ಎಂದು ಟೀಕಿಸಿದ್ದಾರೆ.

ಮಂಥ್ಲಿ ಕಲೆಕ್ಟರ್ ಸಚಿವ ತಿಮ್ಮಾಪುರರನ್ನು ಸಂಪುಟದಿಂದ ಕಿತ್ತೊಗೆಯಿರಿ:
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿರುವ ಅವರು, ಹಲೋ ಅಪ್ಪಾದಿಂದ ಆರಂಭವಾದ ರಾಜ್ಯ ಸರ್ಕಾರದ ವರ್ಗಾವಣೆ ವ್ಯವಹಾರ ಈಗ ಅಬಕಾರಿ ಇಲಾಖೆ ಸಚಿವ ತಿಮ್ಮಾಪುರವರೆಗೆ ಬಂದು ನಿಂತಿದೆ. ವರ್ಗಾವಣೆ ವ್ಯವಹಾರ, ಲೈಸೆನ್ಸ್ ಗೆ ಕಾಸು, ಸನ್ನದುದಾರರಿಂದ ಮಂಥ್ಲಿ ಸಂಗ್ರಹಣೆ ಸೇರಿದಂತೆ ಅಬಕಾರಿ ಸಚಿವರು ವಾರ್ಷಿಕ 500 ಕೋಟಿ ರೂ.ವರೆಗೂ ಸಂಗ್ರಹಿಸುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ.
ರಾಜ್ಯ ಸರ್ಕಾರದ ಹಗರಣಗಳ ಪಟ್ಟಿಗೆ ಈಗ ನಿಜಾರ್ಥದಲ್ಲಿ ಕಿಕ್ಕೇರಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರೇ ಮಂಥ್ಲಿ ಕಲೆಕ್ಟರ್ ತಿಮ್ಮಾಪುರ ಅವರನ್ನು ಸಂಪುಟದಿಂದ ಕಿತ್ತೊಗೆಯುತ್ತೀರೋ ಅಥವಾ ವರಿಷ್ಠರ ರಾಜಸ್ವ ಕೊರತೆ ನೀಗಿಸಲು ಪಾಲು ಕೇಳುತ್ತೀರೋ ? ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next