ಬೆಂಗಳೂರು: ನಗರಾದ್ಯಂತ ರಸ್ತೆಗಳನ್ನು ಅಗೆದು ದುರಸ್ತಿ ಮಾಡದ ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಗೆತ ಹಾಗೂ ದುರಸ್ತಿ ಜವಾಬ್ದಾರಿಯನ್ನು ಪ್ರತ್ಯೇಕ ನೋಂದಾಯಿತ ಸಂಸ್ಥೆಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಜತೆ ಅರಮನೆ ರಸ್ತೆ, ಜಯಮಹಲ್ ಹಾಗೂ ಗುಟ್ಟಹಳ್ಳಿ ರೈಲ್ವೆ ಪೆರಿಫೆರಲ್ ರಸ್ತೆಗಳ ಪರಿವೀಕ್ಷಣೆ ನಡೆಸಿದ ಅವರು, ಅರಮನೆ ರಸ್ತೆಯನ್ನು ಬೆಸ್ಕಾಂ, ಜಲಮಂಡಳಿ ಅಗೆದು ಮತ್ತೆ ಸರಿಪಡಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಾಲಬ್ರೂಯಿ ಅತಿಥಿ ಗೃಹ ಪಕ್ಕದ ರಸ್ತೆ ಅಗೆದಿರುವುದರಿಂದ ರಸ್ತೆ ಹಾಗೂ ಪಾದಚಾರಿ ಮಾರ್ಗ ಕೆಸರುಮಯವಾಗಿದೆ. ಹಾಳು ಮಾಡಲು ಆಗುತ್ತದೆ ಸರಿಪಡಿಸಲು ಆಗುವುದಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಬೆಸ್ಕಾಂ, ಜಲಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ರಸ್ತೆ, ಪಾದಚಾರಿ ಮಾರ್ಗಗಳನ್ನು ಬೇಕಾಬಿಟ್ಟಿ ಅಗೆಯುತ್ತಿವೆ. ಇದರಿಂದ ಸಾರ್ವಜನಿಕರು ಹಾಗೂ ಬಿಬಿಎಂಪಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಮುಂದೆ ಇಂತಹ ಸಮಸ್ಯೆ ಉಂಟಾಗದಂತೆ ರಸ್ತೆ ಅಗೆತ ಜವಾಬ್ದಾರಿಯನ್ನು ಸರ್ಕಾರದೊಂದಿಗೆ ನೊಂದಾಯಿಸಿಕೊಂಡಿರುವ ಪ್ರತ್ಯೇಕ ಸಂಸ್ಥೆಗಳಿಗೆ ನೀಡಲಾಗುವುದು ಎಂದರು.
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ರಸ್ತೆ ಅಗೆಯುವ ಮುನ್ನ ಬಿಬಿಎಂಪಿ ಅನುಮತಿ ಪಡೆದು ಅದನ್ನು ಏಜೆನ್ಸಿಗಳಿಗೆ ನೀಡಬೇಕು. ಏಜೆನ್ಸಿಗಳು ಆಯಾ ಸಂಸ್ಥೆಗಳಿಗೆ ಅಗತ್ಯವಾದ ಅಳತೆಯ ರಸ್ತೆ ಅಗೆದುಕೊಡುತ್ತಾರೆ. ಜತೆಗೆ ಕಾಮಗಾರಿ ಪೂರ್ಣಗೊಳಿಸಿದ ಕೂಡಲೇ ಅದನ್ನು ಮರು ಕಾಮಗಾರಿ ನಡೆಸುತ್ತಾರೆ. ಒಂದೊಮ್ಮೆ ಅವಧಿ ಮುಗಿದ ನಂತರವೂ ರಸ್ತೆ ಸರಿಪಡಿಸದಿದ್ದರೆ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪರಿಶೀಲನೆ ವೇಳೆ ಮೇಯರ್ ಜಿ. ಪದ್ಮಾವತಿ, ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹಾಗೂ ಜಲಮಂಡಳಿ ಪ್ರಧಾನ ಇಂಜಿನಿಯರ್ ಕೆಂಪರಾಮಯ್ಯ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಜಲಮಂಡಳಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿ ಇನ್ನೂ ಪೂರ್ಣವಾ ಗಿಲ್ಲ. ಹಾಗಾಗಿ ತಾತ್ಕಲಿಕವಾಗಿ ರಸ್ತೆ ಮುಚ್ಚಲಾಗಿದೆ. ನೀರಿನ ಪೈಪುಗಳ ಸಂಪರ್ಕ(ಲಿಂಕ್) ಕೆಲಸ ಪೂರ್ಣಗೊಂಡ ನಂತರ ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಮರುನಿರ್ಮಾಣ ಮಾಡಲಾಗುವುದು.
-ಕೆಂಪರಾಮಯ್ಯ, ಜಲಮಂಡಳಿ ಪ್ರಧಾನ ಇಂಜಿನಿಯರ್