Advertisement
ಮಲ್ಪೆಯಿಂದ ಕಲ್ಮಾಡಿಯವರೆಗೆ ಸುಮಾರು 1 ಕಿ.ಮೀ ರಸ್ತೆ ಒಂದೇ ಸವನೆ ಹೊಂಡದ ರಾಶಿಯೇ ಎದ್ದು ಕಾಣುತ್ತಿದ್ದು ದ್ವಿಚಕ್ರ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಎಲ್ಲ ವಾಹನ ಚಾಲಕರಂತೂ ಆಡಳಿತ ವ್ಯವಸ್ಥೆಯ ಕುರಿತು ಗೊಣಗುತ್ತಲೇ ವಾಹನ ಓಡಿಸುತ್ತಿದ್ದಾರೆ. ಮಳೆಯ ಅರ್ಭಟಕ್ಕೆ ಈಗ ಸಂಪೂರ್ಣ ಹದಗೆಟ್ಟು ಬಾಯ್ದೆರೆದು ನಿಂತಿದೆ.
ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಕೆಲವೇ ದಿನದ ಹಿಂದಷ್ಟೆ ಕೆಲವಡೆ ಕಾಟಚಾರಕ್ಕೆ ಎಂಬಂತೆ ಗುಂಡಿಗೆ ಸಿಮೆಂಟು ಮಿಶ್ರಿತ ಕಲ್ಲುಗಳನ್ನು ಸುರಿದು ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಕಲ್ಲು ಮಣ್ಣುಗಳೆಲ್ಲವೂ ಕೊಚ್ಚಿ ಹೋಗಿ ಪುನ್ ಅದೇ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟಿರುವ ರಸ್ತೆಯಿಂದ ಬೇಸತ್ತಿರುವ ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಶೀಘ್ರದಲ್ಲಿ ರಸ್ತೆ ಸರಿ ಪಡಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ ಯನ್ನು ನೀಡಿದ್ದಾರೆ ಎಂದು ಹೇಳುತ್ತಾರೆ ಮಲ್ಪೆಯ ಮಹೇಶ್ ಬಂಗೇರ. ತುರ್ತು ಅಭಿವೃದ್ಧಿ ಕೈಗೊಳ್ಳಲಿ
ರಸ್ತೆ ವಿಸ್ತರೀಕರಣದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾದ ವರ್ಷಗಳಿಂದ ಇಲ್ಲಿನ ರಸ್ತೆಗೆ ಸರಿಯಾಗಿ ಡಾಮರೀಕರಣವಾಗದೇ ಹೊಂಡ ಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಿಂದಲೇ ವಾಹನ ಚಲಾಯಿಸಬೇಕಾಗಿದೆ. ಘನ ವಾಹನಗಳು ದಟ್ಟವಾಗಿ ಸಂಚರಿಸುವ ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾದಂತಹ ಅನಿವಾರ್ಯತೆ ಇದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಜನರ ಹಿತದೃಷ್ಟಿಯಿಂದ ತುರ್ತು ಅಭಿವೃದ್ಧಿಯನ್ನು ಕೈಗೊಳ್ಳಬೇಕಾಗಿದೆ.
Related Articles
Advertisement
ರಿಕ್ಷಾ ಬರಲು ಹಿಂದೇಟು
ಇಲ್ಲಿನ ವಾಹನ ಸಂಚಾರ ಬಿಡಿ ನಡೆದಾಡಲು ಪರದಾಡುವಂತಾಗಿದೆ. ಈ ರಸ್ತೆ ತೀರ ಹದಗೆಟ್ಟಿರುವುದರಿಂದ ರಿಕ್ಷಾ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತಿದ್ದಾರೆ. ಮಲ್ಪೆ ರಿಕ್ಷಾ ಉಡುಪಿ ಬಾಡಿಗೆಗೆ, ಉಡುಪಿಯ ರಿಕ್ಷಾ ಮಲ್ಪೆಗೆ ಬಾಡಿಗೆಗೆ ಬರಲು ಈ ರಸ್ತೆಯಲ್ಲಿ ಒಪ್ಪುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮಲ್ಪೆ -ಕಲ್ಮಾಡಿ ದಾಟುವ ವರೆಗೂ ಆತಂಕ
ಕೆಲವು ವರ್ಷಗಳ ಹಿಂದೆ ಕಲ್ಮಾಡಿ ರಸ್ತೆಯ ಕಾಂಕ್ರೀ ಟಿಕರಣ ನಡೆದಾಗ, ಎರಡೂ ಬದಿಯಲ್ಲಿ ಡಾಮರೀಕರಣ ಮಾಡುವ ಬದಲು ಇಂಟರ್‌ಲಾಕ್‌ಅನ್ನು ಅಳವಡಿಸಲಾಗಿತ್ತು. ಇದು ತಕ್ಕಮಟ್ಟಿಗೆ ರಸ್ತೆಯ ಸಮತಟ್ಟು ಸರಿಹೊಂದುವಂತೆ ಮಾಡಿದರೂ, ದ್ವಿಚಕ್ರ ಸವಾರರಿಗೆ ಕಂಟಕಪ್ರಾಯವಾಯಿತು. ಮೀನು ತುಂಬಿದ ಲಾರಿಗಳು ಬೇಕಾಬಿಟ್ಟಿಯಾಗಿ ನೀರನ್ನು ಚೆಲ್ಲಿಕೊಂಡು ಹೋದ ಕಾರಣ ಹಲವಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇದೀಗ ಹಾಕಿದ ಇಂಟರ್‌ಲಾಕ್ ಎದ್ದು ಹಾಳಾಗಿ ವರ್ಷಗಳೆ ಕಳೆದವು. ದ್ವಿಚಕ್ರ ವಾಹನ ಸವಾರರು ಕಲ್ಮಾಡಿ ದಾಟುವವರೆಗೆ ಆತಂಕದಿಂದಲೇ ಇರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಮಲ್ಪೆಯ ಸುನೀಲ್‌ದಾಸ್.