Advertisement

ರಸ್ತೆ ಇದ್ದಲ್ಲಿ ಸೇತುವೆಯಿಲ್ಲ; ಸೇತುವೆ ಇದ್ದಲ್ಲಿ  ರಸ್ತೆಯಿಲ್ಲ 

01:09 PM Jan 22, 2018 | Team Udayavani |

ಬಜಪೆ: ರಸ್ತೆ ಇದ್ದಲ್ಲಿ ಸೇತುವೆಯಿಲ್ಲ; ಸೇತುವೆ ಇದ್ದಲ್ಲಿ ರಸ್ತೆಯಿಲ್ಲ ಇದು ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುರುಮದ ಕಟ್ಟೆ ಸೇತುವೆ, ಈಶ್ವರಕಟ್ಟೆ- ಪರಕಟ್ಟ ಬನ- ಮುಚ್ಚಾ ರಸ್ತೆಯ ದುರವಸ್ಥೆ.

Advertisement

ಪಡುಪೆರಾರ ಬಲವಾಂಡಿ ದೈವಸ್ಥಾನದ ಬಳಿ ಕುರುಮದ ಕಟ್ಟೆಯಲ್ಲಿ ಸೇತುವೆ ನಿರ್ಮಾಣವಾಗಿದೆ. ಆದರೆ ಅದಕ್ಕೆ ಸಂಪರ್ಕ ರಸ್ತೆಯೇ ಇಲ್ಲ. ಅದೇ ರೀತಿ ಮೂಡು ಪೆರಾರದ ಈಶ್ವರ ಕಟ್ಟೆ- ಪರಕಟ್ಟ ಬನ- ಮುಚ್ಚಾರು ರಸ್ತೆ ಇದ್ದರೂ ಇಲ್ಲಿ ಅಗತ್ಯವಾಗಿ ಬೇಕಾದ ಸೇತುವೆಯೇ ಇಲ್ಲವಾಗಿದೆ. ಇದರಿಂದ ಪಡುಪೆರಾರ ಗ್ರಾಮಸ್ಥರು ನಿತ್ಯವೂ ಸಂಕಟ ಅನುಭವಿಸುವಂತಾಗಿದೆ.

ನಬಾರ್ಡ್‌ ಅನುದಾನದಿಂದ ಪಡುಪೆರಾರ ಬಲವಾಂಡಿ ದೈವಸ್ಥಾನದ ಬಳಿಯ ಕುರುಮದ ಕಟ್ಟೆಯ ಕಿನ್ನಿಪಚ್ಚಾರು ಎಂಬಲ್ಲಿ 2016ರಲ್ಲಿ 15ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದು, ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಸೇತುವೆ ನಿರ್ಮಾಣವಾಗಿ ಒಂದು ವರ್ಷ ಕಳೆದರೂ ಇನ್ನೂ ಸಂಪರ್ಕ ರಸ್ತೆಯೇ ನಿರ್ಮಾಣವಾಗಿಲ್ಲ. ಖಾಸಗಿ ಜಾಗದಲ್ಲಿಯೇ ನಿರ್ಮಾಣಗೊಂಡ ಈ ಸೇತುವೆ ಬಗ್ಗೆ ಗ್ರಾಮಸ್ಥರೀಗ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ನಾವು ಕೇಳಿದ್ದು ಕಾಲುಸಂಕ
ಈ ಪ್ರದೇಶದ ಜನರು ಹರಿಯುವ ತೋಡಿಗೆ ಕಾಲು ಸಂಕ, ತಡೆಗೋಡೆ ಮಾಡಿಕೊಡುವಂತೆ ಪಂಚಾಯತ್‌ ಗೆ ಮನವಿ ಮಾಡಿದ್ದರು. ಆದರೆ ಕಿರು ಸೇತುವೆಯೇ ನಿರ್ಮಿಸಿದ್ದಾರೆ. ಇಲ್ಲಿ ವಾಹನ ಸಂಚಾರಕ್ಕೆ ಸಂಪರ್ಕ ರಸ್ತೆಯೇ ಇಲ್ಲದ ಕಾರಣ ಈ ಸೇತುವೆ ಕೇವಲ ಪಾದಚಾರಿಗಳಿಗಷ್ಟೇ ಸೀಮಿತವಾಗಿದೆ. ತೋಡಿಗೆ ತಡೆಗೋಡೆ ನಿರ್ಮಾಣವಾಗದೇ ಹಿಂದೆ ನಮ್ಮ ತೋಟ ಕೊಚ್ಚಿಹೋಗಿತ್ತು. ಮಕ್ಕಳು ಶಾಲೆಯಿಂದ ಬರಲು ಕಷ್ಟಪಡುವಂತಾಗಿತ್ತು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಇದೇ ತೋಡಿಗೆ ಮೂಡುಪೆರಾರದ ಈಶ್ವರ ಕಟ್ಟೆ- ಕೊಂಕಣೆರ್‌ ಬೈಲು- ಪರಕಟ್ಟ ಬನ ರಸ್ತೆಯ ಬಾನಗುರಿ, ನೆಲ್ಲಿಕಾಡು, ಮುಚ್ಚಾರು ರಸ್ತೆಯನ್ನು ಸಂಪರ್ಕಿಸಲು ಪರಕಟ್ಟ ಬನದಲ್ಲಿ ಸೇತುವೆಯ ಅಗತ್ಯವಿತ್ತು. ಅಲ್ಲಿ ಎರಡು ಕಡೆ ರಸ್ತೆಗಳಿದ್ದರೂ ಸೇತುವೆ ಮಾತ್ರ ಇಲ್ಲವಾಗಿದೆ.

Advertisement

ಇಲ್ಲಿನ ಸುಮಾರು 100 ಮಂದಿ ಕೃಷಿಕರು, ಗ್ರಾಮಸ್ಥರು ಈ ಬಗ್ಗೆ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ರಸ್ತೆಗೆ ಸೇತುವೆ ನಿರ್ಮಾಣವಾದಲ್ಲಿ ಹೆಚ್ಚು ಜನರಿಗೆ ಉಪಯೋಗವಾಗುತ್ತದೆ. ಅಷ್ಟೇ ಅಲ್ಲ ಈಶ್ವರಕಟ್ಟೆಯಿಂದ ಮುಚ್ಚಾರಿಗೆ, ಬಲವಾಂಡಿ ದೈವಸ್ಥಾನದಿಂದ ಮುಚ್ಚಾರಿಗೆ ಸಂಪರ್ಕ ರಸ್ತೆಯಾಗುತ್ತದೆ.

ಅಪಾಯದಲ್ಲಿದೆ ಕಿರುಸೇತುವೆ
ಮೂಡುಪೆರಾರ- ಕೊಂಕಣೆರ್‌ಬೈಲ್‌ ನ ಇನ್ನೊಂದು ಕಿರು ಸೇತುವೆಯೂ ಅಪಾಯದಲ್ಲಿದೆ. ಈಗಾಗಲೇ ಕಿರು ಸೇತುವೆಯ ಕಲ್ಲುಗಳು ಉರುಳಿ ಬಿದ್ದವೆ. ವಾಹನಗಳು ಸಂಚರಿಸಲು ಬಹಳ ಕಷ್ಟವಾಗುತ್ತಿದೆ. ಶಾಲಾ ವಾಹನಗಳು ದಿನನಿತ್ಯ ಇದರಲ್ಲಿ ಸಂಚರಿಸುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಕಿರುಸೇತುವೆ ಅಗತ್ಯ
ಈ ಎರಡು ಕಡೆ ಕಿರು ಸೇತುವೆ ಅಗತ್ಯ. ಈ ಬಗ್ಗೆ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಭತ್ತ ಬೇಸಾಯದ ಸಮಯದಲ್ಲಿ ಭಾರೀ ಕಷ್ಟವಾಗುತ್ತದೆ. ವಾಹನಗಳಿಗೆ ಅಪಾಯ ಇದೆ. ಶಾಲಾ ವಾಹನಗಳು ಸಂಚರಿಸುವ ಕಾರಣ ಈ ಬಗ್ಗೆ ಪಂಚಾಯತ್‌ ಹೆಚ್ಚು ಕಾಳಜಿ ವಹಿಸಿಬೇಕಾಗಿದೆ.
– ಹರೀಶ್‌, ಕೃಷಿಕ

ಜಾಗ ಕೊಟ್ಟರೆ ರಸ್ತೆ ನಿರ್ಮಾಣ
ಕುರುಮದ ಕಟ್ಟೆ ಸೇತುವೆಯ ಇಕ್ಕೆಲದಲ್ಲಿ ಜಾಗ ಕೊಟ್ಟರೆ ಮಾತ್ರ ರಸ್ತೆ ನಿರ್ಮಾಣ ಮಾಡುತ್ತೇವೆ. ಮಳೆಗಾಲದಲ್ಲಿ ನೀರು ದಾಟುವ ಜನರ ಕಷ್ಟ ನೋಡಿ ಈ ಸೇತುವೆ ಮಾಡಲಾಗಿದೆ. ಈಶ್ವರಕಟ್ಟೆ -ಪರಕಟ್ಟ ಬನ- ಮುಚ್ಚಾರು ರಸ್ತೆಗೆ ಸೇತುವೆ ಇಲ್ಲ ಎಂಬ ಬಗ್ಗೆ ಗ್ರಾಮ ಸಭೆಯಲ್ಲಿ ಮನವಿಗಳು ಬಂದಿವೆ. ಅದನ್ನು ಶಾಸಕರಿಗೆ ನೀಡಲಾಗಿದೆ.
– ಶಾಂತಾ ಎಂ, ಅಧ್ಯಕ್ಷೆ, ಗ್ರಾಮ ಪಂಚಾಯತ್‌

ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next