ಕಾರ್ಕಳ: ಕಣ್ಣೆದುರು ಆಸನವಿದೆ. ಆದರೆ ಕುಳಿತುಕೊಳ್ಳುವ ಧೈರ್ಯ ಯಾರೂ ಮಾಡುತ್ತಿಲ್ಲ. ಮಹಿಳೆಯರು, ಹಿರಿಯ ನಾಗರಿಕರು ನಿಂತೇ ಇರುತ್ತಾರೆ. ಇಂಥದ್ದೊಂದು ತೊಳಲಾಟದ ದೃಶ್ಯ ಕಾರ್ಕಳ ತಾ| ಕಚೇರಿಯ ಉಪ ನೋಂದಣಿ ಕಚೇರಿಯಲ್ಲಿ ನಿತ್ಯ ಕಂಡುಬರುತ್ತಿದೆ. ಸರಕಾರದ ಬೊಕ್ಕಸಕ್ಕೆ ಆದಾಯದ ಮೂಲ ಉಪ ನೋಂದಣಾಧಿಕಾರಿ ಕಚೇರಿ. ಕಾರ್ಕಳ ತಾ| ಕಚೇರಿಯ ಮಿನಿವಿಧಾನ ಸೌಧದ 16ರ ಕೊಠಡಿಯಲ್ಲಿ ಕಾರ್ಯಾ ಚರಿಸುತ್ತಿದೆ. ಸಾರ್ವಜನಿಕರ ಬಹುಬೇಡಿಕೆಯ ಸೇವಾ ಕೇಂದ್ರ ರಿಜಿಸ್ಟ್ರಾರ್ ಕಚೇರಿ ಸಮಸ್ಯೆಗಳ ಬೀಡಾಗಿದೆ. ನೂರಾರು ಮಂದಿ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಕಚೇರಿ ಬಾಗಿಲ ಬಳಿ ಬಂದು ನಿಂತಿರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಒಂದಷ್ಟು ಆಸನದ ವ್ಯವಸ್ಥೆ ಮಾಡಿದ್ದರೂ, ಅದು ಹಳೆದಾಗಿದ್ದು ಶಿಥಿಲಗೊಂಡು ಮುರಿದು ಬಿದ್ದಿದೆ. ಅಲ್ಯುಮಿನಿಯಂ ಚೇರ್‌ಗಳ ಅಡಿ ಭಾಗಕ್ಕೆ ಕೆಂಪುಕಲ್ಲನ್ನು ಆಧಾರವಾಗಿ ಜೋಡಿಸಿಡಲಾಗಿದೆ. ಇದರಲ್ಲಿ ಕುಳಿತುಕೊಂಡಲ್ಲಿ ಬಿದ್ದು ಗಾಯಗಳಾಗುವ ಪರಿಸ್ಥಿತಿಯಿದೆ. ನಿಂತು ಸುಸ್ತಾಗಿ ಸ್ವಲ್ಪ ವಿಶ್ರಾಂತಿ ಪಡೆಯುವ ಎಂದು ಕುಳಿತುಕೊಳ್ಳಲು ಮುಂದಾದ ವೇಳೆ ಬಿದ್ದು ಗಾಯ ಮಾಡಿಕೊಂಡ ಪ್ರಸಂಗಗಳೂ ನಡೆದಿವೆ.
ನಿತ್ಯ 400ಕ್ಕೂ ಅಧಿಕ ಮಂದಿ ಬರುತ್ತಾರೆ
ಸಬ್ ರಿಜಿಸ್ಟ್ರಾರ್ ಕಚೇರಿಗೆ ಜನ ಆಸ್ತಿ ನೋಂದಣಿ, ಋಣಭಾರ ಪ್ರಮಾಣ ಪತ್ರ, ದಾಖಲೆಗಳ ದೃಢೀಕರಣ, ನಕಲು ಪ್ರತಿಗಾಗಿ, ಜನರಲ್ ವೆರಿಫಿಕೇಶನ್ ಹಾಗೂ ದಾಖಲೆ ಪರಿಶೀಲನೆ ಇತ್ಯಾದಿ ಹಲವು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ನಿತ್ಯ ನೋಂದಣಿ ಕಚೇರಿಗೆ ಬರು ತ್ತಿರುತ್ತಾರೆ. ದಿನವೊಂದಕ್ಕೆ 300-400ಕ್ಕೂ ಅಧಿಕ ಮಂದಿ ನಾಗರಿಕರು ಬರುತ್ತಾರೆ. ಇದರಲ್ಲಿ ಹೆಚ್ಚಾಗಿ ಹಿರಿಯರು, ಮಹಿಳೆಯರೇ ಇರುತ್ತಾರೆ.
ಕಚೇರಿ ಒಳಗಡೆ ಗಾಳಿಯಾಡಲ್ಲ
ಕಚೇರಿ ಹೊರಭಾಗದಲ್ಲಿ ಹೀಗಾದರೆ ಒಳಗಿನ ಸ್ಥಿತಿಯೂ ಹೊರತಾಗಿಲ್ಲ. ಕಚೇರಿಯ ಒಳಗೆ ಒಂದಷ್ಟು ಜನ ಕೆಲಸ ಮಾಡಿಸಿ ಕೊಳ್ಳಲು ಕಾಯುತ್ತಿರುತ್ತಾರೆ. ಸಿಬಂದಿ ಕೂಡ ಅಲ್ಲಿ ಕೆಲಸದ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅಲ್ಲಿಯ ಸಾರ್ವಜನಿಕರಿಗೆ ಸೀಮಿತ ಆಸನಗಳಷ್ಟೆ ಇದ್ದು ಕೆಲವು ಸಂದರ್ಭ ನಿಂತಿರಬೇಕಾಗಿರುತ್ತದೆ. ಕಚೇರಿಯೊಳಗೆ ಸರಿಯಾಗಿ ಗಾಳಿ ಕೂಡ ಹರಿದಾಡದೆ ಬಿಸಿಯ ತಾಪಮಾನವಿರುತ್ತದೆ. ಸೀಮಿತ ಸಂಖ್ಯೆಯಲ್ಲಿ ಫ್ಯಾನ್ ಇದ್ದರೂ ಗಾಳಿ ಹೆಚ್ಚು ಹರಿದಾಡದ ಕಾರಣ ಸಾರ್ವಜನಿಕರ ಜತೆ ಸಿಬಂದಿ ಬೆವರಿನಿಂದ ಮೈ ಒದ್ದೆ ಮಾಡಿಕೊಂಡು ಇರಬೇಕಾಗುತ್ತದೆ. ಮೊದಲೇ ಕಿರಿದಾದ ಕಚೇರಿ, ಇಕ್ಕಟ್ಟಾದ ಸ್ಥಳದಲ್ಲಿ ಸಿಬಂದಿ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಇನ್ನೊಂದು ಗಮನೀಯ ಸಂಗತಿಯೆಂದರೆ ರಿಜಿಸ್ಟ್ರಾರ್ ಕಚೇರಿಯ ಕಿಟಕಿಗಳು ಸದಾ ಮುಚ್ಚಿರುತ್ತದೆ. ಒಂದು ಬಾಗಿಲು ಮಾತ್ರ ತೆರೆದಿದೆ. ಕಿಟಿಕಿಗಳನ್ನೆಲ್ಲ ತೆರೆದಿಟ್ಟಲ್ಲಿ ಹೊರಗಿನ ಗಾಳಿಯಾದರೂ ಒಳಗೆ ನುಸುಳಿ ಒಂದಷ್ಟೂ ತಂಪಿನ ವಾತಾವರಣ ಒಳಗಿರುತ್ತದೆ. ಕಚೇರಿಯೊಳಗೆ ಕೆಲವೊಮ್ಮೆ ಬೆಳಕಿನ ಕೊರತೆಯೂ ಇದೆ.
ತಾಲೂಕಿನ ಮೂಲೆಮೂಲೆಗಳಿಂದ ಆಸ್ತಿ ದಾಖಲೆಗಳಿಗೆ ಸಂಬಂಧಿಸಿ ಜನರು ಕಚೇರಿಗೆ ಬರುತ್ತಾರೆ. ಗ್ರಾಮೀಣ ಭಾಗದಿಂದ ಕಾಲ್ನಡಿಗೆ, ಖಾಸಗಿ ಬಸ್, ವಾಹನದಲ್ಲಿ ಬಂದು ಕಚೇರಿಗೆ ತಲುಪುವ ವೇಳೆಗೆ ಸುಸ್ತಾಗಿರುತ್ತಾರೆ. ಇಲ್ಲಿ ಕಚೇರಿಯಲ್ಲಿ ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆಗಳಿಲ್ಲದೆ ತೊಂದರೆ ಅನುಭವಿಸುತ್ತಾರೆ.
ಪರಿಶೀಲಿಸಿ ಕ್ರಮ
ಅವ್ಯವಸ್ಥೆಗೆ ಸಂಬಂಧಿಸಿ ಸಬ್‌ರಿಜಿಸ್ಟ್ರಾರ್ ಅಧಿಕಾರಿಯಿಂದ ಮಾಹಿತಿ ಪಡೆಯುವೆ. ಬಳಿಕ ಪರಿಶೀಲಿಸಿ ಕ್ರಮ ವಹಿಸಲಾಗುವುದು.
– ಪ್ರದೀಪ್ ಕುರ್ಡೇಕರ್ ತಹಶೀಲ್ದಾರ್, ಕಾರ್ಕಳ