Advertisement

ತೊಗರಿ ರೈತರ ಪ್ರತಿಭಟನೆಗೆ ಮಠಾಧೀಶರ ಬಲ

11:22 AM Feb 23, 2018 | Team Udayavani |

ಕಲಬುರಗಿ: ತೊಗರಿ ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಆಲ್‌ಇಂಡಿಯಾ ಕಿಸಾನ್‌ ಸಭಾ,
ಸಹಕಾರಿ ಸಂಘಗಳ ಒಕ್ಕೂಟ, ರೈತ ಉತ್ಪಾದಕರ ಸಂಘಟನೆ, ತೊಗರಿ ಬೆಳೆಗಾರರ ಹೋರಾಟ ಸಮಿತಿ ಚಿತ್ತಾಪುರ, ಹೈ.ಕ.ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೈನ್ಯ, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಸಮಿತಿ ಕಾರ್ಯಕರ್ತರು ಜಗತ್‌ ವೃತ್ತದಲ್ಲಿರುವ ಅಂಬೇಡ್ಕರ ಪ್ರತಿಮೆ ಎದುರು ನಡೆಸುತ್ತಿರುವ ಪ್ರತಿಭಟನೆಗೆ ಗುರುವಾರ ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದರು.

Advertisement

ಎಪಿಎಂಸಿಯಲ್ಲಿ 5450 ರೂ. ಬೆಲೆಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಳವಾಗುವವರೆಗೆ ರೈತರ ಎಲ್ಲ ತೊಗರಿ ಖರೀದಿಸಬೇಕು, ತೊಗರಿ ಬೆಳೆಗಾರರ ನೋಂದಣಿ ಅವಧಿ ಇನ್ನೊಂದು ತಿಂಗಳು ವಿಸ್ತರಿಸಬೇಕು. ಎಫ್‌ ಪಿಒ, ಟಿಎಪಿಸಿಎಂಎಸ್‌ ಒಳಗೊಂಡಂತೆ ಇನ್ನು ಹೆಚ್ಚಿನ ತೊಗರಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ಹೊರದೇಶದಿಂದ ಆಮದಾಗುವ ಬೇಳೆಕಾಳುಗಳ ಮೇಲೆ ಶೇ.35ರಷ್ಟು ಆಮದು ಶುಲ್ಕ ಹಾಕಬೇಕು. ಡಾ| ಎಂ.ಎಸ್‌. ಸ್ವಾಮಿನಾಥನ್‌
ವರದಿಯಂತೆ 7500 ರೂ. ಬೆಂಬಲ ಬೆಲೆ ನೀಡಬೇಕು. ಕಡಲೆ ಬೆಳೆಗಾರರಿಗೆ ಕ್ವಿಂಟಲ್‌ಗೆ 550 ರೂ. ಪ್ರೋತ್ಸಾಹ ಧನ ನೀಡಬೇಕು.
ರೈತರ ಬ್ಯಾಂಕ್‌ ಸಾಲ ಮನ್ನಾ ಮಾಡಬೇಕು. ಪ್ರತಿ ರೇಷನ್‌ ಕಾರ್ಡ್‌ಗೆ ತಿಂಗಳಿಗೆ 2 ಕೆಜಿ ತೊಗರಿ ಬೇಳೆ ವಿತರಿಸಬೇಕು. 2015-16ನೇ ಸಾಲಿನ ಬಾಕಿ ಉಳಿದ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಸುಲಫಲ ಮಠದ ಶ್ರೀಗಳು, ಚಿಣಮಗೇರಾ ಶ್ರೀಗಳು, ಬಸವಕಲ್ಯಾಣ ಶ್ರೀಗಳು, ನರೋಣಾಶ್ರೀಗಳು, ಮುಗುಳನಾಗಾಂವ
ಶ್ರೀಗಳು, ಕಂಪಲಿ ಶ್ರೀಗಳು, ಲಾಡಮುಗಳಿ ಶ್ರೀಗಳು, ಮುದ್ದಡಗಾ ಶ್ರೀಗಳು,ಮಡಕಿ ಶ್ರೀಗಳು,ರೇವಣಸಿದ್ದೇಶ್ವರ ಹಿರೇಮಠ
ರಟಕಲ್‌ ಶ್ರೀಗಳು, ರಟಕಲ್‌ ಶ್ರೀಗಳು, ನಾಗೂರ ಶ್ರೀಗಳು,ರಾಚೋಟೇಶ್ವರ ಮಠ ನೀಲೂರ ಶ್ರೀಗಳು ಹಾಗೂ ಇತರರು ಬೆಂಬಲ
ವ್ಯಕ್ತಪಡಿಸಿದರು. ಮಾರುತಿ ಮಾನ್ಪಡೆ, ಮೌಲಾಮುಲ್ಲಾ, ಬಸವರಾಜ ಪವಾಡಶೆಟ್ಟಿ, ಮೋಬಿನ್‌ ಅಹಿಮದ್‌, ಶರಣಬಸಪ್ಪ ಮಮಶೆಟ್ಟಿ,
ಸಿದ್ರಾಮಪ್ಪಾ ಪಾಟೀಲ, ಶಿವಾನಂದ ಗುಡೂರು ಹಾಗೂ ಇತರರು ಭಾಗವಹಿಸಿದ್ದರು.

ತೊಗರಿ ಖರೀದಿಯಲ್ಲಿ
ಅವ್ಯವಹಾರ:
ಆರೋಪ ಸೇಡಂ: ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತೊಗರಿ ಖರೀದಿ ಕೇಂದ್ರ ಸ್ಥಾಪಿಸಿದೆ. ಆದರೆ ಖರೀದಿಯಲ್ಲಿ ಮಾತ್ರ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಹೆಸರು ನೋಂದಣಿ, ಬೇಗನೇ ತೂಕ ಮತ್ತು ಶೀಘ್ರವೇ ಹಣ ಪಾವತಿಯಾಗಬೇಕಾದರೆ ಪ್ರತಿ ಚೀಲಕ್ಕೆ ಇಂತಿಷ್ಟು ಹಣ ಪಡೆದು ತೊಗರಿ ಖರೀದಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

Advertisement

ತಾಲೂಕಿನ ಬಟಗೇರಾ, ಮುಧೋಳ, ಹಂದರಕಿ, ಮಳಖೇಡ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಥಾಪಿಸಲಾಗಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಅನೇಕ ದಿನಗಳಿಂದ ಕೇಳಿ ಬರುತ್ತಿದೆ.
 
ತೊಗರಿ ಖರೀದಿ ಕೇಂದ್ರಗಳಲ್ಲಿ ಬಡ ರೈತರು ತಮ್ಮ ತೊಗರಿ ಮಾರಾಟಕ್ಕೆ ಬಂದಾಗ ಸರಿಯಾದ ಉತ್ತರ ದೊರೆಯುತ್ತಿಲ್ಲ. ಬದಲಿಗೆ ದಿನಗಟ್ಟಲೇ ಕಾಯಿಸಲಾಗುತ್ತಿದೆ. ಇನ್ನೊಂದೆಡೆ ಶ್ರೀಮಂತ ರೈತರ ತೊಗರಿಯನ್ನು ಮೊದಲು ಖರೀದಿಸಲಾಗುತ್ತಿದೆ. ಅಲ್ಲದೆ ಖರೀದಿ ಕೇಂದ್ರ ನಿರ್ವಹಿಸುವ ಅಧಿಕಾರಿಗಳು ದುಡ್ಡುಳ್ಳವರ ಮನೆಗೆ ತೆರಳಿ ತೊಗರಿ ತೂಕ ಮಾಡಿ, ಖರೀದಿಸುತ್ತಿದ್ದಾರೆ ಎಂಬ ಆರೋಪಗಳೂ ರೈತ ವಲಯದಿಂದಲೇ ಕೇಳಿಬಂದಿವೆ.

ಇತ್ತೀಚೆಗೆ ತಾಲೂಕಿನ ಬಟಗೇರಾ ಗ್ರಾಮದ ಖರೀದಿ ಕೇಂದ್ರ ಬಂದ್‌ ಮಾಡಲಾಗಿತ್ತು. ನಂತರ ಸ್ಥಳಕ್ಕೆ ತೆರಳಿದ ಸಹಾಯಕ
ಆಯುಕ್ತೆ ಡಾ| ಸುಶೀಲಾ ಸಮಸ್ಯೆ ಆಲಿಸಿದ್ದರು. ಆಗಲೂ ರೈತರಿಂದ ಚೀಲಕ್ಕೆ ಇಂತಿಷ್ಟು ಲಂಚ ಪಡೆಯಲಾಗುತ್ತಿದೆ
ಎಂದು ರೈತರು ಆರೋಪ ಮಾಡಿದ್ದರು. ರೊಕ್ಕ ಕೊಟ್ರ ಸಾವುಕಾರರ ಮನಿಗಿ ತೂಕಾ ಮಾಡ ಮಷೀನ್‌ ತಗೊಂಡ ಹೋಗಿ, ತೊಗ್ರಿ ತಗೋಲಿಕತ್ತಾರ್ರಿ. ತೊಗ್ರಿ ಖರೀದಿ ಬರೀ ಸಾವುಕಾರರದ್ದೇ ಮಾಡ್ಲಾಕತ್ತಾರ್ರಿ, ಬಡವ್ರ ತೊಗ್ರಿಗೆ ಬೆಲಿ ಇಲ್ದಂಗಾಗ್ಯಾದ್ರಿ ಎಂದು ರೈತ ಬಿಚ್ಚರೆಡ್ಡಿ ಗುಂಡೇಪಲ್ಲಿ ಆರೋಪಿಸಿದ್ದಾರೆ.

ಸಾಲ ಮಾಡಿ ಬೆಳಿ ಬೆಳದ್‌ ಮಾರಿದ್ರ, ಎರಡ್‌ ತಿಂಗಳ ಆದ್ರೂ ರೊಕ್ಕ ಕೊಟ್ಟಿಲ್ಲ ಸರ್ಕಾರ. ಹಿಂಗಾದ್ರ ಹೆಂಗ್‌ ಬದುಕೋದ್ರಿ ರೈತ್ರು. ಬಡ ರೈತ್ರಿಗೆ ನಾಯಿಗಿಂತ ಕಡೀ ನೋಡ್ಲಾಕತ್ತಾರ. ಹೆಂಗರ ಮಾಡಿ ನ್ಯಾಯ ಕೊಡಿಸ್ರಿ ಸಾಹೇಬ್ರ ರೈತ ಕಾಶಪ್ಪ ಹಂದರಕಿ ಅಳಲು ತೋಡಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next