ಮೂಡಲಗಿ: ಜಾನಪದ ಕಲೆಗಳು ನಶಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದು ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಹೇಳಿದರು.
ಕಲ್ಲೋಳಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಜಾನಪದ ಕಲೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಗಳು ನಮ್ಮ ನಾಡಿನ ಸಂಸ್ಕೃತಿಯ ಜೀವಾಳವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪಾರಿಜಾತ ಕಲಾವಿದ ಭೀಮಪ್ಪ ಕಡಾಡಿ ಮಾತನಾಡಿ, ಮೊಬೈಲ್ ಹಾವಳಿಯಲ್ಲಿ ಜನಪದ ಕಲೆಗಳು ಮರೆಯಾಗುತ್ತಲಿವೆ. ಯುವ ಪೀಳಿಗೆಯು ಜಾನಪದ ಕಲೆಗಳ ಕಡೆಗೆ ಒಲವು ತೋರಿಸಿ, ಉಳಿಸಲು ಮುಂದಾಗಬೇಕು ಎಂದರು.
ಸಾಹಿತಿ ಡಾ| ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಭಾಗದ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವುದು ಮತ್ತು ವಿದ್ಯಾರ್ಥಿಗಳು ಮತ್ತು ಹೊಸ ಪೀಳಿಗೆಗೆ ಜಾನಪದ ಕಲೆಗಳನ್ನು ಪರಿಚಯಿಸಿ ಅವುಗಳ ಬಗ್ಗೆ ಅಭಿರುಚಿ ಮೂಡಿಸುವುದು ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಮಾತನಾಡಿ, ಕಲ್ಲೋಳಿಯಲ್ಲಿ ವಿಚಾರ ಸಂಕಿರಣವನ್ನು ಉತ್ತಮವಾಗಿ ಸಂಘಟಿಸಿದ್ದು ಶ್ಲಾಘನೀಯವಾಗಿದೆ ಎಂದರು. ಕರ್ನಾಟಕ ಜಾನಪದ ಅಕಾಡೆಮಿ ಅಧಿಧೀಕ್ಷಕ ಪ್ರಕಾಶ, ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಿ.ಎಸ್. ಗೊರೋಶಿ, ಎಸ್.ಬಿ. ಜಗದಾಳೆ, ಎಸ್.ಎಂ. ಖಾನಾಪುರ, ಎಂ.ಎಸ್. ಕಪ್ಪಲಗುದ್ದಿ, ಬಾಳವ್ವ ಕಂಕಣವಾಡಿ, ಎಂ.ಡಿ. ಕುರಬೇಟ, ಬಿ.ಕೆ. ಗೋರೋಶಿ, ಕಿತ್ತೂರ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಗುಳಪ್ಪಾ ವಿಜಯನಗರ ಇದ್ದರು.
ಸಮಾರಂಭದಲ್ಲಿ ಕಲ್ಲೋಳಿಯ 30 ಮಾಜಿ ಯೋಧರು ಸೇರಿದಂತೆ ಕ್ರೀಡೆ ಮತ್ತು ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರೊ| ಡಿ.ಎಸ್. ಹುಗ್ಗಿ ಸ್ವಾಗತಿಸಿದರು, ಡಾ| ಕೆ.ಎಸ್. ಪರವ್ವಗೋಳ, ಪ್ರೊ| ಶಂಕರ ನಿಂಗನೂರ ನಿರೂಪಿಸಿದರು.
ಕಲಾ ಮೆರವಣಿಗೆ: ಸಮಾರಂಭದ ಪೂರ್ವದಲ್ಲಿ ವಿವಿಧ ಕಲಾ ತಂಡಗಳಿಂದ ಪಟ್ಟಣ ಪಂಚಾಯ್ತಿಯಿಂದ ಸಮಾರಂಭ ನಡೆಯುವ ಸ್ಥಳದವರೆಗೆ ಮೆರವಣಿಗೆ ಜರುಗಿತು. ತಾಸವಾದ, ಕೈಪಟ್ಟಿ, ಪುರವಂತಿಕೆ, ಸಂಬಾಳ, ವೀರಗಾಸೆ, ಕರಡಿ ಮಜಲು, ಚೌಡಕಿ, ಸಿದ್ದಿ ಸೋಗು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.