ದುಬಾೖ: ನಾಲ್ಕು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಪಾಕಿಸ್ಥಾನ ವಿರುದ್ಧವೇ ಆಡಿದ ವೇಳೆ ಬೆನ್ನುನೋವಿಗೆ ಒಳಗಾಗಿದ್ದರಿಂದ ಆಘಾತವಾಗಿತ್ತು. ಆದರೆ ಇದೀಗ ಪಾಕಿಸ್ಥಾನ ವಿರುದ್ಧವೇ ಏಷ್ಯಾ ಕಪ್‌ನ ಆರಂಭಿಕ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಗೆಲುವು ದಾಖಲಿಸಿರುವುದು ನನ್ನ ಪಾಲಿಗೆ ಸಾಧನೆಯ ಅನುಭವವನ್ನು ನೀಡುತ್ತಿದೆ ಎಂದು ಗೆಲುವಿ ರೂವಾರಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಬೆನ್ನುನೋವಿನಿಂದಾಗಿ ಅವರು ಸುಮಾರು ಮೂರು ವರ್ಷ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು.
ಈ ಗೆಲುವು ದಾಖಲಿಸಿರುವುದು ತುಂಬಾ ಸಂತೋಷ, ತೃಪ್ತಿ ನೀಡಿದೆ. ಯಾಕೆಂದರೆ ಇದು ನಮ್ಮ ಪಾಲಿಗೆ ಅತೀಮುಖ್ಯವಾಗಿತ್ತು. ನಾವು ಬಹಳ ಎಚ್ಚರಿಕೆಯಿಂದ ಈ ಪಂದ್ಯವನ್ನು ಆಡಿದ್ದೇವು. ಯಾಕೆಂದರೆ ಅಷ್ಟೊಂದು ಒತ್ತಡ ನಮ್ಮ ಮೇಲಿತ್ತು. ರವೀಂದ್ರ ಜಡೇಜ ನಿಜವಾಗಿಯೂ ಉತ್ತಮ ಆಟ ಪ್ರದರ್ಶಿಸಿದರು. ಅವರ ಆಟದ ಚಂದವೇ ಬೇರೆ ಎಂದು ಹಾರ್ದಿಕ್ ಹೇಳಿದರು.
ನಾಲ್ಕು ವರ್ಷಗಳ ಹಿಂದೆ ಇದೇ ಡ್ರೆಸ್ಸಿಂಗ್ ರೂಂನಲ್ಲಿ ಸ್ಟ್ರೆಚರ್‌ನಲ್ಲಿ ಸಾಗಿರುವುದು ಎಲ್ಲ ನೆನಪಿಗೆ ಬರುತ್ತಿದೆ. ಭಾರತ ತಂಡದ ಮಾಜಿ ಫಿಸಿಯೊ ನಿತಿನ್ ಪಟೇಲ್ ಮತ್ತು ಹಾಲಿ ಶಕ್ತಿವರ್ಧಕ ಮತ್ತು ಅಭ್ಯಾಸ ಕೋಚ್ ಸೋಹಮ್ ದೇಸಾಯಿ ಅವರ ಮಾರ್ಗದರ್ಶನದಿಂದಾಗಿ ನಾನು ಯಶಸ್ವಿಯಾಗಿ ಕ್ರಿಕೆಟಿಗೆ ಮರಳುವಂತಾಗಿದೆ ಎಂದು ಹಾರ್ದಿಕ್ ತಿಳಿಸಿದರು.
15 ರನ್ ಇದ್ದರೂ…
ಒಂದು ಸಮಯಕ್ಕೆ ಒಂದು ಓವರ್ ಬಗ್ಗೆ ಮಾತ್ರ ಯೋಜನೆ ಮಾಡುತ್ತೇನೆ. ಅಂತಿಮ ಓವರಿನಲ್ಲಿ ಗೆಲ್ಲಲು 7 ರನ್ ಅಲ್ಲ ಒಂದು ವೇಳೆ 15 ರನ್ ಇದ್ದರೂ ಗೆಲ್ಲಲು ಪ್ರಯತ್ನಿಸುತ್ತಿದ್ದೆ ಎಂದು ಹಾರ್ದಿಕ್ ತಿಳಿಸಿದರು. ಬೌಲಿಂಗ್ ಮಾಡುವವರಿಗೂ ಹೆಚ್ಚಿನ ಒತ್ತಡ ಇರುತ್ತದೆ. ಹಾಗಾಗಿ ನಾವು ಎಚ್ಚರಿಕೆಯಿಂದ ಆಡಿದರೆ 7 ರನ್ ಅಲ್ಲ 15 ರನ್ ಇದ್ದರೂ ಪ್ರಯತ್ನಿಸಬಹುದು ಎಂದು ಹಾರ್ದಿಕ್ ತಿಳಿಸಿದರು.