Advertisement

ಬಲಿಜರಿಗೆ ಮೀಸಲು ಭರವಸೆ ನೀಡಿದ ಸಿದ್ದು

11:33 AM May 29, 2017 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಾತಿ- ಸಮುದಾಯಗಳ ಸಮಾವೇಶಗಳಿಗೂ ಚಾಲನೆ ದೊರೆತಿದ್ದು, ಮೂರೂ ರಾಜಕೀಯ ಪಕ್ಷಗಳೂ ಓಲೈಕೆಗೆ ಮುಂದಾಗಿವೆ.

Advertisement

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಲಿಜ ಸಮುದಾಯದ ಸಮಾವೇಶದಲ್ಲಿ ಮಾಜಿ ಪ್ರಧಾನಿ
ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಿ ಸಮುದಾಯದ ಜತೆ ನಾವಿದ್ದೇವೆ ಎಂದು ಬಿಂಬಿಸಿಕೊಂಡರು.

ಜಾತಿ ಗಣತಿಯ ವರದಿ ಬಂದ ನಂತರ ಬಲಿಜ ಸಮುದಾಯದ ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರೆ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಬಲಿಜ ಸಮುದಾಯದ ಬೇಡಿಕೆ ಈಡೇರಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಿಸಿದರು. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ.ಹೀಗಾಗಿ ಸದ್ಯ ನಾನೇನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ದೇವೇಗೌಡರು ತಿಳಿಸಿದರು. 

ಉದ್ಯೋಗ ಮೀಸಲಾತಿಗೆ ಕ್ರಮ: ಸಮಾ ವೇಶ ಉದ್ಘಾಟಿಸಿದ ಸಿದ್ದರಾಮಯ್ಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರು ಬಲಿಜ ಸಮುದಾಯಕ್ಕೆ ಪ್ರವರ್ಗ-2(ಎ) ಅಡಿಯಲ್ಲಿ ರಾಜಕೀಯ ಹಾಗೂ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಜಾತಿ ಗಣತಿಯ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಮಾಜದ ವಿವಿಧ ಜಾತಿಗಳ ಸಾಮಾಜಿಕ ಪರಿಸ್ಥಿತಿ ಅರಿಯಲು ಜಾತಿ ಗಣತಿ ನಡೆಸ ಲಾಗುತ್ತಿದೆ. ಸಮಾಜ ಒಡೆಯಲು ಜಾತಿ ಗಣತಿ ನಡೆಸಿಲ್ಲ. ಸ್ವಾತಂತ್ರ್ಯ ನಂತರ ಯಾವ ಜಾತಿಗಳಿಗೆ ಎಷ್ಟೆಷ್ಟು ಸವಲತ್ತು ದೊರೆತಿದೆ ಎಂಬುದನ್ನು ಅರಿಯಲು ಇದು ನೆರವಾಗಲಿದೆ. ಈ ವರದಿಯನ್ನು ಎರಡೇ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು. 

Advertisement

ಬೇಡಿಕೆ ಈಡೇರಿಸುವೆ: ಬಿಜೆಪಿ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಬಲಿಜ ಸಮುದಾಯಕ್ಕೆ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಪ್ರವರ್ಗ 2(ಎ) ಮೀಸಲಾತಿ ನೀಡಲಾಗುವುದು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಲಿಜ ಸಮುದಾಯಕ್ಕೆ ಶಿಕ್ಷಣದಲ್ಲಿ ಪ್ರವರ್ಗ 2(ಎ) ಮೀಸಲಾತಿ ನೀಡಲಾಗಿತ್ತು. ಕಾರಣಾಂತರದಿಂದ ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ನೀಡಲು ಸಾಧ್ಯವಾಗಿರಲಿಲ್ಲ. ಇನ್ನು ಕೇವಲ 8 ರಿಂದ 9 ತಿಂಗಳು ಕಾದು ಆಶೀ ರ್ವಾದ ಮಾಡಿ, ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ನಿಮ್ಮಬೇಡಿಕೆ ಈಡೇರಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ನಾನೇನೂ ಮಾಡಲು ಸಾಧ್ಯವಿಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತ ನಾಡಿ, ಯಾರ್ಯಾರ ಅಧಿಕಾರ ಅವಧಿಯಲ್ಲಿ ಏನೇನು ಕೆಲಸ ಆಗಿದೆ ಎಂಬುದನ್ನು ಮುಕ್ತವಾಗಿ ಚರ್ಚಿಸಲು ನಾನು ಸಿದ್ಧನಿದ್ದೇನೆ. ದೇವೇಗೌಡರಿಗೆ ವಯಸ್ಸು ಆಗಿದೆ ಎಂದು ನೀವು ಅಂದುಕೊಂಡ್ರೆ ಅದು ನಿಮ್ಮ ಭ್ರಮೆ ಎಂದು ವೇದಿಕೆ ಮೇಲಿದ್ದ ಕಾಂಗ್ರೆಸ್‌, ಬಿಜೆಪಿ
ಮುಖಂಡರಿಗೆ ಟಾಂಗ್‌ ನೀಡಿದರು. ಸಮಾವೇಶದಲ್ಲಿ ಶಿಳ್ಳೆ ಚಪ್ಪಾಳೆ ಹೊಡೆಯುವುದು ಮಾತ್ರವಲ್ಲ, ಸಮಾಜಕ್ಕಾಗಿ
ಯಾರು ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಪûಾತೀತವಾಗಿ ಬಲಿಜ ಸಮಾವೇಶ ಮಾಡುತ್ತಿರುವುದು ಸಂತೋಷ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಹೀಗಾಗಿ ಈಗ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದ ಗೌಡ, ಮಹಾಸಭಾದ ಅಧ್ಯಕ್ಷ ಹಾಗೂ ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಆರ್‌.ವಿ.ದೇವರಾಜ್‌, ವಿಧಾನ ಪರಿಷತ್‌ ಸದಸ್ಯರಾದ ಮನೋಹರ್‌, ತಾರಾ
ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next