Advertisement

ಸಂಶೋಧಕ ಹರೀಶ್‌ರ ನೆನೆದು ಕಣ್ಣೀರಿಟ್ಟ ಸಚಿವ

11:55 AM Nov 06, 2017 | Team Udayavani |

ಬೆಂಗಳೂರು: ಪರಿಸರದ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದ ಖ್ಯಾತ ಸಂಶೋಧಕ ಹಾಗೂ ಪರಿಸರ ವಿಜ್ಞಾನಿ ಡಾ.ಹರೀಶ್‌ ಆರ್‌.ಭಟ್‌ ಚೈತನ್ಯದ ಚಿಲುಮೆಯಾಗಿದ್ದರು ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೇಳಿದ್ದಾರೆ.

Advertisement

ನಗರದ ರಾಜೀವ್‌ಗಾಂಧಿ ಎದೆರೋಗಗ ಸಂಸ್ಥೆಯಲ್ಲಿ ಭಾನುವಾರ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ಹರೀಶ್‌ ಆರ್‌.ಭಟ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಂಶೋಧಕರಾಗಿ, ಪರಿಸರ ವಿಜ್ಞಾನಿಯಾಗಿ ಅವರ ಕೊಡಗೆ ಅಪಾರ. ಇಂತಹ ಯುವ ವಿಜ್ಞಾನಿಯ ಹಠಾತ್‌ ನಿಧನ ತುಂಬಲಾರದ ನಷ್ಟ ಎಂದರು.

ಡಾ.ಹರೀಶ್‌ ಭಟ್‌ ಒಡನಾಡಿಗಳು ವೇದಿಕೆಯಲ್ಲಿ ಅವರೊಟ್ಟಿಗೆ ಕಳೆದ ನೆನಪುಗಳನ್ನು ಬಿಚ್ಚಿಟ್ಟ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಅನಂತ್‌ ಕುಮಾರ್‌. ವನ್ಯಜೀವಿ ಜಗತ್ತು, ಪರಿಸರ ವಿಜ್ಞಾನ, ಗುಬ್ಬಚ್ಚಿ ಮತ್ತು ಕೀಟಗಳ ಬಗ್ಗೆ ಆಳವಾದ ಅರಿವನ್ನು ಹೊಂದಿದ್ದ ಅವರು ನಮ್ಮೆಲ್ಲರ ಮುಂದೆ ಸಾಧಾರಣ ವ್ಯಕ್ತಿಯಾಗಿಯೇ ಇರುತ್ತಿದ್ದರು. ಪ್ರಕೃತಿ ಜೀವ ಜಗತ್ತಿನಲ್ಲಿ ಬದುಕುವ ತನ್ಮಯತೆ ಅವರಲ್ಲಿತ್ತು ಎಂದು ಹೇಳಿದರು.

ಖ್ಯಾತ ಕಾದಂಬರಿಕಾರ ಡಾ.ಶಿವರಾಮ ಕಾರಂತ, ವಿಜ್ಞಾನಿ ಐನ್‌ಸ್ಟೈನ್‌, ಮಹಾತ್ಮಾಗಾಂಧಿ ಸೇರಿದಂತೆ ಹಲವರಿಗೆ ಇದ್ದ ಜೀವನೋತ್ಸಾಹ ಮತ್ತು ಬತ್ತದ ಲವಲವಿಕೆ ಹರೀಶ್‌ ಭಟ್‌ ಅವರಲ್ಲಿ ಇತ್ತು. ಯಾವುದೇ ಸವಾಲುಗಳಿದ್ದರೂ ಅವುಗಳನ್ನು ಲವಲವಿಕೆಯಿಂದಲೇ ಸ್ವೀಕಾರ ಮಾಡುವ ಗುಣ ಮೈಗೂಡಿಸಿಕೊಂಡಿದ್ದರು.

ನಮ್ಮ ಸುತ್ತ ಮುತ್ತ ಹಸಿರು ತುಂಬಿ ತುಳುಕಬೇಕು. ಜನತೆಗೆ ಆಮ್ಲಜಕ ಸಿಗಬೇಕು ಎಂಬ ತುಡಿತ ಅವರಲ್ಲಿತ್ತು. ಪಶ್ಚಿಮ ಘಟ್ಟದಲ್ಲಿನ ಜೀವ ವೈವಿದ್ಯಮದ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿದ್ದರು ಎಂದು ಬಣ್ಣಿಸಿದರು.

Advertisement

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್‌ ಕುಮಾರ್‌ ಮಾತನಾಡಿ, ಪರಿಸರ, ಜೀವ ಜಗತ್ತು ಮತ್ತು ಅದಮ್ಯ ಚೇತನದೊಂದಿಗೆ ಹರೀಶ್‌ ಭಟ್‌ ಸೇತುವೆಯಾಗಿದ್ದರು. ಸಂಸ್ಥೆ ಹಮ್ಮಿಕೊಳ್ಳುತ್ತಿದ್ದ ಪರಿಸರ ವಿಜ್ಞಾನ ಕುರಿತ ಕಾರ್ಯಗಾರದಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಪರಿಸರದ ಬಗ್ಗೆ  ಪುಟ್ಟ ಮಕ್ಕಳಿಗೆ ಅವರದ್ದೇ ಆದ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಪಾಠ ಹೇಳಿ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಕ್ಕೆ ಕಾರಣರಾಗಿದ್ದರು ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಚಿವ ಅನಂತ್‌ ಕುಮಾರ್‌ ಅವರು ಡಾ.ಹರೀಶ್‌ ಭಟ್‌ ಹೆಸರಿನಲ್ಲಿ ಸಸಿ ನೆಟ್ಟರು. ತೇಜಸ್ವಿನಿ ಅನಂತ್‌ ಕುಮಾರ್‌ ಜೊತೆಗೂಡಿ ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಜಾತಿಯ ನೂರು ಸಸಿ ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next