Advertisement
ನವದೆಹಲಿಯ ಪಿ.ಆರ್.ಎಸ್.ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ವಿಕಾಸಸೌಧದಲ್ಲಿ ವಿಧಾನಪರಿಷತ್ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಿಎಸ್‌ಟಿ ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಸದಸ್ಯರ ಪ್ರಶ್ನೆ ಹಾಗೂ ಅನುಮಾಗಳಿಗೆ ಸಚಿವರು ಉತ್ತರಿಸಿದರು.
Related Articles
Advertisement
ಜಿಎಸ್‌ಟಿ ಜಾರಿಗೆ ಬಂದರೆ ರಾಜ್ಯಗಳ ಆದಾಯ ಖೋತಾ ಆಗಲಿದೆ ಎಂಬ ವಾದ ಇದೆಯಾದರೂ ಭವಿಷ್ಯದಲ್ಲಿ ರಾಜ್ಯಗಳ ಆದಾಯ ಉತ್ತಮವಾಗಲಿದೆ. 2015-16ರ ವಾರ್ಷಿಕ ಆದಾಯ ವೃದ್ಧಿ ದರ ಮಾನದಂಡವಾಗಿಟ್ಟುಕೊಂಡು ಜಿಎಸ್‌ಟಿಯಲ್ಲಿ ವಾರ್ಷಿಕ ಆದಾಯ ವೃದ್ಧಿ ದರ ಶೇ.14 ಎಂದು ನಿಗದಿಪಡಿಸಲಾಗಿದೆ.
ಕರ್ನಾಟಕದ ವಾರ್ಷಿಕ ಆದಾಯ ವೃದ್ಧಿ ದರ ಶೇ. 15ರಷ್ಟಿದೆ. ಅದೇ ರೀತಿ ಅನೇಕ ರಾಜ್ಯಗಳಲ್ಲಿ ವಾರ್ಷಿಕ ಆದಾಯ ವೃದ್ಧಿ ದರ ಶೇ.8ರಷ್ಟಿದೆ. ರಾಜ್ಯಗಳ ಈ ವಾರ್ಷಿಕ ಆದಾಯ ವೃದ್ಧಿ ದರದಲ್ಲಿ ಸಮತೋಲನ ತರಲು ಜಿಎಸ್‌ಟಿ ಕಾಯ್ದೆಯಲ್ಲೇ ಅವಕಾಶವಿದೆ. 2017-18ರಿಂದ ಮುಂದಿನ ಐದು ವರ್ಷದವರೆಗೆ ಶೇ.14ರಷ್ಟರ ವಾರ್ಷಿಕ ಆದಾಯ ವೃದ್ಧಿ ದರದ ಖಾತರಿಯನ್ನು ಜಿಎಸ್‌ಟಿ ಕಾಯ್ದೆ ನೀಡುತ್ತದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಪಿ.ಆರ್.ಎಸ್ ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆಯ ಅಭಿಜತ್ ಹಾಗೂ ವತ್ಸಲ್ ಖುಲ್ಲಾರ್ ಜಿಎಸ್‌ಟಿ ಕಾಯ್ದೆ ಬಗ್ಗೆ ಪ್ರಾತ್ಯಾಕ್ಷಿಕೆ ನೀಡಿದರು. ವಿಧಾನಪರಿಷತ್ತಿನ 48ಕ್ಕೂ ಹೆಚ್ಚು ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಐವಾನ್ ಡಿಸೋಜಾ, ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಿತ್ವಿಕ್ ರಂಜನ್ ಪಾಂಡೆ ಉಪಸ್ಥಿತರಿದ್ದರು.
ಕನ್ನಡ ಚಿತ್ರಗಳ ಮನರಂಜನಾ ತೆರಿಗೆ ಬಗ್ಗೆ ರಾಜ್ಯವೇ ತೀರ್ಮಾನಿಸಬೇಕು ಕರ್ನಾಟಕದಲ್ಲಿ ಶೇ. 30 ಮನರಂಜನಾ ತೆರಿಗೆ ಇದೆ. ಜಿಎಸ್‌ಟಿ ಜಾರಿಗೆ ಬಂದರೆ ಇದು ಶೇ.28 ಆಗಲಿದೆ. ಇದು ಎಲ್ಲ ಸಿನಿಮಾಗಳಿಗೆ ಆನ್ವಯ ಆಗಲಿದೆ. ಆದರೆ, ಕನ್ನಡ ಸಿನಿಮಾಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಆಯಾ ರಾಜ್ಯಗಳು ತೆರಿಗೆ ವಿನಾಯ್ತಿ ನೀಡಿರುವ ವಿಚಾರ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಬಂತು. ಈ ವಿಚಾರದಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳಲು ಅಥವಾ ತೆರಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಬಂದಿದೆ. ಹಾಗಾಗಿ, ರಾಜ್ಯ ಸರ್ಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.