Advertisement

ರೆಡ್ಡಿ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಜಾರಿಗೆ

04:23 PM May 12, 2017 | |

ಸೇಡಂ: ರೆಡ್ಡಿ ಸಮುದಾಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೆಡ್ಡಿ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಜಾರಿಗೆ ತರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ರೆಡ್ಡಿಸಮಾಜ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Advertisement

ವೇಮನ್ನರ ಹೆಸರು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಸಲು ಸರ್ಕಾರ ಚಿಂತನೆ ನಡೆಸಿದೆ. ಸೇಡಂ ಪಟ್ಟಣದಲ್ಲಿ ಮತ್ತೂಂದು ಹೊಸ ಹೈಟೆಕ್‌ ಬಸ್‌ ನಿಲ್ದಾಣವನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ರೆಡ್ಡಿ ಸಮಾಜದ ವತಿಯಿಂದ ಅನೇಕ ಕಡೆ ವಸತಿ ನಿಲಯ ಮತ್ತು ಶಾಲಾ, ಕಾಲೇಜುಗಳನ್ನು ನಿರ್ಮಿಸಿ ಎಲ್ಲ ಸಮುದಾಯಗಳಿಗೆ ಪ್ರೇರಣಾದಾಯಕವಾಗಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠಕ್ಕೆ ಕಲಬುರಗಿಯಲ್ಲಿ ಚಾಲನೆ ದೊರೆತಿದೆ. ಕೇವಲ ಖುಷಿಗಾಗಿ ಜಯಂತಿ ಆಚರಿಸದೆ ಮಹಾತ್ಮರ ಜೀವನ ಅರಿಯಲು ಜಯಂತಿಗಳು ಪೂರಕವಾಗಬೇಕು ಎಂದರು. ಐದು ಸಾವಿರ ಪದ್ಯಗಳನ್ನು ಸಮಾಜಕ್ಕೆ ನೀಡಿದ ವೇಮನ್ನರ ಕೊಡುಗೆ ಎಂದಿಗೂ ಮರೆಯಬಾರದು.

ಜೀವನದಲ್ಲಿ ಭೋಗಿಯಾಗಿ ಯೋಗಿಯಾಗುವುದು ಕಷ್ಟ. ಆದರೆ ಕಾಯಕದ ಮೂಲಕ ಯೋಗಿಯಾಗಬಹುದು ಎಂದು ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಸಮಾಜಕ್ಕೆ ತ್ಯಾಗ ಸಂದೇಶ, ಸಹನೆ, ಪ್ರೀತಿ ಕೊಟ್ಟವರ ಜಯಂತಿ ಆಚರಣೆಯಿಂದ ಒಳ್ಳೆಯ ಮಾರ್ಗ ದೊರೆಯಲಿದೆ.

ಶ್ರೀಶೈಲದಲ್ಲಿ ರಾಜ್ಯದ ಜನತೆಗಾಗಿ ಸರ್ಕಾರದ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ವಸತಿ ಗೃಹ ನಿರ್ಮಿಸಲಾಗುತ್ತಿದೆ. ರೆಡ್ಡಿ ಜನಾಂಗದ ಬೆಂಬಲದಿಂದ ಸತತ ಮೂರು ಬಾರಿ ಜಯಗಳಿಸಿ, ಕ್ಯಾಬಿನೆಟ್‌ ದರ್ಜೆ ಸ್ಥಾನ ಮಾನ ದೊರೆತಿದೆ ಎಂದರು. ಹಿರಿಯ ಸಾಹಿತಿ ಸೂಗಯ್ಯ ಹಿರೇಮಠ ಉಪನ್ಯಾಸ ನೀಡಿದರು.

Advertisement

ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಚಿಂಚೋಳಿ ಶಾಸಕ ಉಮೇಶ ಜಾಧವ, ತೆಲಂಗಾಣದ ಕೊಡಂಗಲ ಕ್ಷೇತ್ರದ ಶಾಸಕ ರೇವಂತರೆಡ್ಡಿ, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಡಾ| ನಾಗರೆಡ್ಡಿ ಪಾಟೀಲ, ಉದ್ಯಮಿ ಲಿಂಗಾರೆಡ್ಡಿ ಪಾಟೀಲ ನಾಲವಾರ, ರೆಡ್ಡಿ ಸಮಾಜದ ರಾಜ್ಯ ಉಪಾಧ್ಯಕ್ಷ ಶಾಂತರೆಡ್ಡಿ ವನಕೇರಿ,

ಸರ್ವಜ್ಞ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಚಿತ್ತಾಪೂರ ವಿಶ್ವಗಂಗಾ ಶಿಕ್ಷಣ ಸಂಸ್ಥೆ ನಾಗರೆಡ್ಡಿ ಪಾಟೀಲ ಕರದಾಳ, ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ವೀರಾರೆಡ್ಡಿ ಹೂವಿನಬಾವಿ ವೇದಿಕೆಯಲ್ಲಿದ್ದರು. ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಹೈಕ ಶಿಕ್ಷಣ ಸಂಸ್ಥೆ ನಾಮ ನಿರ್ದೇಶಿತ ಸದಸ್ಯ ಡಾ| ಶರಣಬಸವಪ್ಪ ಕಾಮರೆಡ್ಡಿ, ರಾಯಚೂರು ಕೃಷಿ ವಿವಿ ನಿರ್ದೇಶಕ ಈರಣ್ಣಗೌಡ ನಾಲವಾರ ಅವರನ್ನು ಸನ್ಮಾನಿಸಲಾಯಿತು.  

ಮನವಿ: ಇದೇ ವೇಳೆ ರೆಡ್ಡಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಲು ತಾಲೂಕು ರೆಡ್ಡಿ ಸಮುದಾಯದ ವತಿಯಿಂದ ಮನವಿ ಸಲ್ಲಿಸಲಾಯಿತು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next