ಮಂಗಳೂರು: ಕೊರೊನಾ ಕಾರಣ ಪ್ರಸ್ತುತ ಎಲ್ಲ ರೈಲುಗಳನ್ನು ವಿಶೇಷ ರೈಲುಗಳನ್ನಾಗಿ ಓಡಿಸಲಾಗುತ್ತಿದೆ ಮತ್ತು ಇದೇ ಸಂದರ್ಭದಲ್ಲಿ ಪ್ಯಾಸೆಂಜರ್ ರೈಲುಗಳು ಮೈಲ್/ ಎಕ್ಸ್ ಪ್ರಸ್ ರೈಲುಗಳಾಗಿ ಕಾರ್ಯಾಚರಿಸುತ್ತಿವೆ.
ಈಗ ರಾಜ್ಯದಲ್ಲಿ ಎಲ್ಲಿಯೂ ಪ್ಯಾಸೆಂಜರ್ ರೈಲುಗಳು ಕಾರ್ಯಾಚರಿಸುತ್ತಿಲ್ಲ. ಎಲ್ಲ ಪ್ಯಾಸೆಂಜರ್ ರೈಲುಗಳನ್ನು ಮೈಲ್/ ಎಕ್ಸ್‌ಪ್ರೆಸ್ ರೈಲುಗಳಾಗಿ ಓಡಿಸುತ್ತಿರುವುದರಿಂದ ಅವುಗಳಲ್ಲಿ ಟಿಕೆಟ್ ದರವೂ ಅಧಿಕ ಇರುತ್ತದೆ.
ಮೈಲ್/ ಎಕ್ಸ್‌ಪ್ರೆಸ್ ರೈಲುಗಳಿಗೆ ಕಿ.ಮೀ. ಪ್ರಯಾಣಕ್ಕೆ ನಿಗದಿತ ದರ ಇದ್ದು, ಕನಿಷ್ಠ 50 ಕಿ.ಮೀ. ದೂರ ಪ್ರಯಾಣಕ್ಕೆ 30 ರೂ. ಇದೆ. ವಿಶೇಷ ಎಂದರೆ ಮೈಲ್/ ಎಕ್ಸ್‌ಪ್ರೆಸ್ ರೈಲುಗಳಲ್ಲಿ 50 ಕಿ.ಮೀ. ಗಿಂತ ಕಡಿಮೆ ದೂರದ ಟಿಕೆಟ್ ದರ ಇಲ್ಲ. ನಿಲುಗಡೆ ಇರುವ ರೈಲು ನಿಲ್ದಾಣಗಳ ನಡುವೆ 50 ಕಿ.ಮೀ.ಗಿಂತ ಕಡಿಮೆ ಅಂತರ ಇದ್ದರೂ ಟಿಕೆಟ್ ದರ 50 ಕಿ.ಮೀ. ದೂರ ಪ್ರಯಾಣಕ್ಕೆ ನಿಗದಿ ಪಡಿಸಿರುವ 30 ರೂ. ಪಾವತಿಸಬೇಕಾಗುತ್ತದೆ. ಹಾಗಾಗಿ ಉಡುಪಿ- ಕುಂದಾಪುರ ನಡುವೆ 45 ಕಿ.ಮೀ. ದೂರ ಇದ್ದು, ಟಿಕೆಟ್ ದರ 50 ಕಿ.ಮೀ. ಪ್ರಯಾಣಕ್ಕೆ ನಿಗದಿಪಡಿಸಿರುವ 30 ರೂ. ಪಾವತಿಸಬೇಕಾಗುತ್ತದೆ. ಅದೇ ಪ್ಯಾಸೆಂಜರ್ ರೈಲಿನಲ್ಲಿ ಟಿಕೆಟ್ ದರ 15 ರೂ. ಮಾತ್ರ ಇರುತ್ತದೆ. ಹಾಗೆಯೇ ಮಂಗಳೂರು- ಪುತ್ತೂರು ನಡುವಣ ಪ್ರಯಾಣಕ್ಕೂ 30 ರೂ. ಟಿಕೆಟ್ ದರ ಪಾವತಿಸಬೇಕಾಗಿದೆ.
ಈಗ ಪ್ಯಾಸೆಂಜರ್ ರೈಲುಗಳೇ ಇಲ್ಲ. ಈ ಹಿಂದೆ ಪ್ಯಾಸೆಂಜರ್ ರೈಲಾಗಿ ಸಂಚರಿಸುತ್ತಿದ್ದ ರೈಲುಗಳನ್ನು ಮೈಲ್/ ಎಕ್ಸ್‌ಪ್ರೆಸ್ ರೈಲುಗಳನ್ನಾಗಿ ಓಡಿಸಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಕಾರಣ ಜನರ ಸುರಕ್ಷೆಯ ದೃಷ್ಟಿಯಿಂದ ಅಧಿಕ ಮಂದಿ ರೈಲಿನಲ್ಲಿ ಪ್ರಯಾಣಿಕರು ಸಂಚರಿಸ ಬಾರದು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ರೈಲು ಮಂಡಳಿ ಕೈಗೊಂಡಿದೆ ಎಂದು ರೈಲ್ವೇ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ಎಲ್ಲಿಯೂ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿಲ್ಲ. ಕೊಂಕಣ ರೈಲ್ವೇ, ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇ ಸಹಿತ ಎಲ್ಲೂ ಇಲ್ಲ. ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಪುನರಾರಂಭಿಸಬೇಕೆಂದು ರೈಲ್ವೇ ಮಂಡಳಿಗೆ ಹಲವು ಬಾರಿ ಪತ್ರ ಬರೆದು ಕೋರಲಾಗಿದೆ. ಆದರೆ ರೈಲ್ವೇ ಮಂಡಳಿ ಇದುವರೆಗೆ ಅದಕ್ಕೆ ಅನುಮತಿ ನೀಡಿಲ್ಲ.
– ಸುಧಾ ಕೃಷ್ಣಮೂರ್ತಿ
ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ ರೈಲ್ವೇ.