Advertisement

ಭಾವೈಕ್ಯತೆಯಿಂದ ಬಾಳಿದರೆ ಭಗವಂತನ ಸಾಕ್ಷಾತ್ಕಾರ

06:03 PM Dec 17, 2021 | Team Udayavani |

ಗಜೇಂದ್ರಗಡ: ಶರಣ, ಸಂತರ ವಾಣಿ ಬಂಗಾರ ತೂಗುವ ತಕ್ಕಡಿ ಇದ್ದಂತೆ. ಜೊತೆಗೆ ದೇವರಿಗೆ ಎಲ್ಲರೂ ಸಮಾನರು. ಈ ನಿಟ್ಟಿನಲ್ಲಿ ಅಹಂ ಬಿಟ್ಟು ಸಮಾಜದಲ್ಲಿ ಭಾವೈಕ್ಯತೆಯಿಂದ ಬಾಳಿದರೆ ಭಗವಂತನ ದಯೆಯ ಜೊತೆಗೆ ಸಾಕ್ಷಾತ್ಕಾರ ಪ್ರಾಪ್ತಿಯಾಗಲಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

Advertisement

ಸಮೀಪದ ನಾಗರಸಕೊಪ್ಪ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಮನದಲ್ಲಿ ಭಗವಂತನನ್ನು ಸ್ಮರಿಸಿದರೆ ಸಾಕ್ಷಾತ್ಕಾರ ಆಗಲಿದೆ. ಭಗವಂತನನ್ನು ಭಕ್ತಿಯಿಂದ ಕಟ್ಟಿ ಹಾಕಬೇಕು. ಇದರಿಂದ ದೇವರ ಅನುಗ್ರಹಕ್ಕೆ ಭಕ್ತರು ಪಾತ್ರರಾಗುತ್ತಾರೆ. ಭಕ್ತರ ಇಷ್ಟಾರ್ಥ ಪೂರೈಸುವ ಭಾರತೀಯ ಸಂಸ್ಕೃತಿಗೆ ವಿಶ್ವದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.

ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುವಲ್ಲಿ ಎಲ್ಲರ ಕರ್ತವ್ಯ ಮುಖ್ಯವಾಗಿದೆ. ನಾಡಿನ ಗುಡಿ, ಗೋಪುರಗಳಿಗೆ ವಿಶೇಷ ಸ್ಥಾನ ಮತ್ತು ಭಾವನಾತ್ಮಕ ಸಂಬಂಧ ನೀಡಲಾಗಿದೆ. ದೇವರು ಮನುಷ್ಯನಿಗೆ ನೆಮ್ಮದಿ ನೀಡುವ ಶಕ್ತಿ. ದೇವಾಲಯಗಳು ಶ್ರದ್ಧೆ ನೀಡುವ ತಾಣಗಳಾಗಿವೆ. ಮಾನವನ ದೇಹವನ್ನು ದುಡಿಮೆಗೆ, ಮನಸ್ಸು ಭಗವಂತನಿಗೆ ಅರ್ಪಿಸಿ ಜೀವನದಲ್ಲಿ ಶ್ರೇಯಸ್ಸು ಕಾಣಬೇಕಾಗಿದೆ. ಅಂದಾಗ ಮಾತ್ರ ಧಾರ್ಮಿಕ ಚಿಂತನೆಗೆ ಅರ್ಥ ಬರುತ್ತದೆ ಎಂದರು.

ಜಾಗತಿಕ ಬದಲಾವಣೆಯ ಭರಾಟೆಯಲ್ಲಿ ಧರ್ಮ, ಧಾರ್ಮಿಕ ಆಚರಣೆಗಳು ಮರೆಯಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಧರ್ಮಾಸಕ್ತಿ ಮಂಗಮಾಯವಾಗಿ ಶ್ರದ್ಧೆ, ನಂಬಿಕೆ, ಭಕ್ತಿ, ಗುರು ಹಿರಿಯರ ಆಶೀರ್ವಾದಗಳಿಗೆ ಬೆಲೆಯೇ ಇಲ್ಲದಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ದುರಾಸೆ ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತದೆ. ಕ್ರೋಧ ವ್ಯಕ್ತಿತ್ವಕ್ಕೆ ಮುಳುವಾಗುತ್ತದೆ. ನಮ್ಮ ಶ್ರೇಯಸ್ಸು ಆಗಬೇಕಾದರೆ ಕಾಮ, ಕ್ರೋಧಗಳು ನಾಶವಾಗಬೇಕು. ಅಂತರಂಗದಲ್ಲಿ ದೇವರನ್ನು ಪ್ರತಿಷ್ಠಾಪನೆ ಗೈದು ಆರಾ ಧಿಸಬೇಕು. ಪುರಾಣ ಪ್ರವಚನ ಕೇಳುವುದರಿಂದ ಕೆಟ್ಟ ವಿಚಾರಗಳು ದೂರವಾಗಿ ಒಳ್ಳೆಯ ಭಾವನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಬಸವಾದಿ ಶರಣರು ತಮ್ಮ ಸ್ವಾರ್ಥ ಹಿತಾಸಕ್ತಿ ತ್ಯಾಗ ಮಾಡಿ ಆಧ್ಯಾತ್ಮಿಕ ತಳಹದಿ ಮೂಲಕ ಸಮಾಜದಲ್ಲಿನ ಕಲ್ಮಷ ತೊಳೆದು ವೈಚಾರಿಕತೆಯ ಬದುಕಿಗೆ ದಾರಿದೀಪವಾಗಿದ್ದಾರೆ. ಅಂತಹ ಮಹಾ ಮಹಿಮರ ಆದರ್ಶಗಳನ್ನು ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಧಾರ್ಮಿಕ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದರು.

Advertisement

ಇದೇ ಸಂದರ್ಭದಲ್ಲಿ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭದೊಂದಿಗೆ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಸಕಲ ಮಂಗಲ ವಾದ್ಯಗಳು ಮೇಳೈಸಿದವು. ಭಕ್ತರ ಹರ್ಷೋದ್ಘಾರದ ಮಧ್ಯೆ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಪ್ರವಚನಕಾರ ವೇ|ಮೂ| ಶ್ರೀ ಅನ್ನದಾನೇಶ್ವರ ಶಾಸ್ತ್ರಿಗಳು ಸೇರಿದಂತೆ ಗ್ರಾಮದ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next