ಬೆಂಗಳೂರು: ಜೋರಾದ ಗಾಳಿ ಸಹಿತ ಸುರಿದ ಮಳೆಗೆ ಬುಧವಾರ ನಗರದ ವಿವಿಧ ಭಾಗಗಳಲ್ಲಿ ಹತ್ತಾರು ಹೆಚ್ಚು ಬೃಹತ್ ಮರಗಳು ಧರೆಗುರುಳಿದ್ದು, ಭೈರವೇಶ್ವರ ನಗರದಲ್ಲಿ ಕಾರೊಂದು ಜಖಂಗೊಂಡಿದೆ.
ನಗರದಲ್ಲಿ ಬುಧವಾರ ಮಧ್ಯಾಹ್ನ ಜೋರಾದ ಗಾಳಿದ ಸಹಿತ ಸುರಿದ ಧಾರಾಕಾರ ಮಳೆಗೆಯಿಂದಾಗಿ 8 ಬೃಹತ್ ಗಾತ್ರದ ಮರಗಳು ಹಾಗೂ 7 ಕೊಂಬೆಗಳು ಧರೆಗುರುಳಿದ್ದು, ಭೈರವೇಶ್ವರ ನಗರದಲ್ಲಿ ಮರ ಕಾರಿದ ಮೇಲೆ ಉರುಳಿದ ಪರಿಣಾಮ ಕಾರು ಜಖಂಗೊಂಡಿದೆ.
ಈ ವೇಳೆ ಕಾರಿನಲ್ಲಿ ಯಾರು ಇಲ್ಲದಿದ್ದರಿಂದ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ ಎಂದು ಪಾಲಿಕೆಯ ನಿಯಂತ್ರಣ ಕೊಠಡಿ ಸಿಬ್ಬಂದಿ ತಿಳಿಸಿದ್ದಾರೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಕೆಲವು ರಸ್ತೆಗಳಲ್ಲಿ ನೀರು ನಿಂತರೂ ರಜೆ ದಿನವಾದ್ದರಿಂದ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಲಿಲ್ಲ.
ಅದರಂತೆ ಹಲಸೂರು, ವಿಲ್ಸನ್ ಗಾರ್ಡನ್, ಜಯನಗರ, ಮೂಡಲಪಾಳ್ಯ, ನಾಗರಬಾವಿ, ಕಾವೇರಿಪುರ, ಮಲ್ಲತ್ತಹಳ್ಳಿ, ಬೊಮ್ಮನಹಳ್ಳಿ, ಹುಳಿಮಾವು, ರಾಜರಾಜೇಶ್ವರಿನಗರ, ಅಮ್ಮಾ ಆಶ್ರಮ ರಸ್ತೆ, ಬೆಳ್ಳಂದೂರು ಸಿಗ್ನಲ್ ಸೇರಿದಂತೆ ಹಲವೆಡೆಗಳಲ್ಲಿ ಎಂಟು ಮರಗಳು ಹಾಗೂ 7 ಕೊಂಬೆಗಳು ಉರುಳಿವೆ.
ಮಾರುಕಟ್ಟೆಯಲ್ಲಿ ಹರಿದ ಕೊಳಚೆ ನೀರು: ಕೆ.ಆರ್.ಮಾರುಕಟ್ಟೆಯ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಿಂದಾಗಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದ ಪರಿಣಾಮ ಕೆ.ಆರ್.ಮಾರುಕಟ್ಟೆ ಜಂಕ್ಷನ್‌ನಲ್ಲಿ ನಿರಂತರವಾಗಿ ಕೊಳಚೆ ನೀರು ಹರಿದ ಪರಿಣಾಮ ಸಾರ್ವಜನಿರಕು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಇದರೊಂದಿಗೆ ಕೆ.ಆರ್.ವೃತ್ತ, ಶಿವಾನಂದ ವೃತ್ತ, ಓಕಳಿಪುರ ಜಂಕ್ಷನ್, ಚಾಲುಕ್ಯವೃತ್ತಗಳಲ್ಲಿ ಮಳೆನೀರು ನಿಂತಿದ್ದರಿಂದ ವಾಹನಗಳು ಸಂಚರಿಸಿದಾಗ ಪಾದಚಾರಿಗಳ ಮೇಲೆ ಸಿಡಿದು ಕಿರಿಕಿರಿ ಅನುಭವಿಸುವಂತಾಗಿತ್ತು.