ಯಾವ್ಯಾವುದೋ ಊರುಗಳಿಂದ ಬಂದವರು ಮೂರು ವರ್ಷ ಒಟ್ಟಿಗೇ ಓದಿ, ಎಸ್ಸೆಸ್ಸೆಲ್ಸಿ ಮುಗಿಸಿ, ಗ್ರೂಪ್ ಫೋಟೊ ತೆಗಸಿಕೊಂಡು ವಿದಾಯ ಹೇಳುವಾಗ, ಎಲ್ಲರಿಗೂ ಗಂಟಲುಬ್ಬಿ ಬಂದಿತ್ತು. ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಿದ್ದಾಗ, ಪಡುವಣದ ಬಾನೂ ಕೆಂಪಾಗಿತ್ತು…
ಅದೇ ಜಾಗ, ಹಳೆಯ ನೆನಪುಗಳು, ಮರುಕಳಿಸದ ಆಸೆ. ದೂರದಲ್ಲಿ ಬರುತಿರುವ ನೀವು. ಧ್ವಜ ಕಟ್ಟೆಯ ಮೇಲೆ ಕುಳಿತ ನಾನು. ವೇಗ ಆವೇಗದ ಸ್ಪಂದನೆಗೆ ಮೆಲ್ಲನೆ ಅತ್ತಿತ್ತ ತೂಗಾಡಿದ ಮರಗಳು ಬೀಸಿದ ತಂಗಾಳಿಗೆ ಹಾರಿದ ಸ್ನೇಹ ಧ್ವಜ. ಮೆಲ್ಲನೆ ತಿರುಗಿದ ಬದುಕಿನ ಪುಟಗಳು, ಗಕ್ಕನೇ ಹಿಡಿದಾಗ ತೆರೆದುಕೊಂಡಿದ್ದು ಎಸ್ಸೆಸ್ಸೆಲ್ಸಿಯ ಬೀಳ್ಕೊಡುಗೆ ಸಮಾರಂಭದ ದಿನ.
ಓಹ್! ಎದೆಬಡಿತ ಏರುತ್ತಲೇ ಹೋಗುತ್ತಿದೆ. ಗ್ರೂಪ್ ಫೋಟೋ ತೆಗೆಸಿಕೊಳ್ಳುವವರೆಗೂ ಎದೆಯುಬ್ಬಿಸಿ ನಿಂತಿದ್ದ ನಾವು, ಅದೇಕೆ ಎಲ್ಲರೂ ಎದೆಯ ಕಡಲೊಮ್ಮೆ ಉಕ್ಕಿ ಬಂದಂತೆ ಅಳುತ್ತಿದ್ದೆವು? ಇನ್ನೇನು ಇಲ್ಲಿಂದ ಹೊರಡುತ್ತೇವೆ ಎಂಬ ಸಮಯಕ್ಕೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಗ ಪಡುವಣದ ಬಾನೆಲ್ಲಾ ಕೆಂಪಾಗಿತ್ತು. ಎಲ್ಲಿಂದಲೋ ಬಂದವರು, ಎಲ್ಲೆಲ್ಲಿಯೋ ಕುಳಿತು ಮೂರು ವರ್ಷಗಳ ಹೈಸ್ಕೂಲ್ ಓದಿನಲ್ಲಿ ಯಾರನ್ಯಾರು ಅರಿತೆವೋ? ನಗಿಸಿದೆವೋ? ನೋಯಿಸಿದೆವೋ? ಅಳಿಸಿದೆವೋ? ಯಾವ ಕಾರಣಕ್ಕೆ ಜಗಳವೋ? ಯಾರು ರಾಜಿ ಮಾಡಿಸುತ್ತಿದ್ದರೊ? ಯಾವುದು ಗುಂಪೊ? ಯಾರು ಲೀಡರೊÅà? ಕೀಟಲೆ, ಚಾಡಿ, ಆಟದಲ್ಲಿ ಮಾಡುತ್ತಿದ್ದ ಮೋಸ, ಗೆದ್ದ ನಲಿವು, ಸೋತ ನೋವು, ಭೇದವಿರದ ಸಾಂತ್ವನ, ಯಾವುದು ನೆನಪೋ? ಯಾವುದು ನಿಜವೋ? ಜಾರಿ ಹೋದ ಕಣ್ಣ ಹನಿಗಷ್ಟೇ ಗೊತ್ತು.
ಆದರೆ, ಆ ದಿನ ನಮ್ಮ ಗೆಳೆತನದ ಬಾಂಧವ್ಯ, ಭಾÅತೃ ವಾತ್ಸಲ್ಯ ತಣ್ಣಗಿನ ಚಿಲುಮೆಯಂತಾಗಿತ್ತು. ಮೂರು ವರ್ಷಗಳಲ್ಲಿ ದಿನದಿನವೂ ತಿದ್ದಿ, ತೀಡಿ, ಬೈದು, ಬುದ್ಧಿ ಕಲಿಸಿದ ಗುರುಗಳ ಕಂಗಳಲ್ಲಿಯೂ ತೇವದ ಪರದೆ ಆವರಿಸಿತ್ತಲ್ಲ?! ಎಂಥ ದಿವ್ಯಬಂಧನದ ಕುರುಹು ಅದು. ನಮ್ಮ ಗದ್ಗದಿತ ಕೊರಳನ್ನಾವರಿಸಿದ ಉಸಿರು ಉಸಿರಿನಲ್ಲಿ ಪರಮಸುಖದಂಥ ನೆನಪು ಕೊಟ್ಟ ಗೆಳೆಯರೇ ಮೆಲ್ಲನೇ ಬನ್ನಿ. ಇದೇ ಮೈದಾನದಲ್ಲಿ ನೆನಪುಗಳ ಹೂಗಳು ಅರಳಿವೆ. ಭಾರದ ಹೆಜ್ಜ ಇಟ್ಟು, ದೂರಾದ ಮುಖ ತಿರುಗಿಸಲೂ ಕಣ್ಣೊಳಗೆ ಕಣ್ಣು ನೆಟ್ಟಿದ್ದ ಅದೇ ಶಾಲೆಯ ಮೈದಾನದಲ್ಲಿ ನಾ ನಿಂತಿರುವೆ. ಬನ್ನಿ, ಬಹಳ ವರ್ಷಗಳ ನಂತರ ಸಿಗುತ್ತಿರುವ ನಿಮಗೆ, ನಿಮ್ಮನ್ನೇ ನೀವು ಹುಡುಕಾಡಿಕೊಳ್ಳಲು ಅವಕಾಶವಿದೆ. ಎಲ್ಲವೂ ಸುವಿಶಾಲ ಬಾನಿನ ಬಯಲು ಶಾಲೆ, ಈಗ ನಾವು ನೀವೆಲ್ಲಾ ನಕ್ಷತ್ರಗಳಂತಾಗಿದ್ದೇವೆ ಅನಿಸುತ್ತಿದೆ. ಕೆಲವರು ಮೋಡದ ಮರೆಯಲ್ಲಿದ್ದರೆ ಕೆಲವರು ಮಿನುಗಿ ಮಿಂಚುತ್ತಿದ್ದಾರೆ.
ನನಗೆ ನಿರಾಸೆಯಾಗಲಿಲ್ಲ. ಅದೋ, ಒಬ್ಬೊಬ್ಬರೇ ಬರುತ್ತಿದ್ದಾರೆ. ಎಲ್ಲರೂ ತುಂಬಾ ಬದಲಾಗಿದ್ದಾರೆ. ಹೊಸತೊಂದು ಭಾಷೆ ಕಲಿತಂತಿದೆ. ಒಬ್ಬೊಬ್ಬರದು ಒಂದೊಂದು ಶೈಲಿ ಇದೆ. ಗಾಳಿ ಬಂದರೆ ಹಾರಿ ಹೋಗುವಂತಿದ್ದ ಅವನು, ಈಗ ಎಲ್ಲರಿಗಿಂತ ದಪ್ಪ, ಪೆನ್ನು ಕದ್ದು ಸಿಕ್ಕುಬೀಳುತ್ತಿದ್ದ ಅವನು ಈಗ ಪೊಲೀಸ್, ಉತ್ತರಿಸಲು ತಡವರಿಸುತ್ತಿದ್ದವ ಮೇಷ್ಟ್ರು, ಈ ಮಹರಾಯ ಐಟಿಐ ಸೇರಿದ್ದ ಅಂತ ನೆನಪು.. ಈಗ ನೋಡಿದ್ರೆ ಎಂಜಿನಿಯರ್ ಆಗಿದಾನಂತೆ! ಕೂದಲು ಕಟ್ಟಿಕೊಳ್ಳೋಕೆ ಬರಲ್ಲ ಅಂತ ಬೈಸಿಕೊಳ್ಳುತ್ತಿದ್ದವಳು ಪಾರ್ಲರ್ ಇಟ್ಟುಕೊಂಡಿದೀನಿ ಅಂತಾಳೆ.
ವರದಕ್ಷಿಣೆ ವಿರುದ್ಧ ಭಾಷಣ ಮಾಡಿದವಳು, ಮದುವೇನೇ ಆಗಲ್ಲ ಅಂತಿಧ್ದೋಳು ಮಕ್ಕಳನ್ನು ಎತ್ಕೊಂಡು ಬಂದಿದಾಳೆ. ಇನ್ನೊಬ್ಬ ಭರ್ಜರಿಯಾಗಿ ಓದುತ್ತಿದ್ದವನು ವ್ಯವಸಾಯ ಮಾಡ್ತಿದೀನಿ ಅಂತ ಮುಜುಗರಪಟ್ಕೊàತಾನೆ. “ಹೇಗಿದೆಲ್ಲಾ? ಏನಿದರ ಮರ್ಮ? ಕಾಲ ಎಷ್ಟೊಂದು ಬದಲಾಗಿದೆ ಅಲ್ವೇನ್ರೊà?..’ ಅಂದರೆ ನಮ್ಮ ರೈತ ಗೆಳೆಯ, “ಯಾವುದೂ ಬದಲಾಗಿಲ್ಲ. ಆಗಿದ್ರೆ ನಾವಿಲ್ಲಿ ಮತ್ತೆ ಬಂದು ಸೇರುತ್ತಿದ್ವಾ..?’ ಅಂತ ಕೇಳಿದ.
ಹೌದಲ್ವಾ! ಅಂತ ಅಚ್ಚರಿಪಟ್ಟೆ.
ಎಷ್ಟೊಂದು ಮಾತು… ಅಬ್ಬಬ್ಟಾ! ಯಾರೂ ಸುಮ್ಮನಾಗುತ್ತಿಲ್ಲ. ನೆನಪುಗಳನ್ನು ಮಾತಾಡಿದೊÌà..? ನಾಳೆಗಳನ್ನು ಮಾತಾಡಿದೊÌà..? ಎಲ್ಲವೂ ಖುಷಿಯ ಮಾತುಗಳೇ! ನಗುವೇ ನಗು. ನಮ್ಮ ಮಾತುಗಳು ಮುಗಿಯುವಂತಿರಲಿಲ್ಲ. ನಮ್ಮನ್ನೆಲ್ಲ ರೂಪಿಸಿ ಮತ್ತೆ ಬಂದಾಗ ನೆರಳು ಕೊಟ್ಟ ಶಾಲೆಯ ಕಟ್ಟಡ ಮಾತ್ರ ಯಾವ ಋಣದ ಬಗೆಗೂ ಮಾತನಾಡದೆ ಗಟ್ಟಿಯಾಗಿ ನಿಂತಿತ್ತು. ಅದರ ಮೌನದಲ್ಲಿ ಎಷ್ಟು ಮಾತುಗಳಿವೆಯೋ? ಯಾರ ಜೊತೆ ಮಾತನಾಡುತ್ತೂ ಅದು? ನಾವು ಮಾತ್ರ ಮತ್ತೂಂದು ಸೆಲ್ಫಿ ತೆಗೆದುಕೊಂಡು ವಾಪಸ್ ಬರುವಾಗ ಮತ್ತೆ ಕಣ್ಣುಗಳು ಹನಿಗೂಡಿದ್ದವು.
-ಸೋಮು ಕುದರಿಹಾಳ