Advertisement
ಈ ಮಧ್ಯೆ, ಸಂತ್ರಸ್ತರ ನೆರವಿಗೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಧಾವಿಸಿದ್ದು, ಮಾನವೀಯತೆ ಮೆರೆಯುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಸೇರಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರೂ ಪ್ರವಾಹಪೀಡಿತರ ಅಳಲು ಆಲಿಸುತ್ತಿದ್ದು, ತುರ್ತು ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಳಗಾವಿ: ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ ಇದುವರೆಗೆ 34 ಜನರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ 48 ಗಂಟೆಗಳಲ್ಲಿ ಐದು ಲಕ್ಷ ರೂ.ಪರಿಹಾರದ ಚೆಕ್ ನೀಡಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದರು. ರಾಜ್ಯದಲ್ಲಿ ಭಾನುವಾರ ಆರೇಂಜ್ ಅಲರ್ಟ್ ಘೋಷಿಸಲಾ ಗಿತ್ತು. ಸೋಮವಾರ ಹಳದಿ ಅಲರ್ಟ್ ಇರಲಿದ್ದು, ರಾಜ್ಯದ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದರು. ಪರಿಹಾರ ಕೇಂದ್ರ ಆರಂಭಿಸಿ ಸಂತ್ರಸ್ತ ಜನರಿಗೆ ಊಟ, ವಸತಿ ಮತ್ತು ಬಟ್ಟೆ ಒದಗಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಜಾನುವಾರುಗಳಿಗೂ ಆಶ್ರಯ ಒದಗಿಸಿದ್ದು, ಮೇವು ವಿತರಿಸಲಾಗುತ್ತಿದೆ ಎಂದರು.
Related Articles
Advertisement
4.15 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಈಗಿನ ಪ್ರಾಥಮಿಕ ಸಮೀಕ್ಷೆ ಪ್ರಕಾರ ಪ್ರವಾಹ ಪೀಡಿತ ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಲ್ಲಿ 4.15 ಲಕ್ಷ ಹೆಕ್ಟೇರ್ ಕೃಷಿ-ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 136 ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ-ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳು ಪ್ರವಾಹ-ಭೂಕುಸಿತದಿಂದ ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ಶಾಲೆಗಳು, ಪೈಪ್‌ಲೈನ್ ವಿದ್ಯುತ್ ಕಂಬಗಳು ಸೇರಿ ಮೂಲ ಸೌಕರ್ಯಗಳ ಹಾನಿಯ ಸಮೀಕ್ಷೆ ಪ್ರಗತಿಯಲ್ಲಿದೆ ಎಂದರು.
ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ, ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮ ನಹಳ್ಳಿ, ಪೊಲೀಸ್ ಆಯುಕ್ತ ಬಿ.ಎನ್.ಲೋಕೇಶ್ ಕುಮಾರ್, ಐಜಿಪಿ ಎಚ್.ಜಿ. ರಾಘವೇಂದ್ರ ಸುಹಾಸ್, ಜಿಪಂ ಸಿಇಒ ಡಾ|ರಾಜೇಂದ್ರ ಕೆ.ವಿ.ಉಪಸ್ಥಿತರಿದ್ದರು.
10 ಸಾವಿರ ಕೋಟಿ ರೂ. ಹಾನಿ: ರಾಜ್ಯದಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹದಿಂದ ಸುಮಾರು 10 ಸಾವಿರ ಕೋಟಿ ರೂ. ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಪ್ರವಾಹಪೀಡಿತ ಜಿಲ್ಲೆಗಳಲ್ಲಿ 4.81 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗಾಗಿ ಒಟ್ಟು 19 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಕೊಡಗು ಜಿಲ್ಲೆಗೆ ಇನ್ನೂ ಎರಡು ಹೆಲಿಕಾಪ್ಟರ್ ಅಗತ್ಯವಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ತಿಳಿಸಿದರು.