Advertisement
ಗುಜರಾತ್ ಚುನಾವಣೆಯಲ್ಲಿ ತೆರೆ ಮರೆಯಲ್ಲಿ ರಾಹುಲ್ ಗಾಂಧಿ ತಂಡ ಮಹತ್ವದ ಕಾರ್ಯ ನಿರ್ವಹಿಸಿದೆ. ಆದರೆ, ಮುಂಚೂಣಿಯಲ್ಲಿ ಪ್ರಮುಖವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ತಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಅವರ ನೇತೃತ್ವದಲ್ಲಿಯೇ ಚುನಾವಣಾ ತಂತ್ರಗಾರಿಕೆಯ ತಂಡ ರಚಿಸಿ ಅವರೊಂದಿಗೆ ನಾಲ್ವರು ಯುವಕರನ್ನು ನೇಮಿಸಿ ವಿಭಾಗವಾರು ಜವಾಬ್ದಾರಿ ನೀಡಿದ್ದರು.
Related Articles
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಡೆಯುತ್ತಿರುವ ಮೊದಲ ವಿಧಾನ ಸಭೆ ಚುನಾವಣೆ ಕರ್ನಾಟಕ. ಹೀಗಾಗಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಗಾಂಧಿ ರಾಜ್ಯದ ಚುನಾವಣಾ ತಂತ್ರಗಾರಿಕೆಗೆ ಹೊಸ ತಂಡ ರಚಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಒಂದಷ್ಟು ಹೊಸ ಮುಖಗಳನ್ನು ಹುಡುಕುತ್ತಿದ್ದಾರೆ. ಚುನಾವಣಾ ತಂತ್ರಗಾರಿಕೆ ಮತ್ತು ರಾಜಕೀಯ ನಾಯಕತ್ವದ ಬಗ್ಗೆ ತರಬೇತಿ ನೀಡುವ ಜವಾಹರಲಾಲ್ ನೆಹರು ಲೀಡರ್‌ಶಿಪ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಚುನಾವಣಾ ತಂತ್ರಗಾರಿಕೆ ಹೆಣೆಯುವ ಕುರಿತಂತೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದ ಸುಮಾರು ಎಂಟರಿಂದ ಹತ್ತು ಪರಿಣಿತರು ಜನವರಿ 15 ರ ನಂತರ ರಾಜಕ್ಕೆ ಆಗಮಿಸಿ, ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಲು ಬೇಕಾದ ರಣತಂತ್ರವನ್ನು ಸಿದ್ದಪಡಿಸಲು ಅಗತ್ಯ ಮಾಹಿತಿ ಸಂಗ್ರಹಿಸಿ, ಸಂದರ್ಭಕ್ಕನುಸಾರವಾಗಿ ಹಾಗೂ ಪ್ರಾದೇಶಿಕವಾಗಿ ಕಾಂಗ್ರೆಸ್‌ನ ರಣತಂತ್ರ ಹೇಗಿರಬೇಕೆನ್ನುವ ಕುರಿತು ಪಟ್ಟಿ ಸಿದ್ದಪಡಿಸುವ ಜವಾಬ್ದಾರಿ ಈ ತಂಡದ್ದು. ಗುಜರಾತ್, ಗೋವಾ, ಹಿಮಾಚಲ ಪ್ರದೇಶ ಚುನಾವಣೆಯಲ್ಲಿಯೂ ಈ ರೀತಿ ತೆರೆ ಮರೆಯಲ್ಲಿ ಚುನಾವಣೆಗೆ ತಂತ್ರಗಾರಿಕೆ ಮಾಡಲು ತಂಡ ರಚನೆ ಮಾಡಲಾಗಿತ್ತು. ಜನವರಿ ಎರಡನೇ ವಾರದಲ್ಲಿ ರಾಜ್ಯಕ್ಕೆ ಆಗಮಿಸುವ ಈ ತಂಡ ರಾಜ್ಯ ವಿಧಾನ ಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯದಲ್ಲಿಯೇ ವಾಸವಿದ್ದು, ರಣತಂತ್ರ ರೂಪಿಸಲಿದೆ.
Advertisement
ವಾಸ್ತವ ಸ್ಥಿತಿ ಅಧ್ಯಯನಕ್ಕೆ ತಂಡ:ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಅವರ ಅಧ್ಯಕ್ಷತೆಯಲ್ಲಿ ಎಐಸಿಸಿ ಸಂಶೋಧನಾ ತಂಡ ರಚನೆಯಾಗಿದ್ದು, ಈ ತಂಡ ಪ್ರತಿ ವಿಧಾನ ಸಭಾ ಕ್ಷೇತ್ರದ ವಾಸ್ತವ ಚಿತ್ರಣವನ್ನು ಅಧ್ಯಯನ ನಡೆಸಿ, ಕಳೆದ ನಾಲ್ಕೈದು ಚುನಾವಣೆಯಲ್ಲಿ ಆಯಾ ಕ್ಷೇತ್ರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಸದ್ಯದ ವಾತಾವರಣದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಅಲ್ಲದೇ ಪ್ರಮುಖವಾಗಿ ಕ್ಷೇತ್ರದ ಅಭಿವೃದ್ಧಿ, ಜಾತಿ ಲೆಕ್ಕಾಚಾರ, ಪ್ರಾದೇಶಿಕ ಮಹತ್ವ, ಕ್ಷೇತ್ರದಲ್ಲಿರುವ ಅಭ್ಯರ್ಥಿಯ ವರ್ಚಸ್ಸು ಮತ್ತು ಪ್ರತಿಪಕ್ಷಗಳ ಶಕ್ತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿ, ರಾಹುಲ್ ಗಾಂಧಿಗೆ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ ರಾಹುಲ್ ತಂಡ ರಾಜ್ಯದಲ್ಲಿ ಚುನಾವಣಾ ರಣತಂತ್ರ, ರಾಹುಲ್ ಗಾಂಧಿ ಪ್ರಚಾರದ ವಿಷಯ ಮತ್ತು ಸ್ಥಳಗಳ ಆಯ್ಕೆ ಮಾಡಲಿದ್ದಾರೆ. ಪ್ರಮುಖವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಶಕ್ತಿ ಇಲ್ಲದ ಪ್ರದೇಶಗಳಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಸಿದ್ದರಾಮಯ್ಯಗೆ ಆದ್ಯತೆ:
ರಾಜ್ಯ ಕಾಂಗ್ರೆಸ್‌ನಲ್ಲಿ ಸ್ಟಾರ್ ಪಟ್ಟ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ರ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್‌ನ ಪ್ರಮುಖ ಆಕರ್ಷಣೆ. ರಾಹುಲ್ ಗಾಂಧಿಯ ತಂಡ ರಾಜ್ಯಕ್ಕೆ ಆಗಮಿಸಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮುಂದಿಟ್ಟುಕೊಂಡು ಹೋಗಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯ ಕಾರ್ಯವೈಖರಿ ಮತ್ತು ರಾಜಕೀಯ ನಡೆಯ ಬಗ್ಗೆ ರಾಹುಲ್ ಗಾಂಧಿಗೆ ಸಕಾರಾತ್ಮಕ ವರದಿ ಸಲ್ಲಿಕೆಯಾಗಿದ್ದು, ಸಿದ್ದರಾಮಯ್ಯ ಪ್ರಮುಖ ಆಕರ್ಷಣೆಯಾಗಿಟ್ಟುಕೊಂಡು ಚುನಾವಣೆ ಎದುರಿಸಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಯುವ ಮುಖಂಡರ ಪಡೆ:
ರಾಹುಲ್ ಗಾಂಧಿಯೊಂದಿಗೆ ಸದಾ ಜೊತೆಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ, ಕೇಂದ್ರದ ಮಾಜಿ ಸಚಿವ ಅಜೇಯ್ ಮಾಕೇನ್, ಮಹಾರಾಷ್ಟ್ರದ ಸಂಸದ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಜೀವ್ ಸತಾವ್, ಪ್ರಣವ್ ಝಾ, ವರ್ಷಾ ಗಾಯಕ್‌ವಾಡ್ ಅವರನ್ನು ರಾಹುಲ್ ಗಾಂಧಿ ತಮ್ಮ ತಂಡದಲ್ಲಿ ಸೇರಿಸಿಕೊಂಡು ರಣತಂತ್ರ ಹೆಣೆಯಲು ಬಳಸಿಕೊಳ್ಳಲಿದ್ದಾರೆ. ಹಿರಿಯರಿಗೂ ಕೆಲಸ:
ರಾಹುಲ್ ಗಾಂಧಿ ಹೊಸ ಮಾದರಿಯ ಚುನಾವಣಾ ತಂತ್ರಗಳಿಗೆ ಆದ್ಯತೆ ನೀಡುವುದರ ಜೊತೆಗೆ ಪಕ್ಷದಲ್ಲಿ ವರ್ಚಸ್ಸಿರುವ ಹಾಗೂ ವಾಕ್‌ಚಾತುರ್ಯ ಹೊಂದಿರುವ ಹಿರಿಯ ನಾಯಕರನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ. ಕೇಂದ್ರದ ಮಾಜಿ ಸಚಿವರಾದ ಆನಂದ್ ಶರ್ಮಾ, ಕಪಿಲ್ ಸಿಬಲ್, ಪಿ. ಚಿದಂಬರಂ, ಗುಲಾಂ ನಬಿ ಆಝಾದ್, ಅವರನ್ನು ಸಾಂಪ್ರದಾಯಿಕ ಪ್ರಚಾರ ಮತ್ತು ಪತ್ರಿಕಾಗೋಷ್ಠಿಗಳಿಗೆ ಹೆಚ್ಚು ಬಳಸಿಕೊಳ್ಳಲು ರಾಹುಲ್ ಗಾಂಧಿ ಆಲೋಚಿಸಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಆದ್ಯತೆ:
ಮಾಜಿ ಸಂಸದೆ ಹಾಗೂ ಎಐಸಿಸಿ ಸೋಶಿಯಲ್ ಮಿಡಿಯಾ ಘಟಕದ ಅಧ್ಯಕ್ಷೆ ರಮ್ಯಾ ಅವರ ನೇತೃತ್ವದ ಸಾಮಾಜಿಕ ಜಾಲ ತಂಡವನ್ನು ಪ್ರಬಲವಾಗಿ ಬಳಸಿಕೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಈ ತಂಡದಲ್ಲಿ ಸ್ಯಾಮ್ ಪಿತ್ರೋಡಾ, ಶಶಿ ತರೂರ್, ಮಿಲಿಂದ್ ದಿವೋರಾ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲ ತಾಣ ನಿರ್ವಹಿಸಲು ಜಿಲ್ಲಾವಾರು ತರಬೇತಿಗಳನ್ನು ನಡೆಸಲಾಗುತ್ತಿದ್ದು, ಪ್ರತಿ ಭೂತ್ ಮಟ್ಟದಲ್ಲಿಯೂ ಡಿಜಿಟಲ್ ಮ್ಯಾನ್ ನಿಯೋಜನೆ ಮಾಡಿ, ಪ್ರತಿಯೊಂದು ಬೆಳವಣಿಗೆಯನ್ನೂ ಸಾಮಾಜಿಕ ಜಾಲ ತಾಣದ ಮೂಲಕ ಭೂತ್ ಮಟ್ಟದ ಕಾರ್ಯಕರ್ತರಿಗೆ ತಲುಪಿಸಲು ಜಾಲ ರಚಿಸಲಾಗಿದ್ದು, ಚುನಾವಣೆ ಮುಗಿಯುವವರೆಗೂ ಈ ತಂಡವನ್ನು ಸಕ್ರೀಯವಾಗಿ ಬಳಸಿಕೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಪ್ರಣಾಳಿಕೆಗೂ ಆದ್ಯತೆ:
ಐದು ವರ್ಷ ಅಧಿಕಾರದಲ್ಲಿ ತಾವು ನೀಡಿದ ಬಹುತೇಕ ಭರವಸೆ ಈಡೇರಿಸಿದ ಸಂತೃಪ್ತ ಭಾವದಲ್ಲಿರುವ ಆಡಳಿತ ಪಕ್ಷ 2018 ರ ಚುನಾವಣೆಗೂ ಉತ್ತಮ ಪ್ರಣಾಳಿಕೆ ರಚಿಸಲು ಹೆಚ್ಚಿನ ಆದ್ಯತೆ ನೀಡಿದೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯಿಲಿ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿ ರಚನೆ ಮಾಡಿದ್ದು, ಸಮಿತಿ ಪ್ರತಿ ಜಿಲ್ಲೆಯಿಂದಲೂ ಪ್ರಮುಖ ಸಮಸ್ಯೆಗಳು ಹಾಗೂ ಈಡೇರಿಸಲು ಸಾಧ್ಯವಿರುವ ವಿಷಯಗಳ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದೆ. ಈಡೇರಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಚುನಾವಣೆ ಗೆಲ್ಲಲು ಪ್ರಣಾಳಿಕೆಯನ್ನೂ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಕೈ ಪಡೆ ನಿರ್ಧರಿಸಿದೆ. ಇದೆಲ್ಲದರ ಜೊತೆಗೆ ಚುನಾವಣೆ ತಂತ್ರ ಕುರಿತಂತೆ ರಾಜ್ಯದ ಸಮನ್ವಯ ಸಮಿತಿಯ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಸಲಹೆಗಳನ್ನೂ ರಾಹುಲ್ ಪಡೆಯಲಿದ್ದಾರೆ.