ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ದೊಡ್ಡಬಳ್ಳಾಪುರದ ಮೂಲಕ ಹೋಗುವ ಕಾರ್ಯಕ್ರಮ ನಿಮಿತ್ತ ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಕನಿಷ್ಠ 5 ನಿಮಿಷ ಭಾಷಣವನ್ನಾದರೂ ಮಾಡಿ ಕಾರ್ಯಕರ್ತರಿಗೆ ಹುರುಪು ನೀಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿ, ಮಧ್ಯಾಹ್ನದಿಂದ ಕಾದು ನಿಂತಿದ್ದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಅವರಿಂದ ಯುಗಾದಿ ಹಬ್ಬದ ಶುಭಾಶಯ ಕೇಳಿದಷ್ಟೇ ಹೊರತು ಮತ್ಯಾವ ಮಾತು ಕೇಳುವ ಭಾಗ್ಯ ದೊರೆಯಲಿಲ್ಲ.
ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾಲಾರ್ಪಣೆ ಮಾಡುವ ಹಾಗೂ ಕಾರ್ಯಕರ್ತರನ್ನು ಕುರಿತು ಐದು ನಿಮಿಷ ಮಾತನಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಇದಕ್ಕಾಗಿ ಬೃಹತ್ ವೇದಿಕೆ, ಸುಮಾರು ಐವತ್ತು ಅಡಿಗ ಳಷ್ಟು ಉದ್ದದ ಬೃಹತ್ ಹೂವಿನ ಹಾರ, ಈ ಹೂವಿನ ಹಾರ ಹಾಕಲು ಕ್ರೈನ್ ಇದೆಲ್ಲವನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು. ಆದರೆ, ಮಧ್ಯಾಹ್ನ 1.30ಕ್ಕೆ ಬರಬೇಕಿದ್ದ ರಾಹುಲ್ ಗಾಂಧಿ ಅವರು ಸಂಜೆ 4.30ರ ವೇಳೆ ನಗರಕ್ಕೆ ಬಂದರು. ಭದ್ರತೆ ನಡುವೆ ವೇದಿಕೆ ಮೇಲೇರಿ ಕೈ ಬೀಸುತ್ತ ಹ್ಯಾಪಿ ಯುಗಾದಿ ಎಂದು ಕಾರ್ಯಕರ್ತರತ್ತ ಕೈ ಬೀಸಿ, ನಂತರ ವೇದಿಕೆಯಿಂದ ಕೆಳಗಿಳಿದು ಹೊರಟೆ ಬಿಟ್ಟರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ನಮ್ಮ ರಾಷ್ಟ್ರೀಯ ನಾಯಕರು ಏನಾದರು ಮಾತನಾಡುತ್ತಾರೆ’ ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಏನು ಮಾತನಾಡದೆ ಕಾರುಗಳಲ್ಲಿ ಹೊರಟೆ ಹೋದರು.
ಕಾರ್ಯಕರ್ತರ ಅಸಮಾಧಾನ: ಬೆಳಗಿನಿಂದಲು ತಮ್ಮ ನಾಯಕರ ಮಾತುಗಳನ್ನು ಕೇಳಲು ಸಿದ್ಧತೆ ಮಾಡಿಕೊಂಡಿದ್ದ ಕಾದು ಕುಳಿತ್ತಿದ್ದ ಕಾರ್ಯಕರ್ತರು, ನಮ್ಮ ಪಕ್ಷದ ಮುಖಂಡರು, ಮಾತನಾಡದೇ ಮೌನವಾಗಿಯೇ ಪಕ್ಷ ಕಟ್ಟುವ ಯೋಜನೆ ಹೊಂದಿರಬೇಕು. ಹೀಗಾದರೆ, ನಾವು ಪಕ್ಷದ ಸಮಾವೇಶಗಳಿಗೆ ಜನರನ್ನು ಕರೆತರುವುದಾದರು ಹೇಗೆ’ ಎಂದು ರಾಹುಲ್ ಗಾಂಧಿ ಸ್ವಾಗತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಕ್ಷದ ಮುಂಚೂಣಿ ಘಟಕ ಮುಖಂಡರು ತಮ್ಮ
ಅಸಮಾಧಾನ ತೋಡಿಕೊಂಡರು.
ಡಿಕೆ,ಡಿಕೆ…ಮೊಳಗಿದ ಘೋಷಣೆ: ರಾಹುಲ್ ಗಾಂಧಿ ಅವರಿಗೆ ಜೈಕಾರ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಪ್ರವಾಸಿ ಮಂದಿರದಲ್ಲಿನ ವೇದಿಕೆಯಿಂದ ಕೆಳಗಿಳಿದು ಕಾರಿನತ್ತ ಬರುತ್ತಿದ್ದಂತೆ ಡಿಕೆ, ಡಿಕೆ, ಡಿಕೆ…ಎನ್ನುವ ಘೋಷಣೆ ಕೂಗಲಾಯಿತು. ಆದರೆ, ಸಿದ್ದರಾಮಯ್ಯ ಪರ ಯಾರೊಬ್ಬರು ಘೋಷಣೆಗಳನ್ನು ಕೂಗಲಿಲ್ಲ. ಪ್ರವಾಸಿ ಮಂದಿರ ವೃತ್ತದ ವೇದಿಕೆಯಲ್ಲಿ ಶಾಸಕ
ಟಿ.ವೆಂಕಟರಮಣಯ್ಯ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನಲಪಾಡ್, ಶಾಸಕ ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಮುಖಂಡ ತಿ.ರಂಗರಾಜ್, ಕೆ.ಎಂ. ಕೃಷ್ಣಮೂರ್ತಿ, ರೇವತಿ ಅನಂತರಾಮ್, ಜವಾಜಿ ಸೀತಾರಾಂ, ಅಂಜನಮೂರ್ತಿ ಇದ್ದರು.