ಕೆ.ಆರ್.ಪುರ: ರಾಜ್ಯದಲ್ಲಿ ಹರಿದು ಹಂಚಿಹೋಗಿರುವ ರೆಡ್ಡಿ ಜನಾಂಗವವನ್ನು ಒಗ್ಗೂಡಿಸಬೇಕಾದ ಅವಶ್ಯವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಜ.29ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಅಖೀಲ ಕರ್ನಾಟಕ ರೆಡ್ಡಿ ಜನಾಂಗದ ಮಹಾ ಸಮಾವೇಶದ ಅಂಗವಾಗಿ ಎಎಸ್‌ಆರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ರೆಡ್ಡಿ ಜನಾಂಗದ ಸಂಖ್ಯೆ ಹೆಚ್ಚಾಗಿದರೂ, ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಜನಾಂಗಗಳಂತೆ ನಮ್ಮಲ್ಲೂ ಆರ್ಥಿಕವಾಗಿ ಹಿಂದುಳಿವರು ಸಾಕಷ್ಟೂ ಮಂದಿ ಇದ್ದಾರೆ. ಆದಕಾರಣ ಇತರರಂತೆ ರೆಡ್ಡಿ ಜನಾಂಗಕ್ಕೂ ಸವಲತ್ತು ಸಿಗಬೇಕು.
ಉತ್ತರ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಹಂಚಿಹೋಗಿರುವ ರೆಡ್ಡಿ ಜನಾಂಗ ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಸವಲತ್ತುಗಳನ್ನು ದೊರಕಿಸಿಕೊಡುವಂತೆ ಸರ್ಕಾರಗಳ ಗಮನ ಸೆಳೆಯಲು ಈ ಮಹಾ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು. ಯಾವುದೇ ರಾಜಕೀಯ ಬೇಡಿಕೆಯಿಲ್ಲದ ಸಭೆ ಇದಾಗಿದೆ. ಸಾಮಾಜಿಕವಾಗಿ ಸಿಗಬೇಕಾದ ಸ್ಥಾನ ಮಾನಗಳು ನಮ್ಮ ಜನಾಂಗಕ್ಕೂ ಲಭ್ಯವಾಗಬೇಕು ಎನ್ನುವುದು ನಮ್ಮ ಉದ್ದೇಶವೆಂದರು.
ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಾವೇಶ ಆಯೋಜಿಸಲಾಗಿದೆ. ಬೇರೆ ಜನಾಂಗಗಳು ಒಗ್ಗೂಡುತ್ತಿದ್ದು, ನಮ್ಮ ಸಮುದಯ ಸಹ ಒಗ್ಗೂಡಬೇಕಾದ ಅವಶ್ಯವಿದೆ ಎಂದರು. ಈ ಸಂದರ್ಭಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಮುಖಂಡರಾದ ಗೀತಾ ವಿವೇಕಾನಂದಬಾಬು, ಕೋದಂಡ ರೆಡ್ಡಿ, ಗಣೇಶ್ ರೆಡ್ಡಿ, ನವೀನ್ ರೆಡ್ಡಿ, ಜಗದೀಶ್ ರೆಡ್ಡಿ, ಪ್ರಕಾಶ್ ರೆಡ್ಡಿ, ಕಿರಣ್ ರೆಡ್ಡಿ ಇತರರಿದ್ದರು.