Advertisement

ಖರೀದಿಗೆ ಸ್ಪಷ್ಟ ನೀತಿ ಬೇಕು 

12:30 AM Feb 15, 2019 | |

ಕಳೆದೊಂದು ವರ್ಷದಿಂದ ಭಾರೀ ಗದ್ದಲ ಮಾಡುತ್ತಿರುವ ರಫೇಲ್‌ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಮಹಾಲೇಖಪಾಲರ ವರದಿ ವ್ಯವಹಾರವನ್ನು ಸಮರ್ಥಿಸುತ್ತಿರುವ ಸರಕಾರ ಮತ್ತು ವಿರೋಧಿಸುತ್ತಿರುವ ವಿಪಕ್ಷಗಳಿಗೆ ಕಚ್ಚಾಟವನ್ನು ಮುಂದುವರಿಸಲು ಇನ್ನಷ್ಟು ವಿಷಯಗಳನ್ನು ನೀಡಿದೆ. ವರದಿಯಲ್ಲಿ ಇತ್ತಂಡಗಳಿಗೆ ಅನುಕೂಲ ಕರವಾದ ಅಂಶಗಳಿದ್ದರೂ ಇಬ್ಬರೂ ತಮಗೆ ಬೇಕಾದ ಅಂಶಗಳನ್ನು ಮಾತ್ರ ಎತ್ತಿಕೊಂಡು ವಾದಿಸುತ್ತಿದ್ದಾರೆ. ಸಮಸ್ಯೆಯ ಮೂಲ ಇರುವುದೇ ಇಲ್ಲಿ. ಯಾರೂ ಒಟ್ಟಾರೆ ವ್ಯವಹಾರದ ಸಮಗ್ರ ಅಂಶಗಳ ಬಗ್ಗೆ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ವಿಪಕ್ಷದಷ್ಟೇ ಸರಕಾರವೂ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುತ್ತದೆ. ವರದಿ ಮಂಡನೆಯಾದ ಬಳಿಕವೂ ಹಲವು ಪ್ರಶ್ನೆಗಳು ಬಾಕಿ ಉಳಿದಿದ್ದು ಅವುಗಳಿಗೆ ಉತ್ತರಿಸಬೇಕಾದ ಹೊಣೆಯಿಂದ ಸರಕಾರ ಜಾರಿಕೊಳ್ಳುವುದು ಸರಿಯಲ್ಲ. 

Advertisement

ಹಾಗೇ ಹೇಳುವುದಾದರೆ ಸಿಎಜಿ ವರದಿಯಲ್ಲಿ ಒಟ್ಟು 11 ರಕ್ಷಣಾ ಖರೀದಿಯ ಬಗ್ಗೆ ಮಾಹಿತಿಯಿದೆ. ಆದರೆ ಎಲ್ಲರೂ ಮಾತನಾಡುತ್ತಿರುವುದು ರಫೇಲ್‌ ಬಗ್ಗೆ ಮಾತ್ರ. ಈ ಅಂಶವೇ ಎಲ್ಲರಿಗೂ ರಾಷ್ಟ್ರೀಯ ಭದ್ರತೆ ಅಥವಾ ಸೇನೆಯ ಸಾಮರ್ಥ್ಯವರ್ಧನೆ ಬಗ್ಗೆ ಇರುವ ಕಾಳಜಿಗಿಂತ ಹೆಚ್ಚಾಗಿ ವಿವಾದಗಳನ್ನು ಹುಡುಕುವುದರಲ್ಲಿ ಇದೆ ಎನ್ನುವುದಕ್ಕೆ ಸಾಕ್ಷಿ. 2007ರಲ್ಲಿ ಯುಪಿಎ ಸರಕಾರ ಮಾಡಿರುವ ಒಪ್ಪಂದಕ್ಕಿಂತ 2016ರಲ್ಲಿ ಎನ್‌ಡಿಎ ಸರಕಾರ ಮಾಡಿದ ರಫೇಲ್‌ ಒಪ್ಪಂದ ಶೇ. 2.86 ಅಗ್ಗವಾಗಿದೆ ಎಂದು ಹೇಳಿರುವ ಸಿಎಜಿ ಇದೇ ವೇಳೆ ಫ್ರಾನ್ಸ್‌ ಸರಕಾರದ ಖಾತರಿ ಪಡೆಯದೆ ಲೆಟರ್‌ ಆಫ್ ಕಂಫ‌ರ್ಟ್‌ಗೆ ತೃಪ್ತಿ ಪಟ್ಟುಕೊಂಡಿರುವುದನ್ನು ಆಕ್ಷೇಪಿಸಿದೆ. ಈ ಮಾದರಿಯ ಹಲವು ವಿಚಾರಗಳನ್ನು ಸಿಎಜಿ ಉಲ್ಲೇಖೀಸಿದ್ದು, ಮೇಲ್ನೋಟಕ್ಕೆ ವರದಿ ನಿಷ್ಪಕ್ಷಪಾತವಾಗಿರುವಂತೆ ಕಾಣಿಸುತ್ತಿದೆ. ಯುಪಿಎ 126 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲುದ್ದೇಶಿಸಿತ್ತು. ಆದರೆ ಫ್ರೆಂಚ್‌ನ ಡಸಾಲ್ಟ್ ಏವಿಯೇಶನ್‌ ಕಂಪೆನಿ ರಫೇಲ್‌ ಬಿಡಿಭಾಗಗಳನ್ನು ಮತ್ತು ತಂತ್ರಜ್ಞಾನವನ್ನು ಪೂರೈಸಿ ಅದನ್ನು ಇಲ್ಲಿ ಜೋಡಿಸಿಕೊಳ್ಳಬೇಕಿತ್ತು. ಆದರೆ ಎನ್‌ಡಿಎ 36 ಹಾರಾಟಕ್ಕೆ ಸಿದ್ಧವಾದ ರಫೇಲ್‌ ಅನ್ನು ಖರೀದಿಸುವ ಒಪ್ಪಂದವನ್ನು ಅಂತಿಮಗೊಳಿಸಿತ್ತು. ಅದೇ ರೀತಿ ಪೂರೈಕೆ ಅವಧಿಯಲ್ಲೂ ವ್ಯತ್ಯಾಸವಿದೆ. ಈ ಎಲ್ಲ ಅಂಶಗಳತ್ತ ಮಹಾಲೇಖಪಾಲರು ಗಮನ ಹರಿಸಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ ರಫೇಲ್‌ನಲ್ಲಿ ಎನ್‌ಡಿಎ ಸರಕಾರ ಹಿಂದಿನ ಯುಪಿಎ ಸರಕಾರಕ್ಕಿಂತ ಉತ್ತಮ ಡೀಲ್‌ ಮಾಡಿಲ್ಲ. ಮೂಲ ವಿಮಾನದ ಬೆಲೆ, ಪೂರೈಕೆ ಅವಧಿ ಇತ್ಯಾದಿ ಅಂಶಗಳೆಲ್ಲ ಹಿಂದಿನ ಡೀಲ್‌ನಲ್ಲಿರುವಂತೆಯೇ ಇದೆ. ಹೀಗಿರುವಾಗ ಹಿಂದಿನ ಒಪ್ಪಂದವನ್ನು ರದ್ದುಗೊಳಿಸಿ ಹೊಸ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆಗೆ ಉತ್ತರಿಸ ಬೇಕಾದ ಹೊಣೆ ಸರಕಾರದ್ದು. ಪ್ರತಿಪಕ್ಷಗಳು ಎತ್ತಿರುವ ಈ ಮಾದರಿಯ ಹಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫ‌ಲವಾದದ್ದೇ ಈ ವಿವಾದ ಇಷ್ಟು ಬೆಳೆಯಲು ಕಾರಣವಾಯಿತು. ಆರಂಭದಲ್ಲೇ ಸಂಶಯಗಳನ್ನು ನಿವಾರಿಸಿ ದ್ದರೆ ಇಂದು ತಿಣುಕಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. 

ರಫೇಲ್‌ ಎಂದಲ್ಲ ಇತ್ತೀಚೆಗಿನ ವರ್ಷಗಳಲ್ಲಿ ಬಹುತೇಕ ರಕ್ಷಣಾ ಖರೀದಿ ವ್ಯವಹಾರಗಳು ವಿವಾದಕ್ಕೀಡಾಗುತ್ತಿರುವುದು ಮಾತ್ರ ದೇಶದ ದುರದೃಷ್ಟ. ಪ್ರತಿಯೊಂದು ಖರೀದಿಯೂ ಅಂತಿಮಗೊಳ್ಳಲು ವರ್ಷಾನುಗಟ್ಟಲೆ ತೆಗೆದು ಕೊಳ್ಳುತ್ತಿರುವುದು ನೇರವಾಗಿ ಸೇನೆಯ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ರಫೇಲ್‌ ಅನ್ನೇ ತೆಗೆದುಕೊಂಡರೂ ಇದರ ಪ್ರಕ್ರಿಯೆ ಶುರುವಾಗಿದ್ದು 2007ರಲ್ಲಿ. ಇದೀಗ 12 ವರ್ಷವಾದರೂ ವ್ಯವಹಾರವೇ ಅಂತಿಮಗೊಂಡಿಲ್ಲ. ಒಂದೆಡೆ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಇರುವ ಒಂದಷ್ಟು ವಿಮಾನಗಳು ಹಳೆಯ ದಾಗಿವೆ. ತುರ್ತಾಗಿ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ವರ್ಷಗಳಿಂದ ಒತ್ತಾಯಿ ಸಲಾಗುತ್ತಿದೆ. ಇನ್ನೊಂದೆಡೆ ಖರೀದಿ ಒಪ್ಪಂದಗಳೆಲ್ಲ ವಿವಾದ ಕ್ಕೊಳಗಾಗಿ ಅನಗತ್ಯ ವಿಳಂಬವಾಗುತ್ತಿದೆ. ಪ್ರತಿ ಸಲ ಸರಕಾರ ಬದಲಾ ದಾಗ ಹೊಸ ಹೊಸ ಒಪ್ಪಂದಗಳು ಏರ್ಪಡುವುದು ಕೂಡಾ ರಕ್ಷಣಾ ಖರೀದಿ ಯಲ್ಲಾಗುತ್ತಿರುವ ಹಿನ್ನಡೆಗೆ ಕಾರಣ. ದೇಶದ ಭದ್ರತೆಯಂಥ ವಿಚಾರದಲ್ಲೂ ನಮ್ಮ ರಾಜಕೀಯ ಪಕ್ಷಗಳಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಸ್ಪಷ್ಟವಾದ ರಕ್ಷಣಾ ಖರೀದಿ ನೀತಿ ಇಲ್ಲದಿರುವುದೂ ಆಗಾಗ ವಿವಾದಗಳು ಭುಗಿಲೇಳಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರವಾದ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next