ಕೆ.ಆರ್.ನಗರ: ಸಾರ್ವಜನಿಕರನ್ನು ಅಧಿಕಾರಿಗಳು ಅಲೆದಾಡಿಸಿದ ಬಗ್ಗೆ ದೂರುಗಳು ಕೇಳಿ ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.
ತಾಲೂಕಿನ ಮಾವತ್ತೂರು ಗ್ರಾಮ ಪಂಚಾಯ್ತಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯ್ತಿಗೆ ಬರುವ ಜನತೆಯೊಂದಿಗೆ ಆಡಳಿತ ಮಂಡಳಿ ಮತ್ತು ನೌಕರರು ಸೌಜನ್ಯದಿಂದ ವರ್ತಿಸಬೇಕು. ಕೆಲಸ ಕಾರ್ಯಗಳಿಗೆ ಪದೇ ಪದೆ ಕಚೇರಿಗೆ ಅಲೆಸಿದರೆ ಸಹಿಸುವುದಿಲ್ಲ ಎಂದರು.
ರಾಜಕೀಯ ವ್ಯವಸ್ಥೆ ಹಾಳಾಗಲು ಮತದಾರರೇ ಕಾರಣಕರ್ತರಾಗಿದ್ದು, ಇಂತಹ ವ್ಯವಸ್ಥೆ ದೂರಾಗಬೇಕಾದರೆ ಮತದಾರರು ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಯೋಚಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯ್ತಿ ಸದಸ್ಯರು ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಜಾತಿ ಮತ್ತು ಪಕ್ಷ ರಾಜಕಾರಣ ಮಾಡಬಾರದು. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸವಲತ್ತುಗಳನ್ನು ತಲುಪಿಸಬೇಕು ಎಂದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸಕರ ಅನುದಾನಕ್ಕಾಗಿ ಕಾಯುವ ಬದಲು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಹರಿಚಿದಂಬರ, ಸದಸ್ಯ ಜಗದೀಶ್, ಪಿಡಿಒ ಭವ್ಯ ಮಾತನಾಡಿದರು. ತಹಶೀಲ್ದಾರ್ ಎಂ.ಮಂಜುಳಾ, ಉಪಾಧ್ಯಕ್ಷೆ ಸಿದ್ದಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್, ಇಒ ಎಂ.ಎಸ್.ರಮೇಶ್, ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಸೌಮ್ಯಾ, ಉಮೇಶ್, ರೇಖಾರಂಗೇಗೌಡ, ವಿಶಾಲಾಕ್ಷಿ, ಚಂದನ್‌ರಾಜೇಅರಸ್, ನೇತ್ರಾವತಿ, ರೇವಣ್ಣ, ಮಂಜುಳಾ, ಸಂದೀಪ್, ಜಾನಕಮ್ಮ ಇತರರಿದ್ದರು.