ಕಲಬುರಗಿ: ತಾಲೂಕಿನ ಹಾಗರಗಾ ಗ್ರಾಪಂನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಮ್ಯುಟೇಶನ್ ಮಾಡುವ ಮೂಲಕ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಪ್ರಜಾ ಪರಿವರ್ತನ ವೇದಿಕೆ ವತಿಯಿಂದ ಶುಕ್ರವಾರ ನಗರದ ಜಿಪಂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಗ್ರಾಪಂ ವ್ಯಾಪ್ತಿಯ ಸರ್ವೇ ನಂ. 281/2/3ರ ಆರು ಎಕರೆ ಖಾಸಗಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ 158 ನಿವೇಶನಗಳನ್ನು ಮಾಡಲಾಗಿದೆ. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಜಮೀನು ಮಾಲೀಕನಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಲಂಚ ಪಡೆದು ಮ್ಯುಟೇಶನ್ ಮಾಡಿಸಿ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮ್ಯುಟೇಶನ್ ಹಾಗೂ ಕಟ್ಟಡ ಪರವಾನಗಿ ನೀಡಲು ಪ್ರತಿ 30ಗಿ40 ನಿವೇಶನಕ್ಕೆ 2,272 ರೂ. ತೆರಿಗೆಯನ್ನು ಪಂಚಾಯಿತಿಯಲ್ಲಿ ಕಟ್ಟಬೇಕು. ಆದರೆ, ಇಲ್ಲೂ ಪ್ರತಿ ನಿವೇಶನಕ್ಕೆ ಕೇವಲ 405 ರೂ. ಮಾತ್ರ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಅಲ್ಲದೇ, ಈ ಹಣವನ್ನು ಪಂಚಾಯಿತಿಯ ಬ್ಯಾಂಕ್ ಖಾತೆಗೆ ಹಾಕದೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಮೂವರು ದುರುಪಯೋಗ ಪಡಿಸಿಕೊಂಡಿದ್ದು, ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂದು ದೂರಿದರು.
ಆರೋಪಿಗಳನ್ನು ತಕ್ಷಣವೇ ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗೆ ಮನವಿ ಮಾಡಿದರು.
ಪ್ರಕಾಶ ಹಾಗರಗಿ, ಜಿಲ್ಲಾಧ್ಯಕ್ಷ ರಮೇಶ ಬೆಳಕೋಟಿ, ವಿದ್ಯಾಧರ ಮಾಳಗೆ ಅರುಣಕುಮಾರ ಹುಗ್ಗಿ, ಶಿವಕುಮಾರ ಕೋರಿ, ವಿಕಾಸ ಹಾಗರಗಿ, ಉಮೇಶ ಯಕ್ಕಂಚಿ, ಪ್ರಶಾಂತ ಮದೀನಕರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.