Advertisement

ಬಾರ್‌ ಬಂದ್‌ ಮಾಡುವ ವರೆಗೂ ಪ್ರತಿಭಟನೆ ನಿಲ್ಲದು

07:50 AM Aug 18, 2017 | |

ಮರವಂತೆ (ಉಪ್ಪುಂದ): ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌  ವ್ಯಾಪ್ತಿಯ ನಾಗೂರಿನ ಹೆದ್ದಾರಿ ಬದಿಯಲ್ಲಿದ್ದ ಬಾರ್‌ ಎಂಡ್‌ ರೆಸ್ಟೋರಂಟ್ನ್ನು ನಾಗೂರು – ಕೊಡೇರಿ ರಸ್ತೆಯ ನಿವೇಶನಕ್ಕೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ  ಗಂಗೆಬೈಲು,
ಕೊಡೇರಿ, ಆದ್ರಗೋಳಿ, ನಾಗೂರು ಪರಿಸರದ ಸ್ಥಳೀಯರ ಪ್ರತಿಭಟನೆ ಗುರುವಾರವು ಮುಂದುವರಿಯಿತು.

Advertisement

ಮಹಿಳೆಯರ ಸುರಕ್ಷತೆಗೆ ಆತಂಕ
ಈ ಸ್ಥಳದಲ್ಲಿ ಬಾರ್‌ ತೆರೆಯಲು ಅವಕಾಶ ನೀಡಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಮಸ್ಯೆ ಗಳಾಗುತ್ತವೆ. ಪರಿಸರದಲ್ಲಿ ಇರುವ ದೇವಸ್ಥಾನ, ಮನೆಗಳ ಮೇಲೆ ಇದರಿಂದ ದುಷ್ಪರಿಣಾಮ ಬೀರುತ್ತದೆ, ಅಲ್ಲದೇ ರಸ್ತೆಯಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆಗೆ ಆತಂಕ ಎದುರಾಗಿದೆ ಎಂದು ಮಹಿಳೆಯರು ಅಧಿಕಾರಿಗಳಲ್ಲಿ ಅಳಲನ್ನು ತೋಡಿಕೊಂಡರು.

ಪ್ರತಿಭಟನೆ ನಿಲ್ಲದು
ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವ ಕಾರಣದಿಂದಾಗಿ ಈ ಹಿಂದೆ ಗ್ರಾಮಸ್ಥರು ಜಿಲ್ಲಾ ಅಬಕಾರಿ ಇಲಾಖೆಗಳ ಮುಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದ್ದರು. ಅಧಿಕಾರಿಗಳ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದರು ಸಹ ಬಾರ್‌ ತೆರೆಯಲು ಪರವಾನಿಗೆ ನೀಡುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿರುವ ನಾಗರಿಕರು ಬಾರ್‌ ಬಂದ್‌ ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ತಿಳಿಸಿದರು.

ಎಸಿ ಶಿಲ್ಪಾನಾಗ್‌ ಭೇಟಿ
ಬಾರ್‌ ಸ್ಥಳಾಂತರದಿಂದ ಸಾರ್ವಜನಿಕರಿಗೆ  ತೊಂದರೆಯಾಗುವುದನ್ನು ಮನಗಂಡ ಗ್ರಾಮಸ್ಥರು ಈ ಮೊದಲೇ ಬಾರ್‌ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದರು ಸಹ ಸಂಬಂಧಪಟ್ಟ ಇಲಾಖೆಯವರು ಪರವಾನಿಗೆ ನೀಡಿರುವುದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಕೊಡೇರಿ ರಸ್ತೆಯ ಹಾಡಿಸ್ಥಳ ಎಂಬಲ್ಲಿ ಸೇರಿ, ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ನೂರಾರು ಪುರುಷರು ಮತ್ತು ಮಹಿಳೆಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್‌ ಭೇಟಿ ನೀಡಿ ಬಾರ್‌ನ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಈ ಕುರಿತು ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next