ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಹಾಗೂ ಯಾದವ ಸಮಾಜದವರಿಗೆ ಗೋವರ್ಧನಗಿರಿಯಾಗಿರುವ ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಯಾದವ(ಗೊಲ್ಲ) ಜನಾಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಮಠಾಧೀಶರ ನೇತೃತ್ವದಲ್ಲಿಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ತೋಂಟದಾರ್ಯ ಮಠದ ಆವರಣದಿಂದ ಆರಂಭವಾದ ರ್ಯಾಲಿ ಹುಯಿಲಗೋಳ ನಾರಾಯಣ ರಾವ್, ಮಾರುಕಟ್ಟೆ ಪ್ರದೇಶ, ಮುಳಗುಂದ ನಾಕಾ ಮಾರ್ಗವಾಗಿ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿತು. ಈ ವೇಳೆ ಟ್ರಾಕ್ಟರ್‌ನಲ್ಲಿ ಕಪ್ಪತ್ತಗುಡ್ಡ ಭಾವಚಿತ್ರದ ಮೆರವಣಿಗೆ ನಡೆಸಿ, ಸಂರಕ್ಷಿತ ಆದೇಶ ಹಿಂಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.
ಉತ್ತರ ಕರ್ನಾಟಕದ ಹೃದಯಭಾಗದಲ್ಲಿರುವ ಕಪ್ಪತ್ತಗುಡ್ಡ ಯಾದವ(ಗೊಲ್ಲ) ಸಮಾಜದವರು ಗೋವರ್ಧನಗಿರಿ ಎಂದೇ ನಂಬಿದ್ದಾರೆ. ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಕಪ್ಪತ್ತಗುಡ್ಡದ ರಕ್ಷಣೆಗೆ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಾಪಸ್ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಿಸಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಕಪ್ಪತ್ತಗಿರಿಯ ಖಣಿಜ ಸಂಪತ್ತನ್ನು ಗುರಿಯಾಗಿಸಿಕೊಂಡ ದಕ್ಷಿಣ ಕೋರಿಯಾದ ಪೋಸ್ಕೋ ಕಂಪನಿ 65 ಸಾವಿರ ಕೋಟಿ ಬಂಡವಾಳ ಹಾಕಲು ಯೋಜನೆ ರೂಪಿಸಿತ್ತು. ತೋಂಟದ ಶ್ರೀಗಳ ನೇತೃತ್ವದ ಹೋರಾಟಕ್ಕೆ ಮಣಿದು ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಬಲೊªàಟಾ ಕಂಪನಿ ಖನಿಜಕ್ಕೆ ಕೈ ಹಾಕಲು ಹೊರಟಿದೆ. ಕಪ್ಪತ್ತಗುಡ್ಡ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಗಣಿಗಾರಿಕೆಗೆ ಅವಕಾಶ ಕೊಡಲು ಸಿದ್ಧವಿಲ್ಲ ಎಂದು ಒತ್ತಾಯಿಸಿದರು.
ಪರಿಸರ ಸಮತೋಲನ ಉಳಿಯಬೇಕಾದರೆ ಶೇ. 33ರಷ್ಟು ಅರಣ್ಯ ಬೇಕು. ಜಿಲ್ಲೆಯಲ್ಲಿ ಶೇ. 6ರಷ್ಟು ಅರಣ್ಯ ಮಾತ್ರ ಇದೆ. ದೆಹಲಿಯಲ್ಲಿ ಉಲ್ಬಣಗೊಂಡ ವಾಯುಮಾಲಿನ್ಯ ಸಮಸ್ಯೆಯನ್ನು ಗದಗನಲ್ಲಿ ಉಂಟು ಮಾಡಲು ಬಿಡುವುದುದಿಲ್ಲ. ಸರ್ಕಾರ ವಿಳಂಬ ನೀತಿ ಅನುಸರಿಸದೇ, ಗಣಿಗಾರಿಕೆಗೆ ಅವಕಾಶ ಕಲ್ಪಿಸದೇ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮನೋಜ್ ಜೈನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನರಗುಂದ ಪಂಚಗ್ರಹ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲಸಮುದ್ರಗಿರಿ ಓಕಾರೇಶ್ವರಮಠದ ಫಕ್ಕೀರೇಶ್ವರ ಸ್ವಾಮೀಜಿ ರ್ಯಾಲಿ ನೇತೃತ್ವ ವಹಿಸಿದ್ದರು.
ಜೈ ಭೀಮ ರಾಜ್ಯ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ಅಖುಲ ಕರ್ನಾಟಕ ಕಿಚ್ಚ ಸುದೀಪ ಅಭಿಮಾನಿ ಸಂಘದ ರವಿ ಅಣ್ಣಿಗೇರಿ, ಚನ್ನು ಹಿಡಿಮಠ, ಯಶ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಮಂಜುನಾಥ ದಾಮೋದರ, ಮುತ್ತು ಮುಶಿಗೇರಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.