Advertisement

ಸಾರಿಗೆ ನೌಕರರ ಪ್ರತಿಭಟನೆ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು

11:36 PM Dec 11, 2020 | mahesh |

ಸಾರಿಗೆ ನೌಕರರ ದಿಢೀರ್‌ ಮುಷ್ಕರ ಇಡೀ ದಿನ ರಾಜ್ಯದ ಸಂಚಾರ ವ್ಯವಸ್ಥೆಯನ್ನು ಏರುಪೇರು ಮಾಡಿದೆ. ಈ ಮಧ್ಯೆ ನೌಕರರ ಮನವೊಲಿಸುವಲ್ಲಿ ಸರ್ಕಾರ ವಿಫ‌ಲವಾದ ಹಿನ್ನೆಲೆಯಲ್ಲಿ ಇದು ಸತತ ಎರಡನೇ ದಿನವೂ ಮುಂದುವರಿಯುವ ಸ್ಪಷ್ಟ ಸೂಚನೆ ಗಳಿವೆ. ಪೊಲೀಸ್‌ ಇಲಾಖೆಯಂತೆ ಅಗತ್ಯ ಸೇವೆಗಳಲ್ಲಿ ಬರುವ ತಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎನ್ನುವ ಬೇಡಿಕೆ ನ್ಯಾಯ ಯುತ ವಾಗಿರಬಹುದು. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ಸೇವೆ ಸ್ಥಗಿತಗೊಳಿಸಿದ್ದರಿಂದ ಜನರಿಗೆ ಅದರಲ್ಲೂ ಶ್ರಮಿಕ ವರ್ಗಕ್ಕೆ ಇದರಿಂದ ಹೆಚ್ಚು ತೊಂದರೆ ಆಗಿದೆ.

Advertisement

ಮುಷ್ಕರ ನಿರತರು ಮುಂಚಿತವಾಗಿ ಈ ಬಗ್ಗೆ ಸೂಚನೆ ನೀಡಬಹುದಿತ್ತು. ಅಥವಾ ಸರ್ಕಾರವೇ ಹೋರಾಟದ ತೀವ್ರತೆ ಅರಿತು ಮಾತುಕತೆಗೆ ಕರೆದು, ಭರವಸೆ ನೀಡಬಹುದಿತ್ತು. ಅಷ್ಟಕ್ಕೂ ಹಿಂದಿನ ದಿನವೇ ಕಾಲ್ನಡಿಗೆ ಜಾಥಾ ಮೂಲಕ ಸಾರಿಗೆ ನೌಕರರು ಸುಳಿವು ನೀಡಿದ್ದರು. ಗುಪ್ತಚರ ಇಲಾಖೆ ಮೂಲಕವೂ ಮಾಹಿತಿ ಲಭ್ಯವಾಗಿರುತ್ತದೆ. ಆದರೂ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದಂತಿದೆ. ವಿಚಿತ್ರವೆಂದರೆ ಮುಷ್ಕರದಿಂದ ಅಂತರ ಕಾಯ್ದುಕೊಂಡ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ, ಹೋರಾಟ ಕೈಬಿಡಲು ಮನವಿ ಮಾಡಿತು.

ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಸಾರಿಗೆ ನೌಕರರ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ, ನಿಯಮದಲ್ಲಿ ಅವಕಾಶ ಇಲ್ಲದ ಈ ಆಸೆ ಚಿಗು ರೊಡೆದಿದ್ದು 2018ರ ವಿಧಾನಸಭಾ ಚುನಾವಣೆ ವೇಳೆ. ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇಂತಹದ್ದೊಂದು ಭರವಸೆ ನೀಡಿದ್ದರು. ನಂತರ ಈ ಹೋರಾಟ ಗಟ್ಟಿಗೊಳ್ಳಲು ಕಾರಣವಾಗಿದ್ದು ಸ್ವತಃ ಸಾರಿಗೆ ನಿಗಮಗಳ ಧೋರಣೆ ಎಂದರೆ ತಪ್ಪಾಗದು. ಮೊದಲಿನಿಂದಲೂ ಮೇಲಧಿ ಕಾರಿಗಳ ಕಿರುಕುಳ, ಟಾರ್ಗೆಟ್‌ ಪೂರೈಸುವ ಒತ್ತಡ, ಅಮಾನತು ಭಯದಲ್ಲೇ ಕೆಲಸ ಮಾಡುವ ಅನಿವಾರ್ಯ ಸ್ಥಿತಿ ಇದೆ. ಈ ಮಧ್ಯೆ ಕೊರೊನಾ ತಂದ ಅಭದ್ರತೆ, ಕೇಂದ್ರ ಸರ್ಕಾರವು ಪರ್ಮಿಟ್‌ ವಿಚಾರದಲ್ಲಿ ಕೈಗೊಳ್ಳುತ್ತಿರುವ ಉದಾರೀಕರಣ ನೀತಿಗಳು, ನಿಗಮಗಳಲ್ಲಿ ಖಾಸಗೀಕರಣದ ವಾಸನೆಯಂತಹ ಕ್ರಮಗಳು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ದನಿಯನ್ನು ಗಟ್ಟಿಗೊಳಿಸಿತು.

ಒಬ್ಬ ಸಾಮಾನ್ಯ ದ್ವಿತೀಯ ದರ್ಜೆ ಸಹಾಯಕನಿಗೆ ಹೋಲಿಸಿದರೆ ಚಾಲಕ ಕಂ ನಿರ್ವಾಹಕನ ಮೂಲವೇತನ ನಾಲ್ಕೈದು ಸಾವಿರ ರೂ. ಕಡಿಮೆ ಇರುತ್ತದೆ. ಸೇವಾ ಭದ್ರತೆಯೂ ಇರುವುದಿಲ್ಲ. ನಿವೃತ್ತಿಯಾದಾಗ ಅಂತಿಮ ಅಭ್ಯರ್ಥನ (ಫೈನಲ್‌ ಸೆಟಲ್‌ಮೆಂಟ್‌) ಕೂಡ ಸರಿಯಾಗಿ ಆಗುವುದಿಲ್ಲ. ಬ್ಯಾಂಕ್‌ಗಳಲ್ಲಿ ಈ ಸಾರಿಗೆ ಸಿಬ್ಬಂದಿಗೆ ವೈಯ  ಕ್ತಿಕ ಸಾಲ ಕೂಡ ಹುಟ್ಟದ ಸ್ಥಿತಿ ಇದೆ ಎಂಬುದು ಸಾರಿಗೆ ನೌಕರರ ಅಳಲು. ಹಾಗಂತ, ಸರ್ಕಾರಿ ನೌಕರರನ್ನಾಗಿ ಘೋಷಿಸುವುದು ಕೂಡ ಅಷ್ಟು ಸುಲಭವಿಲ್ಲ. ಸಾರಿಗೆ ನಿಗ ಮವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ನಿಯಮದಲ್ಲಿ ಇದಕ್ಕೆ ಅವ ಕಾಶವೂ ಇಲ್ಲ. ಒಂದು ವೇಳೆ ಹೋರಾಟಕ್ಕೆ ಮಣಿದು ತಿದ್ದುಪಡಿ ಮಾಡಿ ಅವಕಾಶ ನೀಡಿ ದರೆ, ಸಾರಿಗೆ ನೌಕರರ ವೇತನ ಪಾವತಿ ಹೊಣೆ ಸರ್ಕಾರ ಹೊರಬೇಕಾಗುತ್ತದೆ. ಅಲ್ಲದೆ, ಸಮಾನ ವೇತನ ಮತ್ತಿತರ ಸೌಲಭ್ಯಗಳಿಂದ ನೂರಾರು ಕೋಟಿ ರೂ. ಹೊರೆ ಆಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಕಷ್ಟ. ಅಷ್ಟೇ ಅಲ್ಲ, ಉಳಿದ ನಿಗಮ-ಮಂಡಳಿಗಳೂ ಇಂತಹದ್ದೇ ಬೇಡಿಕೆ ಇಡಬಹುದು. ಆಗ ಇಕ್ಕಟ್ಟಿಗೆ ಸಿಲುಕಲಿದೆ ಎಂಬುದು ಸರ್ಕಾರದ ವಾದ.

ಅದೇನೇ ಇರಲಿ, ಸರ್ಕಾರ-ಸಾರಿಗೆ ನೌಕರರ ನಡುವಿನ ಗುದ್ದಾಟದಲ್ಲಿ ಯಾವಾ ಗಲೂ ಗುರಿಯಾಗುವವರು ಸಾಮಾನ್ಯ ಜನ. ಇದನ್ನು ಗಮನದಲ್ಲಿ ಇಟ್ಟು ಕೊಂಡು ಸರ್ಕಾ ರವು ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ. ಸರ್ಕಾರಿ ನೌಕರ ರನ್ನಾಗಿ ಪರಿಗಣಿಸಬೇಕು. ಇದು ಅಸಾಧ್ಯ ವಾದರೆ, ನಿಯಮಗಳಲ್ಲಿ ಮತ್ತಷ್ಟು ನೌಕರರ ಸ್ನೇಹಿ ಅಂಶಗಳನ್ನು ಸೇರಿಸಿ, ಭರವಸೆ ಮೂಡಿಸುವ ಕೆಲಸ ಆಗಬೇಕು. ಕೊರೊನಾ ಮತ್ತು ಅದರಿಂದ ಜಾರಿಯಾದ ಸುದೀರ್ಘ‌ ಲಾಕ್‌ಡೌನ್‌ನಿಂದ ಈಗಷ್ಟೇ ನಿಗ ಮಗಳು ಚೇತರಿಕೆ ಕಾಣುತ್ತಿವೆ. ಈ ಮಧ್ಯೆ ಮುಷ್ಕರಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next