Advertisement

ಪ್ರಸ್ತಾವನೆ ಇನ್ನೂ ಪರಿಶೀಲನೆ ಹಂತದಲ್ಲಿ: ಖಾದರ್‌

08:50 AM Aug 14, 2017 | Team Udayavani |

ಮಂಗಳೂರು: ಸಮುದ್ರಕ್ಕೆ ಸೇರುವ 250 ಟಿಎಂಸಿ ಮಳೆ ನೀರಿನಲ್ಲಿ ಸ್ವಲ್ಪ ಪ್ರಮಾಣವನ್ನು ಸಂಗ್ರಹಿಸಿ ಬೆಂಗಳೂರಿಗೆ ಕುಡಿಯಲು ಸರಬರಾಜು ಮಾಡುವ ಪ್ರಸ್ತಾವನೆ ಇನ್ನೂ ಪರಿಶೀಲನೆ ಹಂತದಲ್ಲಿದೆ. ಸಾಧಕ- ಬಾಧಕಗಳ ಅಧ್ಯಯನದ ಬಳಿಕವಷ್ಟೇ ನಿರ್ಧಾರವಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನಸಾಮಾನ್ಯರಿಗೆ, ಪ್ರಕೃತಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನೂ ಸರಕಾರ ಅನುಷ್ಠಾನಗೊಳಿಸುವುದಿಲ್ಲ. ಸಾಧಕ-ಬಾಧಕಗಳ ಬಗ್ಗೆ ಕರಾವಳಿಯ ಜನರೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಿದೆ ಎಂದವರು ಹೇಳಿದರು.

ಉ.ಪ್ರ. ಮುಖ್ಯಮಂತ್ರಿ ರಾಜೀನಾಮೆ ಆಗ್ರಹ
ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಕೊರತೆಯಿಂದ 70ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿರುವುದು ದುಃಖದ ವಿಚಾರ. ಅಲ್ಲಿನ ಸರಕಾರ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ತತ್‌ಕ್ಷಣ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಆರೋಗ್ಯ ಸಚಿವರು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಚಿವ ಖಾದರ್‌ ಆಗ್ರಹಿಸಿದರು.

ಅನುದಾನ ರದ್ದತಿಯಲ್ಲಿ ಸರಕಾರದ ಪಾತ್ರವಿಲ್ಲ
ಕಲ್ಲಡ್ಕದ ಶಾಲೆಗೆ ಅನುದಾನ ರದ್ದತಿಯಲ್ಲಿ ಸರಕಾರದ ಪಾತ್ರವಿಲ್ಲ. ಧಾರ್ಮಿಕ ಪರಿಷತ್‌ ಮತ್ತು ದೇವಾಲಯ ಈ ಕ್ರಮವನ್ನು ಕೈಗೊಂಡಿದೆ. ಇದಕ್ಕೆ ಸರಕಾರದ, ಮುಖ್ಯಮಂತ್ರಿಯವರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದರು.

ಆಹಾರ ಇಲಾಖೆ ಈಗಾಗಲೇ ವಸತಿಯುತ ಉಚಿತ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಪ್ರತಿಯೋರ್ವ ವಿದ್ಯಾರ್ಥಿಗೆ ತಿಂಗಳಿಗೆ 15 ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದನ್ನು ಅರ್ಹ ಸಂಸ್ಥೆಗಳು ಪಡೆಯಲು ಅವಕಾಶವಿದೆ ಎಂದು ಹೇಳಿದರು.

Advertisement

ಇಂದಿರಾ ಕ್ಯಾಂಟಿನ್‌ ಬೆಂಗಳೂರಿನಲ್ಲಿ ಆ. 16ರಂದು ಉದ್ಘಾಟನೆಯಾಗಲಿದೆ. ಅಲ್ಲಿ ಇದರ ಯಶಸ್ಸು ಹಾಗೂ ಜನಸ್ಪಂದನೆ ನೋಡಿಕೊಂಡು ಇತರ ನಗರಗಳಿಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದವರು ತಿಳಿಸಿದರು. 

ಕಾವ್ಯಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಖಾದರ್‌ ಅವರು ಕಾವ್ಯಾ ಅವರಿಗೆ ನ್ಯಾಯ ಸಿಗಬೇಕು. ಪೊಲೀಸ್‌ ಇಲಾಖೆ ತ್ವರಿತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದರು.

ಹತ್ತು ಮಂದಿ ಅಮಿತ್‌ ಶಾ ಬಂದರೂ ಏನೂ ಆಗದು
ಕರ್ನಾಟಕಕ್ಕೆ ಹತ್ತು ಮಂದಿ ಅಮಿತ್‌ ಶಾ ಬಂದರೂ ಎನೂ ಆಗದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತಾರೆ ಎಂದು ಸಚಿವ ಯು.ಟಿ. ಖಾದರ್‌ ಅವರು
ಅಮಿತ್‌ ಶಾ ಅವರ ಕರ್ನಾಟಕ ಭೇಟಿಯ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next