ಬೆಂಗಳೂರು: ಪರಿಸರದ ಮೇಲಿನ ಹಾನಿ ಹಲವು ಅನಾಹುತಗಳಿಗೆ ಕಾರಣವಾಗಲಿದ್ದು, ಅವುಗಳನ್ನು ತಡೆಯಲು ಪರಿಸರಕ್ಕೆ ಪೂರಕವಾಗುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ವಿವಿಪುಂರನ ವಿವಿಎನ್ ಪಿಯು ಕಾಲೇಜು ಮಂಗಳವಾರ ಹಮ್ಮಿಕೊಂಡಿದ್ದ ಅಂತರ್ ಕಾಲೇಜು ವಾಣಿಜ್ಯ ಉತ್ಸವ “ಅಭಿನವ -2018′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಂಕುಲ ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಅಶ್ಯಕತೆ ಇದೆ ಎಂದು ತಿಳಿಸಿದರು.
ಪರಿಸರ ಮಾಲಿನ್ಯದಿಂದಾಗಿ ಪ್ರವಾಹದಂತಹ ಘಟನೆಗಳು ಮರುಕಳಿಸುತ್ತಿವೆ. ಈ ಬಗ್ಗೆ ಎಚ್ಚರಿಕೆವಹಿಸಬೇಕು. ಹಸಿರು ಪರಿಸರ ಉಳಿವಿಗಾಗಿ ನಾವು ಮತ್ತಷ್ಟು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭವಿಷ್ಯತ್ತಿನ ದೃಷ್ಟಿಯಿಂದ ಜೀವ ಜಗತ್ತಿಗೆ ಹಿತ ಎನಿಸುವ ಪರಿಕರಗಳನ್ನೇ ಬಳಕೆ ಮಾಡಲು ಪಣತೊಡುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಕೊಡಗು ಬೇಗ ಚೇತರಿಸಿಕೊಳ್ಳಲಿ: ಭೀಕರ ಪ್ರವಾಹದಿಂಗಾಗಿ ಕೊಡಗಿನ ಜನತೆ ಸಂಕಷ್ಟದಲ್ಲಿದ್ದಾರೆ. ಕೃಷಿ, ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೇಲೆ ಅಪಾರ ಹಾನಿಯುಂಟಾಗಿದೆ. ಈಗಾಗಲೇ, ಭಾರೀ ಪ್ರವಾಹದಿಂದಾಗಿ ಅನೇಕ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಕೊಡಗು ಬೇಗನೆ ಚೇತರಿಸಿಕೊಳ್ಳಲಿ ಎಂದು ಆಶಿಸಿದರು.
ವಿವಿಎನ್ ಶಿಕ್ಷಣ ಸಂಸ್ಥೆಯ ಕಾರ್ಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಅಂತರ್ ಕಾಲೇಜು ಸ್ಪರ್ಧೆ ಅವಶ್ಯಕ. ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳಲ್ಲದೆ, ಇತರ ಚಟುವಟಿಕೆಗಳಲ್ಲಿನ ಸಾಧನೆಯನ್ನು ಒರೆಗೆ ಹಚ್ಚುವ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ ಎಂದರು.
ವಿವಿಎನ್ ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಡಾ.ಕೆ. ಶೇಷಮೂರ್ತಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವಿಷ್ಯತ್ತನ್ನು ಕಟ್ಟಿಕೊಳ್ಳಲು ವೇದಿಕೆಯಾಗಲಿ ಎಂಬ ಉದ್ದೇಶದಿಂದ ಈ ಉತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಎಸ್.ಪ್ರಶಾಂತ್, ವಿವಿಎನ್ ಶಿಕ್ಷಣ ಸಂಸ್ಥೆಯ ಐ.ಎಸ್.ಪ್ರಸಾದ್, ಬಿ.ಎಸ್.ಲಕ್ಷಿಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.