ದೊಡ್ಡಬಳ್ಳಾಪುರ: ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಮೇಲಿನ ಹಿಂಸಾಚಾರ, ರೈತರ ಹತ್ಯೆ ಖಂಡಿಸಿ, ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. ನಗರದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ಗ್ರಾಮಾಂತರ, ಯುವ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್ ವಿಭಾಗದ ಪ್ರತಿನಿಧಿಗಳು ಒಳಗೊಂಡಂತೆ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಭಾಗವಹಿಸಿ, ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮಗಳಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ನ್ಯಾಯ ದೊರಕಿಸಿ ಕೊಡಿ: ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಬರ್ಬರ ಹತ್ಯೆ ನಡೆಲಾದ ಕೃತ್ಯ ತೀವ್ರ ಖಂಡನೀಯವಾಗಿದೆ.
ಇದನ್ನೂ ಓದಿ:- ಬಾಲಿವುಡ್ ಹಿಂದೆ ಬಿದ್ದಿಲ್ಲ | ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ
ಉತ್ತರ ಪ್ರದೇಶದ ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ, ಅವರ ಮಗ ಮತ್ತು ಸಂಬಂಧಿಗಳು ದುಷ್ಕೃತ್ಯದಲ್ಲಿ ಪಾಲ್ಗೊಂಡು ಗುಂಡಾಗಳಂತೆ ವರ್ತಿಸಿದ್ದಾರೆ. ದೇಶದಲ್ಲಿ 10 ತಿಂಗಳಿನಿಂದ ರೈತರು ಮಾರಕ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೂ, ಪ್ರಧಾನಿ ಮೋದಿ ರೈತರ ಬಳಿ ಬಂದಿಲ್ಲ.
ಈಗ ಉತ್ತರ ಪ್ರದೇಶದಲ್ಲಿ ರೈತರನ್ನು ಹತ್ಯೆ ಮಾಡಲಾಗಿದೆ. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ, ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮುಖಂಡ ಆಂಜನಮೂರ್ತಿ, ಆದಿತ್ಯ ನಾಗೇಶ್, ರೇವತಿ ಅನಂತ ರಾಮ…, ಅಖೀಲೇಶ್, ಬಿ.ಜಿ.ಹೇಮಂತರಾಜು, ಶ್ರೀನಗರ ಬಷೀರ್, ಪುಮಹೇಶ್ ಮತ್ತಿತರರು ಇದ್ದರು.