ಸಾಗರ: ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ತಿಂಗಳ ಬಾಣಂತಿಗೆ ಕಪಾಳಮೋಕ್ಷ ಮಾಡಿ, ಮಹಿಳೆ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡಿರುವ ತಾಯಿಮಗು ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್.ಸುಧೀಂದ್ರ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆ ಮೇಲೆ ಹಲ್ಲೆ ನಡೆಸಿದ ವೈದ್ಯ ಕರ್ತವ್ಯಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ಕನಿಷ್ಠ ಮಹಿಳೆ ಬಳಿ ಕ್ಷಮೆಯನ್ನು ಕೋರದೆ ನಾಪತ್ತೆಯಾಗಿರುವವರು ಕರ್ತವ್ಯಕ್ಕೆ ಹಾಜರಾದರೆ ಪ್ರತಿಭಟನೆ ನಡೆಸಲಾಗುತ್ತದೆ. ಶಾಸಕರು ತಕ್ಷಣ ಡಾ. ನಾಗೇಂದ್ರಪ್ಪ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ನಗರ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಯಾವುದೋ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ತಕ್ಷಣ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ತಾಯಿಮಗು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ಸಾಗರಕ್ಕೆ ಇಂತಹ ವೈದ್ಯರ ಅಗತ್ಯವಿಲ್ಲ ಎಂದರು.
ಹಲ್ಲೆಗೊಳಗಾದ ಮಹಿಳೆಯ ಪತಿ ಲೋಕೇಶ್ ಮಾತನಾಡಿ, ಅ. 1ಕ್ಕೆ ನನ್ನ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ತಾಯಿಮಗು ಆಸ್ಪತ್ರೆಗೆ ಸೇರಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಡಾ. ನಾಗೇಂದ್ರಪ್ಪ ಮೂರು ಸಾವಿರ ರೂ. ಪಡೆದಿದ್ದಾರೆ. ಆಪರೇಶನ್ ಮಾಡಿ ವೀಲ್‌ಚೇರ್‌ನಲ್ಲಿ ನನ್ನ ಪತ್ನಿಯನ್ನು ವಾರ್ಡ್‌ಗೆ ಕಳಿಸಲಾಯಿತು. ಸಾಕಷ್ಟು ಸಮಯದ ನಂತರ ಆಕೆಗೆ ಪ್ರಜ್ಞೆ ಬಂದಾಗ ಡಾ. ನಾಗೇಂದ್ರಪ್ಪ ಕೆನ್ನೆಗೆ ಬಲವಾಗಿ ಹೊಡೆದಿರುವುದನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ವೈದ್ಯರು ಹಾರಿಕೆ ಉತ್ತರ ನೀಡುತ್ತಾರೆ. ನನ್ನ ಪತ್ನಿ ನಾಲ್ಕು ತಿಂಗಳ ಬಾಣಂತಿಯಾಗಿದ್ದು, ಚಿಕ್ಕ ಮಗು ಇದೆ. ಬಾಣಂತಿ ಮೇಲೆ ಏಕೆ ಕೈಮಾಡಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲು ಮಾಡದೆ ನಮ್ಮನ್ನು ಸತಾಯಿಸುತ್ತಿದ್ದಾರೆ. ನನ್ನ ಪತ್ನಿಗೆ ಆಗಿರುವ ತೊಂದರೆ ಬೇರೆ ಯಾರಿಗೂ ಬರಬಾರದು. ವೈದ್ಯರ ವಿರುದ್ಧ ಸಾಕಷ್ಟು ದೂರುಗಳಿದ್ದು ತಕ್ಷಣ ಅವರನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.
ಮೊಗವೀರ ಜಿಹಾಜನ ಸಂಘದ ಅಧ್ಯಕ್ಷ ನಾಗರಾಜ ಬಿಲಗುಂಜಿ, ಹರೀಶ್ ಮಾತನಾಡಿದರು. ಗೋಷ್ಠಿಯಲ್ಲಿ ರಾಘವೇಂದ್ರ ಕಾಮತ್ ಹಾಜರಿದ್ದರು.