Advertisement

ಬೇಕಾದ ಸೌಲಭ್ಯಗಳಿವೆ, ಆದರೆ ತಜ್ಞ  ವೈದ್ಯರಿಲ್ಲ..!

06:00 AM Mar 11, 2018 | Team Udayavani |

ಶಿರ್ವ: ವೇಗವಾಗಿ ಬೆಳೆಯು ತ್ತಿರುವ ಶಿರ್ವ ಪೇಟೆಯಲ್ಲಿ  ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರವೇನೋ ಇದೆ. ಆದರೆ ಇಲ್ಲಿ ತಜ್ಞ ವೈದ್ಯರಿಲ್ಲದೇ ವೈದ್ಯಕೀಯ ಸೌಲಭ್ಯಗಳು ನಾಮ್‌ಕೆವಾಸ್ತೆ ಎಂಬಂತಾಗಿದೆ. 

Advertisement

ಉಡುಪಿ ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿರ್ವವೂ ಒಂದು. ಇದು ಮೇಲ್ದರ್ಜೆಗೇರಿ 17 ವರ್ಷಗಳೇ ಕಳೆದಿವೆ. ಆದರೆ ತಜ್ಞ ವೈದ್ಯರಿಲ್ಲದ್ದರಿಂದ ರೋಗಿಗಳು ಉಡುಪಿ ಅಥವಾ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. 

ತಜ್ಞ  ವೈದ್ಯರ 4 ಹುದ್ದೆ ಖಾಲಿ 
ಸೀನಿಯರ್‌ ಮೆಡಿಕಲ್‌ ಆಫೀಸರ್‌ ಸೇರಿದಂತೆ ಹೆರಿಗೆ ತಜ್ಞರು,ಮಕ್ಕಳ ತಜ್ಞರು ಹಾಗೂ ಅರಿವಳಿಕೆ ತಜ್ಞರ ಕೊರತೆ ಇಲ್ಲಿದೆ. ಒಟ್ಟು 52 ಹುದ್ದೆಗಳಲ್ಲಿ 13 ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ದಂತ ವೈದ್ಯಾಧಿಕಾರಿ, ಎನ್‌ಸಿಡಿ ವೈದ್ಯಾಧಿಕಾರಿ,  ಓರ್ವ ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನವೊಂದಕ್ಕೆ ಸುಮಾರು 70-80 ರೋಗಿಗಳನ್ನು ಪರೀಕ್ಷಿಸುವ ವೈದ್ಯಾಧಿಕಾರಿಗಳು ಇತರ ತರಬೇತಿ, ಪೋಸ್ಟ್‌ಮಾರ್ಟಂ, ಅಂಗನವಾಡಿ ಚೆಕ್‌ಆಪ್‌ ಕ್ಯಾಂಪ್‌ ಅಲ್ಲದೆ ಪಕ್ಕದ ಆಸ್ಪತ್ರೆ ಗಳಿಗೆ ನಿಯೋಜನೆಗೊಂಡಲ್ಲಿ ಇಲ್ಲಿನ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡಬೇಕಿದೆ.

ರಾತ್ರಿ ವೈದ್ಯರಿಲ್ಲ 
ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಚಿಕಿತ್ಸೆ ಸಿಗಬೇಕು. ಆದರೆ ವೈದ್ಯರ ಕೊರತೆಯಿಂದ ಇಲ್ಲಿ ಇದು ಸಾಧ್ಯವಾಗುವುದಿಲ್ಲ. ವಿವಿಧ ಸೌಕರ್ಯಗಳಿದ್ದರೂ 3 ಜನ ವೈದ್ಯರಿದ್ದರೆ ಹೊಂದಾಣಿಕೆ ಮಾಡಿಕೊಂಡು ರಾತ್ರಿಯೂ ಚಿಕಿತ್ಸೆ ನೀಡಬಹುದಾಗಿದೆ. ಶೀತಲೀಕೃತ ಶವಾಗಾರ ಬೇಕಿದೆ ಶಿರ್ವ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದೇಶದಲ್ಲಿರುವವರೇ ಹೆಚ್ಚಿದ್ದಾರೆ. ತುರ್ತು ಸಂದರ್ಭ ಇಲ್ಲಿ ಶೀತಲೀಕೃತ ಶವಾಗಾರಕ್ಕಾಗಿ ದೂರದ ಮಣಿಪಾಲ, ಉಡುಪಿ, ಕಾರ್ಕಳದ ಶವಾಗಾರ ಆಶ್ರಯಿಸಬೇಕಾಗಿದೆ. ಈ ಕೊರತೆ ನೀಗಿಸಲು ಸರಕಾರ ಮನಸ್ಸು ಮಾಡಬೇಕಿದೆ. 
  
ವಿದ್ಯುತ್‌ ಕಂಬಗಳ ಸ್ಥಳಾಂತರವಾಗಿಲ್ಲ
ಸಮುದಾಯ ಕೇಂದ್ರದ ಗೇಟಿನ ಬಳಿಯೇ ಇರುವ ವಿದ್ಯುತ್‌ ಕಂಬ ಸಮಸ್ಯೆ ಸೃಷ್ಟಿಸಿದೆ. ಇದರಿಂದ ಆ್ಯಂಬುಲೆನ್ಸ್‌ ತಿರುಗಲು ಕಷ್ಟವಾಗುತ್ತಿದೆ. ಈ ಬಗ್ಗೆ ವೈದ್ಯಾಧಿಕಾರಿಗಳು ದೂರು ನೀಡಿದ್ದರೂ ಮೆಸ್ಕಾಂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.  ಇದರೊಂದಿಗೆ ಪಕ್ಕದಲ್ಲೇ ಇರುವ ಅನಧಿಕೃತ ಗೂಡಂಗಡಿಗಳನ್ನೂ ತೆರವುಗೊಳಿಸಬೇಕಿದೆ.  

ಸೌಲಭ್ಯಗಳು
ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಆಸ್ಪತ್ರೆಯಾಗಿದ್ದು ಹೊರ ರೋಗಿಗಳ ಮತ್ತು ಒಳರೋಗಿಗಳ ವಿಭಾಗವನ್ನು ಹೊಂದಿದೆ. 6.5 ಲಕ್ಷ ರೂ. ದಾನಿಗಳಿಂದ ಪಡೆದು, ಸರಕಾರದ ಅನುದಾನದಿಂದ ನಿರ್ಮಿಸಿದ 3 ಟೆಕ್ನಿಶಿಯನ್‌ಗಳು ಇರುವ ಸುಸಜ್ಜಿತ ಪ್ರಯೋಗಾಲಯ, 2 ಟೆಕ್ನಿಶಿಯನ್‌ಗಳ ಎಕ್ಸ್‌ರೇ ವಿಭಾಗ, ದಂತ ಚಿಕಿತ್ಸಾ ವಿಭಾಗ, ಕ್ಯಾನ್ಸರ್‌ಮತ್ತು ಹಿರಿಯ ನಾಗರಿಕರಿಗೆ ಬೇಕಾದ ಬಿ.ಪಿ., ಸಕ್ಕರೆ ಕಾಯಿಲೆ ರೋಗಿಗಳಿಗೆ ಬೇಕಾದ ಚಿಕಿತ್ಸೆಗೆ ಎನ್‌ಸಿಡಿ ವಿಭಾಗದ ವೈದ್ಯರ ತಂಡ ಸೇವೆ ನೀಡುತ್ತಿದೆ.  ದಾನಿಗಳ ಸಹಕಾರದಿಂದ 25 ಕೆವಿಎ ಜನರೇಟರ್‌ ಸೌಲಭ್ಯ ಕಲ್ಪಿಸಲಾಗಿದೆ. ಆ್ಯಂಬುಲೆನ್ಸ್‌ ಸೇವೆಯೂ ಇದ್ದು, ಚಾಲಕರಿದ್ದಾರೆ. 

Advertisement

ಗುಣಮಟ್ಟದ ಚಿಕಿತ್ಸೆಗೆ ಹಿನ್ನಡೆ
ಗ್ರಾಮೀಣ ಪ್ರದೇಶದ ಸರ್ವ ಸುಸಜ್ಜಿತ ಆಸ್ಪತ್ರೆಯಾಗಿದ್ದು ಜನರು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರ ಕೊರತೆಯಿಂದ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಸ್ವಲ್ಪ ಹಿನ್ನಡೆಯಾಗಿದೆ
– ಡಾ|ಸಂತೋಷ್‌ ಕುಮಾರ್‌ ಬೈಲೂರು , ಆಡಳಿತ ವೈದ್ಯಾಧಿಕಾರಿ

– ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next