ಇಸ್ಲಾಮಾಬಾದ್: ಭಾರತದ ಜತೆಗೆ ಕಾಶ್ಮೀರ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ, ನುಸುಳುಕೋರರನ್ನು ದೇಶದ ಒಳಕ್ಕೆ ನುಗ್ಗಿಸುತ್ತಿರುವ ಪಾಕಿಸ್ತಾನ ಈಗ ವಿಶೇಷ ಸಮಸ್ಯೆ ಎದುರಿಸುತ್ತಿದೆ. ಆರ್ಥಿಕ ಸಮಸ್ಯೆಗೆ ತುತ್ತಾಗಿರುವ ಪಾಕಿಸ್ತಾನಕ್ಕೆ ಅಕ್ರಮ ವಲಸಿಗರ ಸಮಸ್ಯೆ ತಲೆನೋವಾಗಿದೆ. ಹೀಗಾಗಿ, ಆ ದೇಶದಲ್ಲಿರುವ ಅಫ್ಘಾನಿಸ್ತಾನಿ ಪ್ರಜೆಗಳು ಸೇರಿದಂತೆ ಹಲವು ರಾಷ್ಟ್ರಗಳ ನಾಗರಿಕರನ್ನು ಅಟ್ಟಲು ಕ್ರಮ ಕೈಗೊಂಡಿದೆ.
ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಘನ್ನರನ್ನು ದೇಶ ತೊರೆಯುವಂತೆ ಪಾಕ್ ಸರ್ಕಾರ ದಿನಾಂಕ ನಿಗದಿಪಡಿಸಿತ್ತು. ನಿಗದಿತ ಸಮಯ ಮೀರಿದರೂ ಅಲ್ಲೇ ನೆಲೆಸಿರುವ ಅಕ್ರಮ ವಲಸಿಗರನ್ನು ಬಂಧಿಸುತ್ತಿರುವ ಪಾಕ್ ಅಧಿಕಾರಿಗಳು, ಅಫ್ಘಾನಿಸ್ತಾನಕ್ಕೆ ಅವರನ್ನು ಗಡಿಪಾರು ಮಾಡುತ್ತಿದ್ದಾರೆ.
ಇನ್ನೊಂದೆಡೆ, ತಮ್ಮ ಸರದಿಗಾಗಿ ಸಾವಿರಾರು ಅಘ^ನ್ ವಲಸಿಗರು ಗಡಿಯಲ್ಲಿ ಕಾಯುತ್ತಿದ್ದಾರೆ. ಲಾರಿಗಳು, ಟ್ರಕ್‌ಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಅವರನ್ನು ಅಘಘಾನಿಸ್ತಾನಕ್ಕೆ ಕಳುಹಿಸುವ ಕೆಲಸ ಪ್ರಗತಿಯಲ್ಲಿದೆ. ಅಫ್ಘಾನಿಸ್ತಾನ ಸಂಪರ್ಕಿಸುವ ಪಾಕಿಸ್ತಾನದ ಚಾಮನ್ ಗಡಿಯಲ್ಲಿ 10,000ಕ್ಕೂ ಹೆಚ್ಚು ಅಕ್ರಮ ವಲಸಿಗರು ಬೀಡು ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಕ್ತ ದಾಖಲೆಗಳು, ವೀಸಾ ಇಲ್ಲದೆ ನೆಲೆಸಿರುವ ಅಕ್ರಮ ವಲಸಿಗರಿಗಾಗಿ ಪಾಕ್ ಅಧಿಕಾರಿಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕರಾಚಿ, ರಾವಲ್ಪಿಂಡಿ, ಬಲೂಚಿಸ್ತಾನ ಸೇರಿದಂತೆ ಪಾಕಿಸ್ತಾನದ ವಿವಿಧೆಡೆ ನೆಲೆಸಿರುವ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು, ಅವರನ್ನು ಸ್ವದೇಶಕ್ಕೆ ಕಳುಹಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.