Advertisement

ಗ್ರಾಮಗಳಲ್ಲಿ ಹೆಚ್ಚುತ್ತಿದೆ ಕುಡಿಯುವ ನೀರಿನ ಸಮಸ್ಯೆ

09:20 PM Mar 17, 2020 | Lakshmi GovindaRaj |

ಬಂಗಾರಪೇಟೆ: ತಾಲೂಕಿನಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಸರ್ಕಾರ ಈಗಾಗಲೇ ಬಂಗಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಂಗಾರಪೇಟೆಯಿಂದ ಕೆಜಿಎಫ್ ತಾಲೂಕು ವಿಂಗಡಣೆಯಾಗಿದ್ದರೂ, ಇನ್ನೂ ಕೆಲವು ಇಲಾಖೆಗಳು ವಿಂಗಡನೆಯಾಗಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಂಗಾರಪೇಟೆ ತಾಲೂಕಿನ ಇಲಾಖೆಗಳ ಅಧಿಕಾರಿಗಳೇ ನಿರ್ವಹಿಸಬೇಕಾಗಿದೆ.

ಎರಡೂ ತಾಲೂಕುಗಳಲ್ಲಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಸರ್ಕಾರ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದರೂ ಸಹ ಗ್ರಾಪಂ ಪಿಡಿಒಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ಬಂಗಾರ ಪೇಟೆಯಲ್ಲಿ 50 ಹಾಗೂ ಕೆಜಿಎಫ್ನಲ್ಲಿ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಸಂಬಂಧ 20 ಗ್ರಾಮಗಳಿಗೆ ರೈತರಿಂದ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೆಲ ಗ್ರಾಮಗಳಲ್ಲಿ ರೈತರಿಂದ ಪ್ರತಿತಿಂಗಳು 18 ಸಾವಿರ ನೀಡಿ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಟ್ಯಾಂಕರ್‌ನವರು ಒಂದು ಟ್ಯಾಂಕರ್‌ ನೀರು ಹಾಕಿ, 3 ಟ್ಯಾಂಕರ್‌ ಲೆಕ್ಕ ಬರೆಸುತ್ತಿದ್ದರಿಂದ, ಡೀಸಿಯಾಗಿದ್ದ ಮಂಜುನಾಥ್‌ ನೀರು ಸರಬರಾಜು ನಿಲ್ಲಿಸಿದ್ದರು. ಇದರಿಂದಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಟ್ಯಾಂಕರ್‌ನಿಂದ ನೀರು, ಜಿಲ್ಲಾಡಳಿ ಕಟ್ಟೆಚ್ಚರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್‌ಗಳಿಂದ ನೀರು ಹರಿಸಲು ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಮೊದಲಿಗೆ ಅದೇ ಗ್ರಾಮದ ರೈತರಿಂದ ಕುಡಿಯುವ ನೀರು ಹರಿಸಲು ಮೊದಲ ಅದ್ಯತೆ ನೀಡಿ ಕ್ರಮಕೈಗೊಳ್ಳುವುದು.

Advertisement

ರೈತರಿಂದ ನೀರು ಬಿಡಿಸಲು ಅವಕಾಶವಿಲ್ಲದ ಸಂದರ್ಭದಲ್ಲಿ ತಹಶೀಲ್ದಾರ್‌ರಿಗೆ ಆಯಾ ಗ್ರಾಪಂ ಪಿಡಿಒಗಳಿಂದ ದೂರು ನೀಡುವುದು. ನಂತರ ತಹಶೀಲ್ದಾರ್‌ರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಡೀಸಿ ಅನುಮತಿ ಪಡೆದ ನಂತರವೇ ಮೊಬೈಲ್‌ ಆ್ಯಪ್‌ನಿಂದ ಟ್ಯಾಂಕರ್‌ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂಬ ಸೂಚನೆಯಿದೆ. ಈ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒ ತುರ್ತು ಕ್ರಮಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳ ವಾದವಾಗಿದೆ.

ಕೊಳವೆ ಬಾವಿಗೆ ಅನುಮತಿಯಿಲ್ಲ: ತಾಲೂಕಿನಲ್ಲಿ ಎಲ್ಲೂ ಕುಡಿಯುವ ನೀರಿಗಾಗಿ ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಅನುಮತಿ ಇಲ್ಲದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದರೂ ಸರ್ಕಾರವಾಗಲೀ ಹಾಗೂ ಜಿಲ್ಲಾಡಳಿತವಾಗಲೀ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ವಿಶೇಷ ಯೋಜನೆಯೂನ್ನೂ ರೂಪಿಸದೇ ಮೌನವಾಗಿರುವುದರಿಂದ ಬಂಗಾರಪೇಟೆ ಕ್ಷೇತ್ರದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ವಂತ ಖರ್ಚಿನಿಂದಲೇ ಕೊಳವೆಬಾವಿಗಳನ್ನು ಕೊರೆಯಿಸುತ್ತಿದ್ದಾರೆ.

ಸತತ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದರೂ, ಜಿಲ್ಲಾಡಳಿತ ಕೊಳವೆಬಾವಿ ಕೊರೆಯಿಸಲು ಅನುದಾನ ಹಾಗು ಅನುಮತಿ ನೀಡಿಲ್ಲ. ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್‌.ಈಶ³ರಪ್ಪರಿಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 3 ಕೋಟಿ ಅನುದಾನ ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
-ಎಸ್‌.ಎನ್‌.ನಾರಾಯಣಸ್ವಾಮಿ, ಶಾಸಕರು, ಬಂಗಾರಪೇಟೆ

ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕುಗಳು ನನ್ನ ವ್ಯಾಪ್ತಿಗೆ ಬರುತ್ತವೆ. ಒಟ್ಟು 85 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಒಟ್ಟು 29 ಗ್ರಾಮಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದ್ಯ 20 ಕೊಳವೆ ಬಾವಿ ಕೊರೆಯಿಸಲು ಅನುಮತಿ ಸಿಕ್ಕಿದ್ದು, ಅಗತ್ಯವಿದ್ದಲ್ಲಿ ಕೊರೆಯಿಸಲು ಕ್ರಮಕೈಗೊಳ್ಳಲಾಗಿದೆ.
-ಎಚ್‌.ಡಿ.ಶೇಷಾದ್ರಿ, ಎಇಇ

ಪ್ರತಿ ವಾರ್ಡ್‌ನಲ್ಲಿ ನೀರಿನ ಸಮಸ್ಯೆಯಿದೆ. 40 ಕೊಳವೆ ಬಾವಿಗಳಿಗೆ ಅನುಮತಿಯಿದ್ದು, ಅನುದಾನ ಸಾಕಾಗುವುದಿಲ್ಲ. ಹೀಗಾಗಿ ನೀರಿಗಾಗಿ ಮಾತ್ರ ಹೆಚ್ಚುವರಿ 4 ಕೋಟಿಗೆ ಶಿಫಾರಸು ಮಾಡಲಾಗಿದೆ. ಅತ್ತಿಗಿರಿಕೊಪ್ಪ, ಹುಣಸನಹಳ್ಳಿ ಹಾಗೂ ಪಟ್ಟಣದ ದೊಡ್ಡಕೆರೆಯ ಸರಹದ್ದಿನಲ್ಲಿ 100 ಹೊಸ ಕೊಳವೆಬಾವಿಗೆ ಕ್ರಮಕೈಗೊಳ್ಳಲಾಗುತ್ತಿದೆ.
-ವಿ.ಶ್ರೀಧರ್‌, ಮುಖ್ಯಾಧಿಕಾರಿ, ಪುರಸಭೆ

* ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next