ಹುಬ್ಬಳ್ಳಿ: ಕೇಂದ್ರದ ವಿಶೇಷ ಅನುದಾನದಡಿ (ಸಿಎಸ್ ಎಫ್) ಬಿಡನಾಳ ಕ್ರಾಸ್‌ನಿಂದ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೆ ರಸ್ತೆ ಅಗಲೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಆಡಳಿತಾತ್ಮಕ ವೈಫಲ್ಯ ಹಾಗೂ ಅಸಹಕಾರದಿಂದ ಸಮಸ್ಯೆಯಾಗುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಡಿ) ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಈ ಮಾರ್ಗದ ಕೆಲವೆಡೆ ಯುಜಿಡಿ ಪೈಪ್‌ಲೈನ್ ಚಿಕ್ಕದಾಗಿವೆ. ಹೀಗಾಗಿ ಅದು ಕಟ್ಟಿಕೊಂಡು ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಕಾಮಗಾರಿ ಆರಂಭಕ್ಕೂ ಮುನ್ನವೇ ಪಾಲಿಕೆ ಆಯುಕ್ತರು ಈ ಕುರಿತು ಗಮನ ಹರಿಸಿ ಕ್ರಮಕೈಗೊಂಡಿದ್ದರೆ ಹಾಗೂ ವಿದ್ಯುತ್ ಕಂಬ ತೆರವು ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸಿಕೊಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಈಗ ಆಡಳಿತಾತ್ಮಕ ವೈಫಲ್ಯ ಹಾಗೂ ಇಲಾಖೆಗಳ ಅಧಿಕಾರಿಗಳ ನಡುವಿನ ಅಸಹಕಾರದಿಂದಾಗಿ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಮತ್ತೆ ಒಂದೆರಡು ವರ್ಷದಲ್ಲಿ ರಸ್ತೆ ಅಗೆಯುವ ಪ್ರಸಂಗ ಬರುತ್ತದೆ ಎಂದರು.
ರಸ್ತೆ ನಿರ್ಮಾಣದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ತುರ್ತು ನಿಧಿಯಡಿ ಯುಜಿಡಿ ಕಾಮಗಾರಿ ಸೇರಿದಂತೆ ಇನ್ನಿತರೆ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ತಿಳಿಸಲಾಗುವುದು. ಅದಕ್ಕೆ ಅವಶ್ಯವಾದ ಹಣವನ್ನು ವಿಶೇಷ ಅನುದಾನದಡಿ ಬಿಡುಗಡೆಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.
ಒಟ್ಟಾರೆ 54 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಸಿಸಿ ರಸ್ತೆಗೆ 36 ಕೋಟಿ ರೂ. ಟೆಂಡರ್ ಆಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ನ್ಯೂ ಇಂಗ್ಲಿಷ್ ಸ್ಕೂಲ್ ವೃತ್ತದಿಂದ ಕೆ.ಸಿ. ವೃತ್ತ ವರೆಗೆ ಭೂಸ್ವಾಧೀನ ಮಾಡಿಕೊಟ್ಟರೆ ಕಾಮಗಾರಿ ಬೇಗನೆ ಮುಗಿಯುತ್ತದೆ. ಆದರೆ ಕಾಮಗಾರಿ ವಿಳಂಬವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಬಿಜೆಪಿ ಮುಖಂಡರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಶಿವು ಮೆಣಸಿನಕಾಯಿ, ನಾರಾಯಣ ಜರತಾರಘರ, ಮಲ್ಲಿಕಾರ್ಜುನ ಸಾವುಕಾರ, ಶಂಕರಪ್ಪ ಛಬ್ಬಿ, ಎನ್‌ಎಚ್‌ಡಿ ಅಧಿಕಾರಿಗಳು, ಪಾಲಿಕೆ ವಲಯಾಧಿಕಾರಿ ಇತರರಿದ್ದರು.